ಕ್ರೈಸ್ತ ಬೆಸ್ತನ ನೆರವು ನಿರಾಕರಿಸಿದ ಮೇಲ್ಜಾತಿಯ ಹಿಂದೂಗಳು: ಆರೋಪ

Update: 2018-08-27 16:28 GMT

ತಿರುವನಂತಪುರ, ಆ. 27: ಕೇರಳ ನೆರೆಯ ಸಂದರ್ಭ ಹಲವು ಮೇಲ್ಜಾತಿ ಹಿಂದೂಗಳು ಕ್ರೈಸ್ತರ ನೆರವು ನಿರಾಕರಿಸಿದ ಅಮಾನವೀಯ ಘಟನೆ ಈಗ ಬೆಳಕಿಗೆ ಬಂದಿದೆ. ನೆರೆಯಲ್ಲಿ ಸಿಲುಕಿದ್ದ ಒಂದೇ ಕುಟುಂಬದ 17 ಸದಸ್ಯರನ್ನು ರಕ್ಷಿಸಲು ಬೆಸ್ತ ಮರಿಯನ್ ಜಾರ್ಜ್ (47) ಕೊಲ್ಲಂ ನಗರದಲ್ಲಿರುವ ಮನೆಯೊಂದಕ್ಕೆ ತೆರಳಿದ್ದರು. ‘‘ನಾನು ನಿಮ್ಮ ರಕ್ಷಣೆಗೆ ಬಂದಿದ್ದೇನೆ’’ ಎಂದು ಜಾರ್ಜ್ ಹೇಳಿದರು. ಆಗ ಅವರು, ‘‘ನೀವು ಕ್ರಿಶ್ಚಿಯನರೇ?’’ ಎಂದು ಪ್ರಶ್ನಿಸಿದ್ದರು.

‘‘ನಾನು ಕ್ರಿಶ್ಚಿಯನ್’’ ಎಂದು ಪ್ರತಿಕ್ರಿಯಿಸಿದಾಗ ಅವರು ದೋಣಿ ಏರಲು ನಿರಾಕರಿಸಿದರು ಹಾಗೂ ತಮ್ಮನ್ನು ಇಲ್ಲೇ ಬಿಟ್ಟುಬಿಡುವಂತೆ ಹೇಳಿದ್ದರು ಎಂದು ಜಾರ್ಜ್ ಆರೋಪಿಸಿದ್ದಾರೆ.

ಅತಂತ್ರ ಸ್ಥಿತಿಯಲ್ಲಿ ಇದ್ದರೂ ಹಿಂದೂಗಳಲ್ಲಿ ಮೇಲ್ಜಾತಿಗೆ ಸೇರಿದ ಬ್ರಾಹ್ಮಣರ ಕುಟುಂಬ ಜಾರ್ಜ್‌ನ ದೋಣಿಯಲ್ಲಿ ತೆರಳಲು ನಿರಾಕರಿಸಿತ್ತು.

 ಐದು ಗಂಟೆಗಳ ಬಳಿಕ ತಾನು ಅದೇ ಸ್ಥಳಕ್ಕೆ ಮತ್ತೆ ಹೋದೆ. ಅದೇ ಕುಟುಂಬ ನೆರವಿಗೆ ಯಾಚಿಸಿತು. ತಾನು ದೋಣಿಯನ್ನು ಅವರ ಸಮೀಪಕ್ಕೆ ಕೊಂಡೊಯ್ದೆ. ಆದರೆ, ತಾನು ಅವರನ್ನು ಮುಟ್ಟದೇ ಇದ್ದರೆ ಮಾತ್ರ ದೋಣಿ ಹತ್ತುವುದಾಗಿ ಹೇಳಿದ್ದರು ಎಂದು ಜಾರ್ಜ್ ತಿಳಿಸಿದ್ದಾರೆ.

ದೋಣಿಗೆ ಹಾನಿಯಾಗುವ ವರೆಗೆ ಜಾರ್ಜ್ ಸುಮಾರು 150 ಮಂದಿಯನ್ನು ರಕ್ಷಿಸಿದ್ದಾರೆ. ರಕ್ಷಣೆಗೆ ಪ್ರಯತ್ನಿಸಿದಾಗ ಹಲವರಿಂದ ಅವಮಾನಕ್ಕೆ ಒಳಗಾಗಿದ್ದೇವೆ ಎಂದು ಇತರ ಹಲವು ಬೆಸ್ತರು ಕೂಡ ತಿಳಿಸಿದ್ದಾರೆ.

ರಾಜ್ಯ ಸರಕಾರದ ದಾಖಲೆ ಪ್ರಕಾರ ಸುಮಾರು 3 ಸಾವಿರ ಜನರು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News