ಸಂತ್ರಸ್ತೆಯ ಕವನ ಉಲ್ಲೇಖಿಸಿ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

Update: 2018-08-28 17:58 GMT

ಹೊಸದಿಲ್ಲಿ, ಆ.28: ಸಾಯುವ ಕೆಲವೇ ಗಂಟೆಗಳ ಮುನ್ನ ಸಂತ್ರಸ್ತೆ ಬರೆದ ಕವನವನ್ನು ಉಲ್ಲೇಖಿಸಿ, ದಿಲ್ಲಿ ಕೋರ್ಟ್ ಆಕೆಯ ಹಂತಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಅಪರೂಪದ ಘಟನೆ ವರದಿಯಾಗಿದೆ.

ಶ್ರೇಯಾ ಶರ್ಮಾ (17) ಎಂಬ ಯುವತಿಯನ್ನು ಆಕೆಯ ಹಿರಿಯ ವಿದ್ಯಾರ್ಥಿ ಸಾರ್ಥಕ್ ಕಪೂರ್ (19) ಎಂಬಾತ ರೋಹಿಣಿಯ ಸೆಕ್ಟರ್ 17ರಲ್ಲಿ ಕಳೆದ ವರ್ಷದ ಆಗಸ್ಟ್ 16ರಂದು ಹತ್ಯೆ ಮಾಡಿದ್ದ.

ಶ್ರೇಯಾ ಶರ್ಮಾ ನಾಪತ್ತೆಯಾದ ಬಗ್ಗೆ ಆಕೆಯ ಪಾಲಕರು ದೂರು ನೀಡಿದ್ದರು. ಶೋಧ ನಡೆಸಿದಾಗ ಆಕೆಯ ಮೃತದೇಹ ಆಕೆಯ ಮನೆ ಪಕ್ಕದಲ್ಲಿ ಪತ್ತೆಯಾಗಿತ್ತು. ಆರೋಪಿಗೆ ಶಿಕ್ಷೆ ವಿಧಿಸಿದ 16ನೇ ಸೆಷನ್ಸ್ ನ್ಯಾಯಾಧೀಶ ವೀರೇಂದ್ರ ಕುಮಾರ್ ಬನ್ಸಾಲ್ ಅವರು, ಸಾಯುವ ಮುನ್ನ ಯುವತಿ ಬರೆದಿದ್ದ "ಜಿಲ್ಟೆಡ್ ಲವರ್" ಎಂಬ ಕವಿತೆಯನ್ನು ಸಾಕ್ಷಿಯಾಗಿ ಪರಿಗಣಿಸಿದ್ದು, ತೀರ್ಪಿನಲ್ಲಿ ಕವಿತೆಯ ಸಾಲನ್ನು ಉಲ್ಲೇಖಿಸಿದ್ದಾರೆ.

ಶ್ರೇಯಾಳನ್ನು ಮರಳಿ ಪಡೆಯುವ ಯತ್ನ ವಿಫಲವಾದಾಗ ಆರೋಪಿ ಕಪೂರ್ ಆಕೆಯನ್ನು ಹತ್ಯೆ ಮಾಡಲು ನಿರ್ಧರಿಸಿದ ಎಂದು ತೀರ್ಪಿನಲ್ಲಿ ಹೇಳಿದ್ದಾರೆ. ಯುವತಿಯ ಪಾಲಕರು ದೂರು ನೀಡಿ ಹುಡುಕಾಡುತ್ತಿದ್ದಾಗ ಕಪೂರ್ ತಪ್ಪೊಪ್ಪಿಕೊಂಡು ಶರಣಾಗಿದ್ದ. ಹತ್ಯೆಯಾಗುವ ಕೆಲವೇ ಗಂಟೆಗಳ ಮುನ್ನ ಯುವತಿ ತಾನು ಬರೆದಿದ್ದ ಕವನವನ್ನು ಸಾರ್ಥಕ್‍ಗೆ ನೀಡಲು ಆತನ ಮನೆಗೆ ತೆರಳಿದ್ದಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News