ವ್ಯಾಟ್ಸ್ ಆ್ಯಪ್ ಪಾವತಿ ಸೇವೆ: ಸುಪ್ರೀಂ ಕೋರ್ಟ್‌ನಿಂದ ನೋಟಿಸ್

Update: 2018-08-27 15:50 GMT

ಹೊಸದಿಲ್ಲಿ, ಆ. 27: ವ್ಯಾಟ್ಸ್ ಆ್ಯಪ್ ಮೆಸೇಜಿಂಗ್ ಸೇವಾ ಸಂಸ್ಥೆ ಭಾರತದಲ್ಲಿ ಆರಂಭಿಸಿದ ಪಾವತಿ ಸೇವೆ (ಪೇಮೆಂಟ್ ಸಿಸ್ಟಮ್) ಆರ್‌ಬಿಐ ನಿಯಮಗಳನ್ನು ಸಂಪೂರ್ಣವಾಗಿ ಅನುಸರಿಸದೇ ಇದ್ದಲ್ಲಿ ನಿರ್ಬಂಧಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಮನವಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರಕಾರ ಹಾಗೂ ವ್ಯಾಟ್ಸ್ ಆ್ಯಪ್‌ಗೆ ನೋಟಿಸು ಜಾರಿ ಮಾಡಿದೆ.

ನ್ಯಾಯಮೂರ್ತಿ ರೋಹಿಂಗ್ಟನ್ ಫಾಲಿ ನಾರಿಮನ್ ಹಾಗೂ ನ್ಯಾಯಮೂರ್ತಿ ಇಂದು ಮಲ್ಹೋತ್ರ ಒಳಗೊಂಡ ಪೀಠ, ವ್ಯಾಟ್ಸ್ ಆ್ಯಪ್, ಕಾನೂನು ಹಾಗೂ ನ್ಯಾಯ ಸಚಿವಾಲಯ, ಹಣಕಾಸು ಸಚಿವಾಲಯ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯಗಳಿಗೆ ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. ದೂರು ನಿರ್ವಹಣಾ ಅಧಿಕಾರಿಯ ಕಡ್ಡಾಯ ನೇಮಕ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಿಧಿಸಿದ ‘ನಿಮ್ಮ ಗ್ರಾಹಕರನ್ನು ಅರಿತುಕೊಳ್ಳಿ’ (ಕೆವೈಸಿ) ಸೇರಿದಂತೆ ಭಾರತದ ಇತರ ಕಾನೂನುಗಳನ್ನು ವ್ಯಾಟ್ಸ್‌ಆ್ಯಪ್ ಅನುಸರಿಸುತ್ತಿಲ್ಲ. ಆದುದುರಿಂದ ವ್ಯಾಟ್ಸ್ ಆ್ಯಪ್‌ಗೆ ಹಣಕಾಸು ನಿರ್ವಹಣಾ ಸೇವೆ ಮುಂದುವರಿಸಲು ಅವಕಾಶ ನೀಡಬಾರದು ಎಂದು ದೂರುದಾರ ‘ಸೆಂಟರ್ ಫಾರ್ ಅಕೌಂಟೆಬಿಲಿಟಿ ಹಾಗೂ ಸಿಸ್ಟಮೆಟಿಕ್ ಚೇಂಜ್’ ಪರವಾಗಿ ಹಾಜರಾಗಿದ್ದ ನ್ಯಾಯವಾದಿ ವಿರಾಗ್ ಗುಪ್ತಾ ಹೇಳಿದರು.

ಫೇಸ್‌ಬುಕ್ ಹಾಗೂ ಗೂಗಲ್‌ನಂತಹ ಕಂಪೆನಿಗಳು ಭಾರತದ ಬಳಕೆದಾರರಿಗಾಗಿ ದೂರು ನಿರ್ವಹಣಾ ಅಧಿಕಾರಿಗಳನ್ನು ನಿಯೋಜಿಸಿದೆ. ಆದರೆ, ವ್ಯಾಟ್ಸ್ ಆ್ಯಪ್ ನಿಯೋಜಿಸಿಲ್ಲ ಎಂದು ಮನವಿಯಲ್ಲಿ ಹೇಳಲಾಗಿದೆ. ವ್ಯಾಟ್ಸ್‌ಆ್ಯಪ್ ಉತ್ತರದಾಯಿಯಾಗಲು ಅದು ಭಾರತದ ಕಾನೂನನ್ನು ಅನುಸರಿಸಲು ನಿರ್ದೇಶಿಸಬೇಕು ಹಾಗೂ ಗ್ರಾಹಕರ ದೂರುಗಳನ್ನು ಪರಿಹರಿಸಲು ಅಧಿಕಾರಿ ನಿಯೋಜಿಸಬೇಕು. ಅಲ್ಲದೆ, ತನಿಖಾ ಸಂಸ್ಥೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಹೇಳಿದೆ. ಭಾರತದಲ್ಲಿ ಕಚೇರಿ ಹಾಗೂ ಸರ್ವರ್ ಹೊಂದಿರದ ವಿದೇಶಿ ಕಂಪೆನಿ ವ್ಯಾಟ್ಸ್ ಆ್ಯಪ್ ಇಲ್ಲಿ ಪಾವತಿ ನಿರ್ವಹಣೆ ನಡೆಸುತ್ತಿದೆ. ಆದುದರಿಂದ ಕಚೇರಿ ಹೊಂದುವುದು ವ್ಯಾಟ್ಸ್ ಆ್ಯಪ್‌ನ ಬದ್ಧತೆಯಾಗಿದೆ. ವ್ಯಾಟ್ಸ್ ಆ್ಯಪ್ ಭಾರತದಲ್ಲಿ 200 ದಶಲಕ್ಷ ಬಳಕೆದಾರರನ್ನು ಹೊಂದಿದೆ, ಸುಮಾರು 1 ಲಕ್ಷ ಜನರು ಪಾವತಿ ಸೇವೆ ಬಳಸುತ್ತಿದ್ದಾರೆ. ಇದು ಫೇಸ್‌ಬುಕ್ ಮಾಲಕತ್ವದ ಕಂಪೆನಿಯ ಬಹು ದೊಡ್ಡ ಆದಾಯವಾಗಿದೆ ಎಂದು ಮನವಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News