ಮಹಾಮೈತ್ರಿಕೂಟ ರಚನೆಯ ಕನಸು ಕೈಗೂಡೀತೇ?

Update: 2018-08-27 18:35 GMT

ಮುಂದಿನ ಲೋಕಸಭಾ ಚುನಾವಣೆಯ ಹೊತ್ತಿಗೆ ಭಾಜಪದ ವಿರುದ್ಧ ಮಹಾಮೈತ್ರಿಕೂಟವೊಂದು ರಚನೆಯಾಗಬಲ್ಲದೆಂಬ ನಂಬಿಕೆ ದಿನದಿನಕ್ಕೂ ಕ್ಷೀಣವಾಗುತ್ತಿದೆ. ಕೇವಲ ಮೂರು ತಿಂಗಳ ಹಿಂದೆ ಈ ವಿಷಯವಾಗಿ ಭಾಜಪ ವಿರೋಧಿ ವರ್ಗಕ್ಕಿದ್ದ ನಂಬಿಕೆಯೊಂದು ಕುಸಿಯಲು ಸ್ವತ: ಭಾಜಪೇತರ ಪಕ್ಷಗಳೇ ಕಾರಣವಾಗುಗುತ್ತಿರುವುದು ವಿಪರ್ಯಾಸ.

 ಕೆಲವೇ ತಿಂಗಳುಗಳ ಹಿಂದೆ ಉತ್ತರ ಪ್ರದೇಶ, ಬಿಹಾರ ಮತ್ತು ರಾಜಸ್ಥಾನಗಳಲ್ಲಿನ ಕೆಲವು ಲೋಕಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಗಳಲ್ಲಿ ಭಾಜಪವನ್ನು ವಿರೋಧ ಪಕ್ಷಗಳು ಸೋಲಿಸಿದಾಗ ವಿರೋಧಿ ಪಾಳಯದಲ್ಲಿ ಮಹಾಘಟಬಂಧನ್ ಬಗೆಗೆ ಒಂದು ಆಶಾಕಿರಣ ಮೂಡಿತ್ತು. ಇದರಲ್ಲಿ ರಾಜಸ್ಥಾನ ಚುನಾವಣೆಯಲ್ಲಿ ಕಾಂಗ್ರೆಸ್ ಒಂಟಿಯಾಗಿ ಭಾಜಪವನ್ನು ಸೋಲಿಸಿದ್ದರೆ ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವರ ಪಕ್ಷಕ್ಕೆ ಕಾಂಗ್ರೆಸ್ ಬೆಂಬಲ ನೀಡಿತ್ತು. ಇನ್ನು ಉತ್ತರಪ್ರದೇಶದ ವಿಷಯಕ್ಕೆ ಬಂದರೆ ಸಾಂಪ್ರ ದಾಯಿಕ ಎದುರಾಳಿಗಳಾದ ಕುಮಾರಿ ಮಾಯಾವತಿಯವರ ಬಹುಜನಪಕ್ಷ ಮತ್ತು ಅಖಿಲೇಶ್ ಯಾದವರ ಸಮಾಜವಾದಿ ಪಕ್ಷಗಳು ಅನಧಿಕೃತ ಮೈತ್ರಿಯ ಮೂಲಕ ಭಾಜಪವನ್ನು ಸೋಲಿಸಿ ಮೈತ್ರಿಯ ಬಲವನ್ನು ತೋರಿಸಿದ್ದವು. ಭಾಜಪ ವಿರೋಧಿ ಮತಗಳು ಚದುರಿಹೋಗದಂತೆ ನೋಡಿಕೊಂಡರೆ ಭಾಜಪವನ್ನು ಸೋಲಿಸುವುದು ಅಸಾಧ್ಯವೇನಲ್ಲ ಎಂಬ ಭಾವನೆ ಎಲ್ಲರಲ್ಲೂ ಮೂಡಿದ್ದು ಸತ್ಯ.

ಯಾಕೆಂದರೆ ಒಂದು ಕಾಲದಲ್ಲಿ ಇವತ್ತೇನು ಭಾಜಪ ಇದೆಯೋ ಆ ಸ್ಥಿತಿಯಲ್ಲಿ ಕಾಂಗ್ರೆಸ್ ಇತ್ತು. ಕಾಂಗ್ರೆಸ್ ವಿರೋಧಿ ಮತಗಳು ಒಟ್ಟಾದಾಗೆಲ್ಲ ಕಾಂಗ್ರೆಸನ್ನು ಸೋಲಿಸಬಹುದಿತ್ತು. ಇವತ್ತು ಪರಿಸ್ಥಿತಿ ಉಲ್ಟಾ ಆಗಿದೆ. ಕಾಂಗ್ರೆಸ್‌ನ ಸ್ಥಾನಕ್ಕೆ ಭಾಜಪ ಬಂದು ನಿಂತಿದೆ. ಕಳೆದೊಂದು ದಶಕದಲ್ಲಿ ಬಲಿಷ್ಠ ರಾಷ್ಟ್ರೀಯ ಪಕ್ಷವಾಗಿ ಬೆಳೆದು ನಿಂತಿದ್ದು ಅದನ್ನು ಸೋಲಿಸಲು ಚದುರಿ ಹೋಗಿರುವ ವಿಪಕ್ಷಗಳಿಂದ ಸಾಧ್ಯವಿಲ್ಲ ಎಂಬುದು ವಾಸ್ತವ. ಭಾಜಪ ವಿರೋಧಿ ಮತಗಳನ್ನು ಹಂಚಿಹೋಗದಂತೆ ತಡೆದರೆ ಮಾತ್ರ ತಮ್ಮ ಗೆಲುವು ಸಾಧ್ಯವೆಂಬ ಸತ್ಯ ಬಹುತೇಕ ಎಲ್ಲ ಪಕ್ಷಗಳಿಗೂ ಮನವರಿಕೆಯಾದಂತಿದೆ. ಈ ಅಂಶವನ್ನು ಮನಗಂಡೇ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳದ ಮೈತ್ರಿಕೂಟ ರಚನೆಯಾದಾಗ ಕುಮಾರಸ್ವಾಮಿಯವರ ಪ್ರಮಾಣವಚನ ಸಮಾರಂಭಕ್ಕೆ ದೇಶದ ಹಲವು ಪ್ರಾದೇಶಿಕ ಪಕ್ಷಗಳ ನಾಯಕರನ್ನು ಆಹ್ವಾನಿಸಿ ಒಂದೇ ವೇದಿಕೆಯಲ್ಲಿ ಅವರನ್ನು ತರಲು ಮಾಜಿಪ್ರಧಾನಮಂತ್ರಿ ದೇವೇಗೌಡರು ಪ್ರಯತ್ನಿಸಿದ್ದು. ಆದರಿಲ್ಲಿ ಸಮಸ್ಯೆ ಇರುವುದು ಇದನ್ನು ಕಾರ್ಯರೂಪಕ್ಕಿಳಿಸುವಲ್ಲಿ ವಿರೋಧಪಕ್ಷಗಳು ತಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶಿಸದೆ ಇರುವುದರಲ್ಲಿ.ಲೋಕಸಭೆಯಲ್ಲಿ ಬಹುಮತ ಹೊಂದಿರುವ ಭಾಜಪಕ್ಕೆ ಇವತ್ತಿಗೂ ರಾಜ್ಯಸಭೆಯಲ್ಲಿ ಬಹುಮತ ಇಲ್ಲದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ ಮೊನ್ನೆ ನಡೆದ ರಾಜ್ಯಸಭೆಯ ಉಪಸಭಾಪತಿ ಚುನಾವಣೆಗೆ ಭಾರೀ ಮಹತ್ವ ಬಂದಿತ್ತು.

ವಿರೋಧಪಕ್ಷಗಳ ಅಭ್ಯರ್ಥಿಯೇ ಉಪಸಭಾಪತಿಯಾಗಿ ಆಯ್ಕೆಯಾಗಬಹುದೆಂಬ ನಿರೀಕ್ಷೆ ಇತ್ತು. ಆದರೆ ಆಗಿದ್ದೇ ಬೇರೆ. ಸರಿಯಾದ ಸಿದ್ಧ್ದತೆ ಮಾಡಿಕೊಳ್ಳದೆ ಮತ್ತು ಸಮಯೋಚಿತವಾಗಿ ಸಭೆ ಸೇರಿ ಒಂದು ನಿರ್ಣಯಕ್ಕೆ ಬರಲಾಗದ ವಿರೋಧಪಕ್ಷಗಳು ಈ ಅವಕಾಶವನ್ನು ಹಾಳು ಮಾಡಿಕೊಂಡು ಎನ್‌ಡಿಎಗೆ ಈ ಸ್ಥಾನ ಸಿಗುವುದಕ್ಕೆ ಕಾರಣವಾದವು.ಉಪಸಭಾಪತಿ ಸ್ಥಾನಕ್ಕೆ ವಿರೋಧ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿಯೇ ವಿರೋಧಪಕ್ಷಗಳು ಸೋಲನ್ನಪ್ಪಿದ್ದವು. ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ಒಮ್ಮತಕ್ಕೆ ಬರಲಾಗದ ವಿರೋಧಪಕ್ಷಗಳು ಕಡೆಗಳಿಗೆಯಲ್ಲಿ ಕಾಂಗ್ರೆಸ್‌ನ ಹರಿಪ್ರಸಾದ್ ಅವರನ್ನು ಆಯ್ಕೆ ಮಾಡಿದವು. ಆದರೆ ಭಾಜಪ ಅಭ್ಯರ್ಥಿಯ ಆಯ್ಕೆಯ ವಿಚಾರದಲ್ಲಿ ಒಂದು ಹೆಜ್ಜೆ ಕೆಳಗಿಳಿದು ಬಂದು ಮಿತ್ರ ಪಕ್ಷವಾದ ನಿತೀಶ್ ಕುಮಾರ್‌ರ ಸಂಯುಕ್ತ ಜನತಾದಳಕ್ಕೆ ಈ ಸ್ಥಾನ ಬಿಟ್ಟು ಕೊಟ್ಟಿತು. ಅಲ್ಲಿಗೆ ಎನ್‌ಡಿಎ ಮೈತ್ರಿಕೂಟದ ದೊಡ್ಡ ರಾಷ್ಟ್ರೀಯಪಕ್ಷವಾಗಿ ತಾನು ಅಗತ್ಯ ಬಿದ್ದರೆ ಮಿತ್ರ ಪಕ್ಷಗಳಿಗೆ ಉನ್ನತ ಸ್ಥಾನ ನೀಡಲು ಹಿಂಜರಿಯುವುದಿಲ್ಲವೆಂಬ ಸಂದೇಶವನ್ನು ಭಾಜಪ ತನ್ನ ಮಿತ್ರ ಪಕ್ಷಗಳಿಗೆ ಸ್ಪಷ್ಟವಾಗಿ ರವಾನಿಸಿತ್ತು. ಜೊತೆಗೆ ಎರಡೂ ಪಾಳಯಕ್ಕೆ ಸೇರದ ತೆಲಂಗಾಣ ರಾಷ್ಟ್ರೀಯ ಸಮಿತಿ, ಬಿಜು ಜನತಾದಳ, ಎಐಎಡಿಎಂಕೆ, ವೈಎಸ್‌ಆರ್ ಕಾಂಗ್ರೆಸ್ ಮುಂತಾದ ಪಕ್ಷಗಳನ್ನು ಸಂಪರ್ಕಿಸಿದ ಭಾಜಪ ಅವರ ಬೆಂಬಲಪಡೆಯುವಲ್ಲಿ ಯಶಸ್ವಿಯಾಯಿತು. ಸ್ವತ: ಪ್ರಧಾನಮಂತ್ರಿಯವರೇ ನವೀನ್ ಪಟ್ನಾಯಕ್, ಜಗನ್ ರೆಡ್ಡಿ ಮತ್ತು ಚಂದ್ರಶೇಖರ್ ರಾವ್ ಅವರೊಂದಿಗೆ ಮಾತಾಡಿ ತಮ್ಮ ಪರ ಮತ ಚಲಾಯಿಸುವಂತೆ ಮನವೊಲಿಸುವಲ್ಲಿ ಸಫಲರಾದರು. ಆದರೆ ವಿರೋಧಪಕ್ಷಗಳನ್ನು ಒಗ್ಗೂಡಿಸಿ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಹೊಣೆಗಾರಿಕೆಯಿದ್ದ ಕಾಂಗ್ರೆಸ್ ತನ್ನ ಎಂದಿನ ನಿಧಾನಗತಿಯ ರಾಜಕಾರಣವನ್ನು ಪ್ರದರ್ಶಿಸಿ ವೈಫಲ್ಯ ಕಂಡಿತು.

ಈ ರಾಜ್ಯಸಭಾ ಚುನಾವಣೆಗಳಿಂದ ನಮಗೆ ಎರಡು ಅಂಶಗಳು ಅರ್ಥವಾಗುತ್ತವೆ. ಒಂದು ಉಪಚುನಾವಣೆಗಳಲ್ಲಿ ತಾನು ಸೋಲುತ್ತಿರುವುದು ಮತ್ತು 2014ರ ತನ್ನ ಜನಪ್ರಿಯತೆ ಕಡಿಮೆಯಾಗುತ್ತಿರುವುದು ಭಾಜಪ ಮತ್ತು ಪ್ರಧಾನಮಂತ್ರಿಗಳಿಗೆ ಅರ್ಥವಾಗುತ್ತಿದೆ. ಹೀಗಾಗಿ ಕಳೆದ ನಾಲ್ಕು ವರ್ಷಗಳಿಂದ ಯಾವ ತನ್ನ ಎನ್‌ಡಿಎ ಮಿತ್ರಪಕ್ಷಗಳನ್ನು ನಿರ್ಲಕ್ಷಿಸುತ್ತ ಬಂದಿತ್ತೊ ಆ ಪಕ್ಷಗಳನ್ನು ಮತ್ತೆ ಓಲೈಸುವ ಕಾರ್ಯದಲ್ಲಿ ತೊಡಗಿದೆ. ಹೀಗಾಗಿಯೇ ಅದು ಉಪಸಭಾಪತಿ ಸ್ಥಾನಕ್ಕೆ ತನ್ನ ಪಕ್ಷದ ವ್ಯಕ್ತಿಯ ಬದಲಿಗೆ ಸಂಯುಕ್ತ ಜನತಾದಳದ ವ್ಯಕ್ತಿಯೋರ್ವನನ್ನು ಅಭ್ಯರ್ಥಿಯನ್ನಾಗಿಸಿದ್ದು. ಇದರ ಜೊತೆಗೆ ದಲಿತರ ವಿಚಾರದಲ್ಲಿ ಮುನಿಸಿಕೊಂಡಿದ್ದ ರಾಮ್ ವಿಲಾಸ್ ಪಾಸ್ವಾನ್ ಅವರ ಜೊತೆ ಮಾತಾಡಿ ಅವರು ವಿರೋಧಿ ಪಾಳಯಕ್ಕೆ ಹೋಗದಂತೆ ತಡೆಯಲಾಯಿತು. ಹಾಗೆಯೇ ಯಾವ ಬಣದಲ್ಲೂ ನಿರ್ದಿಷ್ಟ ವಾಗಿ ಗುರುತಿಸಿಕೊಳ್ಳದೆ ಕಾಯುತ್ತಿದ್ದ ಬಿಜುಜನತಾದಳ, ಟಿಆರ್‌ಎಸ್, ವೈಎಸ್‌ಆರ್ ಜೊತೆಗೂ ಸಂಧಾನ ಮಾಡಿಕೊಳ್ಳಲಾಯಿತು. ಅಷ್ಟಲ್ಲದೆ ಮೊನ್ನೆ ತಾನೇ ಕಾಶ್ಮೀರದಲ್ಲಿ ಮೈತ್ರಿ ಮುರಿದುಕೊಂಡು ಪಿಡಿಪಿ ಪಕ್ಷದ ನಾಯಕಿಯನ್ನು ಸಹ ತಮ್ಮ ಪರ ಮತ ಚಲಾಯಿಸುವಂತೆ ಮಾಡಲು ಭಾಜಪ ಯಶಸ್ವಿಯಾಯಿತು. ಯಾವೆಲ್ಲ ಪಕ್ಷಗಳು ಎನ್‌ಡಿಎ ಮೈತ್ರಿಕೂಟದಲ್ಲಿ ಇರಲಿಲ್ಲವೊ ಅಂತಹ ಪಕ್ಷಗಳನ್ನು ತನ್ನ ಕಡೆಗೆ ಸೆಳೆದುಕೊಂಡ ಭಾಜಪ ತನ್ನ ಎನ್‌ಡಿಎ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ವಿರೋಧಪಕ್ಷಗಳಿಗೆ ಮುಖಭಂಗ ಮಾಡಿತು.

 ತಮ್ಮ ಎಂದಿನ ಪ್ರತಿಷ್ಠೆಗಳನ್ನು ಕೈ ಬಿಡದ ವಿರೋಧಪಕ್ಷಗಳು ತಮ್ಮ ಅಭ್ಯಥಿಯನ್ನು ಗೆಲ್ಲಿಸಿಕೊಳ್ಳಲು ವಿಫಲವಾದವು. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಭಾಜಪ ನೇತೃತ್ವದ ಎನ್‌ಡಿಎಯನ್ನು ಸೋಲಿಸಲು ವಿರೋಧಪಕ್ಷಗಳು ಒಂದೇ ವೇದಿಕೆಯಲ್ಲಿ ಬರುವುದು ಕಷ್ಟವೆಂದು ಹೇಳಲಾಗುತ್ತಿದೆ. ಇದಕ್ಕೆ ಹಲವು ಕಾರಣಗಳಿವೆ. ಸ್ಥಳೀಯ ಮಟ್ಟದಲ್ಲಿ ಅವುಗಳು ತಮ್ಮೆಳಗೆ ನಡೆಸುತ್ತಿರುವ ಅಧಿಕಾರಕ್ಕಾಗಿನ ಹೋರಾಟಗಳು ರಾಷ್ಟಮಟ್ಟದಲ್ಲಿ ಅವನ್ನು ಒಂದಾಗಲು ಬಿಡುವುದು ಅಸಾಧ್ಯವೆನ್ನುವ ಸ್ಥಿತಿ ಇದೆ. ಉದಾಹರಣೆಗೆ ಪಶ್ಚಿಮಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಮತ್ತು ಎಡಪಕ್ಷಗಳು ಒಂದಾಗುವುದು ಕಷ್ಟವಿದೆ. ಹಾಗೆಯೇ ಕೇರಳದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು, ಉತ್ತರಪ್ರದೇಶದಲ್ಲಿ ಬಹುಜನ ಪಕ್ಷ ಮತ್ತು ಸಮಾಜವಾದಿ ಪಕ್ಷಗಳು ಕಾಂಗ್ರೆಸನ್ನು ತಮ್ಮ ಜೊತೆ ಸೇರಿಸಿಕೊಳ್ಳುತ್ತವೆಯೇ ಕಾದು ನೋಡಬೇಕಿದೆ. ಇನ್ನು ದಿಲ್ಲಿಗೆ ಬಂದರೆ ಆಮ್ ಆದ್ಮಿ ಪಕ್ಷದ ಜೊತೆ ಕಾಂಗ್ರೆಸ್ ಮಾತನಾಡುವುದೇ ಕಷ್ಟವಾದ ಸ್ಥಿತಿ ಇದೆ ಈ ಎಲ್ಲ ವಿರೋಧಾಭಾಸಗಳ ನಡುವೆಯೂ ಎನ್‌ಡಿಎಗೆ ಪರ್ಯಾಯ ವಾದ ಮೈತ್ರಿಕೂಟವೊಂದು ರಚನೆಯಾದರೆ ಭಾಜಪವನ್ನು ಮೂಲೆಗುಂಪು ಮಾಡಲು ಸಾಧ್ಯ. ಇಂಡಿಯಾದ ರಾಜಕಾರಣವೇ ಅಸಾಧ್ಯಗಳನ್ನು ಸಾಧ್ಯವಾಗಿಸುವ ಮೈದಾನವಾಗಿದ್ದು, ಕಾದು ನೋಡುವುದೊಂದೇ ನಮಗುಳಿದಿರುವ ಏಕೈಕ ದಾರಿ.

Similar News