ಯುಟ್ಯೂಬ್ ನೋಡಿ ಜಾವೆಲಿನ್ ಕಲಿತ ರೈತನ ಮಗ ಏಷ್ಯಾಡ್ ಚಾಂಪಿಯನ್

Update: 2018-08-29 06:57 GMT

ಏಷ್ಯನ್ ಗೇಮ್ಸ್ ನಲ್ಲಿ ನೀರಜ್ ಛೋಪ್ರಾ ಭಾರತದ ಪರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಮೊಟ್ಟಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸೋಮವಾರ ತಮ್ಮ ಮೂರನೇ ಪ್ರಯತ್ನದಲ್ಲಿ 88.06 ಮೀಟರ್ ದೂರ ಜಾವೆಲಿನ್ ಎಸೆದು, ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಮುರಿಯುವ ಮೂಲಕ 20 ವರ್ಷದ ಯುವಕ ಇತಿಹಾಸ ಬರೆದರು.

ಛೋಪ್ರಾ ಗೆದ್ದ ಚಿನ್ನದ ಪದಕ ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ  ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತ ಪಡೆದ ಎರಡನೇ ಪದಕ. ಇದಕ್ಕೂ ಮುನ್ನ 1982ರ ಹೊಸದಿಲ್ಲಿ ಏಷ್ಯಾಡ್‍ನಲ್ಲಿ ಗುರುತೇಜ್ ಸಿಂಗ್ ಕಂಚಿನ ಪದಕ ಗೆದ್ದಿದ್ದರು.

82.22 ಮೀಟರ್ ದೂರ ಜಾವೆಲಿನ್ ಎಸೆದ ಚೀನಾದ ಲ್ಯೂ ಕ್ವಿಝೆನ್, ಛೋಪ್ರಾಗಿಂತ ಬಹಳ ಹಿಂದುಳಿದು ಬೆಳ್ಳಿಗೆ ತೃಪ್ತಿಪಟ್ಟುಕೊಂಡರು. ಪಾಕಿಸ್ತಾನದ ಅರ್ಷದ್ ನದೀಮ್ 80.75 ಮೀಟರ್‍ನೊಂದಿಗೆ ಕಂಚಿನ ಪದಕ ಗೆದ್ದರು.

ಕಾಮನ್‍ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್ ಚಾಂಪಿಯನ್ ಸ್ಪರ್ಧೆಯಲ್ಲಿ ಸಂಪೂರ್ಣ ಪಾರಮ್ಯ ಮೆರೆದು, ತಮ್ಮದೇ ಹೆಸರಿನಲ್ಲಿದ್ದ 87.43 ಮೀಟರ್ ದಾಖಲೆಯನ್ನು ಉತ್ತಮಪಡಿಸಿಕೊಂಡಿದ್ದರು. ಕಳೆದ ಮೇ ತಿಂಗಳಲ್ಲಿ ದೋಹಾದಲ್ಲಿ ನಡೆದ ಡೈಮಂಡ್ ಲೀಗ್ ಸರಣಿಯ ಮೊದಲ ಲೆಗ್‍ನಲ್ಲಿ ಈ ದಾಖಲೆಗೆ ಭಾಜನರಾಗಿದ್ದರು. ಪ್ರಸಕ್ತ ಋತುವಿನಲ್ಲಿ ಯಾವ ಅಥ್ಲೀಟ್ ಕೂಡಾ 85 ಮೀಟರ್‍ಗಿಂತಲೂ ಹೆಚ್ಚು ದೂರಕ್ಕೆ ಜಾವೆಲಿನ್ ಎಸೆಯಲು ಸಾಧ್ಯವಾಗಿಲ್ಲ ಎನ್ನುವುದು ವಿಶೇಷ.

ಹರ್ಯಾಣದ ಪಾಣಿಪತ್ ಬಳಿಯ ಖಾಂದ್ರಾದ ರೈತ ಕುಟುಂಬದಲ್ಲಿ ಹುಟ್ಟಿದ ಛೋಪ್ರಾ, ಗ್ರಾಮದಲ್ಲಿ ಜಾವೆಲಿನ್ ಥ್ರೋ ಅಭ್ಯಾಸ ಮಾಡುವ ಹಿರಿಯರಿಂದ ಉತ್ತೇಜಿತರಾದವರು. 2011ರಿಂದ ನಾಲ್ಕು ವರ್ಷ ಕಾಲ ಪಂಚಕುಲದಲ್ಲಿರುವ ಭಾರತದ ಕ್ರೀಡಾ ಪ್ರಾಧಿಕಾರದ ತಾವು ದೇವಿ ಲಾಲ್ ಸ್ಟೇಡಿಯಂನಲ್ಲಿ ನೀರಜ್ ತಮ್ಮ ಕೌಶಲ ವೃದ್ಧಿಸಿಕೊಂಡರು. ವಿವಿಧ ಹಂತಗಳಲ್ಲಿ ತಮ್ಮ ವಯೋಮಿತಿಯ ಸ್ಪರ್ಧೆಗಳಲ್ಲಿ ದಾಖಲೆಗಳನ್ನು ಬರೆಯುವ ಮೂಲಕ ಈ ಯುವಕ ರಾಷ್ಟ್ರದ ಗಮನ ಸೆಳೆದರು.

ಪೋಲಂಡ್‍ನ ಬೈಡ್‍ಗೋಸೆಸ್‍ನಲ್ಲಿ 2016ರ ಜುಲೈನಲ್ಲಿ ನಡೆದ ಐಎಎಎಪ್ ವಿಶ್ವ 20ರ ವಯೋಮಿತಿಯ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನಲ್ಲಿ ಜ್ಯೂನಿಯರ್ ವಿಶ್ವದಾಖಲೆ ಸ್ಥಾಪಿಸಿ, ಇಡೀ ದೇಶ ಹೆಮ್ಮೆ ಪಡುವಂತೆ ಮಾಡಿದರು. ಒಂದು ವರ್ಷ ಬಳಿಕ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ ಗೆದ್ದರು. ಭುವನೇಶ್ವರದ ಕಳಿಂಗ ಸ್ಟೇಡಿಯಂನಲ್ಲಿ ತೇವದಿಂದ ಕೂಡಿದ್ದ ವಾತಾವರಣದಲ್ಲಿ ಅಂತಿಮ ಎಸೆತದಲ್ಲಿ ರೋಮಾಂಚಕ ಸಾಧನೆ ಮಾಡಿದರು.

2018ರ ಏಪ್ರಿಲ್‍ನಲ್ಲಿ ನಡೆದ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದು, ಈ ಸಾಧನೆ ಮಾಡಿದ ಭಾರತದ ಮೊಟ್ಟಮೊದಲ ಜಾವೆಲಿನ್ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕಾಮನ್‍ವೆಲ್ತ್‍ನ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟ ನಾಲ್ಕನೇ ಅಥ್ಲೀಟ್ ಎಂಬ ಗೌರವಕ್ಕೂ ಅವರು ಪಾತ್ರರಾಗಿದ್ದರು. ಮಿಲ್ಖಾಸಿಂಗ್ (440 ಯಾರ್ಡ್, ಕಾರ್ಡಿಫ್, 1958), ಕೃಷ್ಣಾ ಪೂನಿಯಾ (ಮಹಿಳಾ ಡಿಸ್ಕಸ್, ದೆಹಲಿ, 2010) ಮತ್ತು ವಿಕಾಸ್ ಗೌಡ (ಡಿಸ್ಕಸ್, ಗ್ಲಾಸ್ಗೊ, 2014) ಈ ಮುನ್ನ ಚಿನ್ನದ ಸಾಧನೆ ಮಾಡಿದ್ದರು.

ನೀರಜ್ ಅವರ ಮಾನಸಿಕ ದೃಢತೆ ಅವರ ಸರ್ವಶ್ರೇಷ್ಠ ಬಲ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಲವು ವಾರಗಳಿಂದ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಖಾತ್ರಿಯಾಗಿ ಗೆದ್ದುಕೊಡಬಲ್ಲ ಅಥ್ಲೀಟ್ ಎಂಬ ನಿರೀಕ್ಷೆ ಮೂಡಿಸಿದ್ದರು. ಇದಕ್ಕೆ ಮುಖ್ಯ ಕಾರಣ, ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಟ್ರಿನಿಡಾಡ್ ಮತ್ತು ಟೊಬಾಗೊದ ಕೆಶೋರ್ನ್ ವಾಕೋಟ್ ಅವರು ಗೋಲ್ಡ್‍ಕೋಸ್ಟ್ ಕೂಟದಲ್ಲಿ ಪಾಲ್ಗೊಳ್ಳಲಿಲ್ಲ ಹಾಗೂ ಕೀನ್ಯಾದ ಜೂಲಿಯನ್ ಯೆಗೊ ಫೈನಲ್‍ಗೆ ಅರ್ಹತೆಯನ್ನೇ ಪಡೆಯಲಿಲ್ಲ. ಇದು ಈ ಯುವ ಅಥ್ಲೀಟ್ ಮೇಲಿನ ಒತ್ತಡ ಹೆಚ್ಚಿಸಿತ್ತು.

ಮೊದಲ ಪ್ರಯತ್ನದಲ್ಲೇ ಎದುರಾಳಿಗಳಿಗಿಂತ ಬಲುದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಛೋಪ್ರಾ ಗಮನ ಸೆಳೆದಿದ್ದರು. 85.5 ಮೀಟರ್ ಎಸೆದ ಅವರು, ಉಳಿದ ಸ್ಪರ್ಧಿಗಳು ಬೆಳ್ಳಿ ಹಾಗೂ ಕಂಚಿನ ಪದಕಗಳಿಗಷ್ಟೇ ಹೋರಾಡುವಂಥ ಪರಿಸ್ಥಿತಿ ಸೃಷ್ಟಿಸಿದರು. ಅವರ ನಾಲ್ಕೂ ಎಸೆತಗಳು 83.48 ಮೀಟರ್‍ಗಿಂತ ಅಧಿಕವಾಗಿದ್ದು, ಉಳಿದ 11 ಮಂದಿ ಸ್ಪರ್ಧಿಗಳು ತಮ್ಮ ಕೈಗೆಟುಕುವ ಸಾಧನೆಯಲ್ಲ ಎಂದು ಕೈಚೆಲ್ಲುವಂತಾಗಿತ್ತು.

ಮಹತ್ವದ ಅಂಶವೆಂದರೆ ಅವರು ವೈಫಲ್ಯದಿಂದ ಸಾಕಷ್ಟು ಕಲಿತಿರುವುದು.

2017ರ ಆಗಸ್ಟ್‍ನಲ್ಲಿ ಲಂಡನ್‍ನಲ್ಲಿ ನಡೆದ ಐಎಎಎಫ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಫೈನಲ್ ತಲುಪಲು ಅವರು ವಿಫಲರಾದದ್ದು ಅವರನ್ನು ಸ್ವಲ್ಪಕಾಲದವರೆಗೆ ಖಿನ್ನರನ್ನಾಗಿಸಿತ್ತು. ಅರ್ಹತೆಗೆ 83 ಮೀಟರ್‍ನ ಮಾನದಂಡ ನಿಗದಿಪಡಿಸಿದ್ದರೆ, ನೀರಜ್ 82.26 ಮೀಟರ್ ಮಾತ್ರ ಎಸೆದು ಹೊರಗುಳಿಯಬೇಕಾಯಿತು. ತಮ್ಮ ಸಹ ಅಥ್ಲೀಟ್ ದೇವೇಂದ್ರ ಸಿಂಗ್ ಕಾಂಗ್ ಅವರು ವಿಶ್ವ ಚಾಂಪಿಯನ್‍ಶಿಪ್ ಜಾವೆಲಿನ್ ಫೈನಲ್‍ಗೆ ಅರ್ಹತೆ ಪಡೆದ ಮೊಟ್ಟಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದ್ದನ್ನು ಮೂಕಪ್ರೇಕ್ಷಕರಾಗಿ ನೋಡಬೇಕಾಯಿತು.

ಆ ಬಳಿಕ ಅವರು ತಮ್ಮ ಮುಂದಿನ ಹಾದಿಯನ್ನು ಜಾಗರೂಕತೆಯಿಂದ ಕಂಡುಕೊಂಡರು. ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಜತೆ ಕುಳಿತು, ಗುರಿಯನ್ನು ನಿಗದಿಪಡಿಸಿಕೊಂಡು, ಅತ್ಯುತ್ತಮ ತರಬೇತಿಯನ್ನು ಆರಿಸಿಕೊಂಡರು. ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ತಾಜಾತನ ಉಳಿಸಿಕೊಂಡು, 2020ರ ಟೋಕಿಯೊ ಒಲಿಂಪಿಕ್ಸ್‍ನಲ್ಲಿ ಪರಿಣಾಮ ಬೀರಲು ಸಿದ್ಧತೆ ನಡೆಸತೊಡಗಿದರು.

ತಮ್ಮ ಸಹ ಸ್ಪರ್ಧಿಗಳಿಗಿಂತ ಒಂದು ಹೆಜ್ಜೆ ಮುಂದಿರುವ ಸಲುವಾಗಿ, 90 ಮೀಟರ್ ಮಟ್ಟಕ್ಕೆ ಅವರು ಪ್ರಗತಿ ಸಾಧಿಸಬೇಕಾಗಿದೆ. ರಾಷ್ಟ್ರೀಯ ಶಿಬಿರಗಳಲ್ಲಿ ತರಬೇತಿ ಪಡೆಯುವುದಕ್ಕಿಂತ ಜರ್ಮನಿಯ ಆಫೆನ್‍ಬರ್ಗ್‍ನಲ್ಲಿ ವೆರ್ನೆರ್ ಡೇನಿಯಲ್ಸ್ ಬಳಿ ತರಬೇತಿ ಪಡೆಯುವುದು ಸೂಕ್ತ ಎನ್ನುವುದು ಅವರ ಅನಿಸಿಕೆಯಾದರೆ, ಅದಕ್ಕೆ ಉತ್ತೇಜನ ನೀಡಿ, ಮುಂದಿನ ಎರಡು ವರ್ಷಗಳಲ್ಲಿ ಸೂಕ್ತ ನೆಲೆ ಕಂಡುಕೊಳ್ಳಲು ಅವಕಾಶ ಮಾಡಿಕೊಡಬೇಕು.

ಈ ಅದ್ಭುತ ಅಥ್ಲೀಟ್ ಜಾವೆಲಿನ್ ಎಸೆತವನ್ನು ಕಲಿತದ್ದು ಜಾನ್ ಝೆಲೆನ್ಸಿಯವರ ಯೂಟ್ಯೂಬ್ ವಿಡಿಯೊ ವೀಕ್ಷಿಸುವ ಮೂಲಕ ಎನ್ನುವುದನ್ನು ಮರೆಯುವಂತಿಲ್ಲ. ಅವರು ಇಷ್ಟಪಡುವ ಹಲವು ಮಂದಿ ಕೋಚ್‍ಗಳಿದ್ದಾರೆ. ಪೋಲಂಡ್‍ನ ಸ್ಪಲಾದಲ್ಲಿ ಆಸ್ಟ್ರೇಲಿಯನ್ ಕೋಚ್ ಗ್ಯಾರಿ ಕಲ್ವೆರ್ಟ್ ಅವರಿಂದ ತರಬೇತಿ ಪಡೆದಿದ್ದಾರೆ. ಬಳಿಕ ನೀರಜ್ ತಮ್ಮ ಕೌಶಲ ಸುಧಾರಣೆಗಾಗಿ ಜರ್ಮನಿಗೆ ತೆರಳಿದರು.

ಕೃಪೆ: thequint.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News