ಕೇರಳ ನೆರೆ ಪರಿಹಾರ ನಿಧಿಗೆ ದೇಣಿಗೆ ನೀಡಿ: ಭ್ರಷ್ಟಾಚಾರ ಆರೋಪಿಗಳಿಗೆ ನ್ಯಾಯಾಧೀಶರ ಸೂಚನೆ !

Update: 2018-08-28 08:22 GMT

ಚಂಡೀಗಢ, ಆ.28: ಪ್ರವಾಹಪೀಡಿತ ಕೇರಳಕ್ಕೆ ದೇಶದ ವಿವಿಧೆಡೆಗಳಿಂದ ನೆರವಿನ ಮಹಾಪೂರ ಹರಿದುಬರುತ್ತಿರುವ ಮಧ್ಯೆಯೇ, ಇಲ್ಲಿನ ಪಂಚಕುಲದ ಸಿಬಿಐ ವಿಶೇಷ ನ್ಯಾಯಾಧೀಶರು, ತಲಾ 15 ಸಾವಿರ ರೂಪಾಯಿಯನ್ನು ಕೇರಳ ಪ್ರವಾಹ ಪರಿಹಾರ ನಿಧಿಗೆ ನೀಡುವಂತೆ ಮೂವರು ಭ್ರಷ್ಟಾಚಾರ ಆರೋಪಿಗಳಿಗೆ ಸೂಚನೆ ನೀಡಿರುವ ಅಪರೂಪದ ಘಟನೆ ನಡೆದಿದೆ.

ಸುಂಕವನ್ನು ಕಡಿಮೆ ಮಾಡುವ ಸಂಬಂಧ ಪರಿಶೀಲನೆಗೆ ಒಳಪಟ್ಟಿದ್ದ ಕಂಪನಿಯೊಂದರಿಂದ ಮೂರು ಲಕ್ಷ ರೂಪಾಯಿ ಲಂಚ ಪಡೆದ ಅರೋಪದಲ್ಲಿ ಕೇಂದ್ರೀಯ ಅಬಕಾರಿ ಮತ್ತು ಲೆಕ್ಕಪತ್ರ ಪರಿಶೋಧನಾ ಇಲಾಖೆಯ ಅಧೀಕ್ಷಕರಾದ ಅನಿಲ್ ಕುಮಾರ್ ಮತ್ತು ಅಜಯ್ ಸಿಂಗ್ ಹಾಗೂ ಮಾಜಿ ಇನ್‍ಸ್ಪೆಕ್ಟರ್ ರವೀಂದ್ರ ದಾಹಿಯಾ ಅವರನ್ನು ಫೆಬ್ರುವರಿ 27ರಂದು ಬಂಧಿಸಲಾಗಿತ್ತು.

ಈ ಪ್ರಕರಣದ ವಿಚಾರಣೆಗೆ ಹಾಜರಾಗದ ಮೂವರು ಆರೋಪಿಗಳಿಗೆ ಈ ಸಂಬಂಧ ಸೂಚನೆ ನೀಡಿದ ವಿಶೇಷ ಸಿಬಿಐ ನ್ಯಾಯಾಧೀಶ ಜಗದೀಪ್ ಸಿಂಗ್ ಅವರು, ಹಣವನ್ನು ಪರಿಹಾರ ನಿಧಿಗೆ ನೀಡಿ, ಮುಂದಿನ ವಿಚಾರಣೆ ನಡೆಯುವ ದಿನವಾದ ಅಕ್ಟೋಬರ್ 1ರ ಮುನ್ನ ರಸೀದಿಯನ್ನು ಪ್ರಸ್ತುತಪಡಿಸಬೇಕು ಎಂದು ಹೇಳಿದ್ದಾರೆ.

ಇಬ್ಬರು ಸಾಕ್ಷಿಗಳನ್ನು ಸರ್ಕಾರಿ ವಕೀಲರು ಮೇ 25ರಂದು ಹಾಜರುಪಡಿಸಿದರೂ, ಆರೋಪಿಗಳ ಪರ ವಕೀಲರು ಪಾಟಿ ಸವಾಲಿಗೆ ಹಾಜರಿರಲಿಲ್ಲ. ಸೋಮವಾರ ಆರೋಪಿಗಳ ಪರ ವಕೀಲರು, ಸಾಕ್ಷಿಗಳನ್ನು ಹಾಜರುಪಡಿಸುವಂತೆ ಸರ್ಕಾರಿ ವಕೀಲರಿಗೆ ಸೂಚಿಸಲು ಕೋರಿದರು. ಆದರೆ ವಕೀಲರ ಮುಷ್ಕರದಿಂದಾಗಿ ಇದು ಸಾಧ್ಯವಾಗಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News