ಕೇರಳ: ಶಾಲೆ ಕಾಲೇಜುಗಳು ಪುನರಾರಂಭ

Update: 2018-08-29 16:18 GMT
ಸಾಂದರ್ಭಿಕ ಚಿತ್ರ

ತಿರುವನಂತಪುರಂ, ಆ.29: ವಿನಾಶಕಾರಿ ಜಲಪ್ರಳಯದಿಂದ ತತ್ತರಿಸಿಹೋಗಿದ್ದ ಕೇರಳದಲ್ಲಿ ಸುಮಾರು 15 ದಿನ ಮುಚ್ಚಿದ್ದ ಶಿಕ್ಷಣ ಸಂಸ್ಥೆಗಳು ಬುಧವಾರ ಪುನರಾರಂಭಗೊಂಡಿದೆ. ಕೇರಳದಲ್ಲಿ ಭಾರೀ ಮಳೆ ಹಾಗೂ ನೆರೆಯಿಂದಾಗಿ ಶಾಲಾ ಕಾಲೇಜುಗಳಿಗೆ ಓಣಂ ರಜೆಯನ್ನು ವಿಸ್ತರಿಸಲಾಗಿತ್ತು. ಅಲ್ಲದೆ ನೆರೆ ಸಂತ್ರಸ್ತರಿಗೆ ಶಾಲಾ ಕಾಲೇಜುಗಳಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಿದ್ದು ಶಿಕ್ಷಣ ಸಂಸ್ಥೆಗಳನ್ನು ಪರಿಹಾರ ಶಿಬಿರಗಳಾಗಿ ಪರಿವರ್ತಿಸಲಾಗಿತ್ತು.

ನೆರೆ ಪರಿಸ್ಥಿತಿ ಸುಧಾರಿಸಿ ಪರಿಹಾರ ಶಿಬಿರಗಳಲ್ಲಿ ನೆಲೆಸಿದ್ದ ಸಂತ್ರಸ್ತರು ತಮ್ಮ ಮನೆಗಳಿಗೆ ತೆರಳಿದ ಬಳಿಕ ಶಾಲಾ ಕಾಲೇಜುಗಳ ಆವರಣವನ್ನು ಶುಚಿಗೊಳಿಸಲಾಗಿದೆ. ಕೆಲವು ಪ್ರದೇಶಗಳಲ್ಲಿ ನೆರೆನೀರು ನುಗ್ಗಿ ಪೀಠೋಪಕರಣ ಹಾಗೂ ಪುಸ್ತಕಗಳು ಹಾನಿಗೊಳಗಾಗಿರುವ ಶಿಕ್ಷಣ ಸಂಸ್ಥೆಗಳಲ್ಲಿ ಸೂಕ್ತ ವ್ಯವಸ್ಥೆ ಮಾಡಲು ಸ್ವಯಂಸೇವಕರು ಹಾಗೂ ಕಾರ್ಯಕರ್ತರು ಶ್ರಮಿಸಿದ್ದಾರೆ. ಬುಧವಾರ ಶಾಲಾ ಕಾಲೇಜುಗಳ ಪುನರಾರಂಭ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು. ಶಾಲೆಗಳಲ್ಲಿ ಶಿಕ್ಷಕರು ಹಾಡಿನ ಮೂಲಕ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಬಳಿಕ ಕಿರು ಅವಧಿಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು ಎಂದು ಅಳಪುಝ ಜಿಲ್ಲೆಯ ಸರಕಾರಿ ಶಾಲೆಯೊಂದರ ಶಿಕ್ಷಕಿ ತಿಳಿಸಿದ್ದಾರೆ. ಕೇರಳದಲ್ಲಿ ನೆರೆಹಾವಳಿಯಿಂದ ಕನಿಷ್ಟ 650 ಶಾಲೆಗಳಿಗೆ ಹಾನಿಯಾಗಿದೆ ಎಂದು ರಾಜ್ಯದ ಶಿಕ್ಷಣ ಸಚಿವ ಪ್ರೊ ಸಿ.ರವೀಂದ್ರನಾಥ್ ತಿಳಿಸಿದ್ದಾರೆ.

ಕೆಲವು ಶಾಲೆಗಳಲ್ಲಿ ಇನ್ನೂ ನೆರೆಸಂತ್ರಸ್ತರು ನೆಲೆಸಿರುವ ಕಾರಣ ಆ ಶಾಲೆಗಳು ಬುಧವಾರ ಪುನರಾರಂಭಗೊಂಡಿಲ್ಲ. ಸೆ.3ರಿಂದ ಎಲ್ಲಾ ಶಾಲೆಗಳೂ ಪುನರಾರಂಭಗೊಳ್ಳುವ ನಿರೀಕ್ಷೆಯಿದೆ. ನೆರೆಬಾಧಿತ ಪ್ರದೇಶಗಳಲ್ಲಿ ಇನ್ನೂ ಸುಮಾರು 1.97 ಲಕ್ಷ ಮಂದಿ ಪರಿಹಾರ ಶಿಬಿರಗಳಲ್ಲಿ ನೆಲೆಸಿದ್ದಾರೆ ಎಂದವರು ತಿಳಿಸಿದ್ದಾರೆ. ನೆರೆಯಿಂದ ಪುಸ್ತಕ ಹಾಗೂ ಸಮವಸ್ತ್ರಗಳನ್ನು ಕಳೆದುಕೊಂಡಿರುವ ವಿದ್ಯಾರ್ಥಿಗಳಿಗೆ ಹೊಸ ಪುಸ್ತಕ, ಸಮವಸ್ತ್ರ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಈ ಪ್ರಾಕೃತಿಕ ವಿಕೋಪದಲ್ಲಿ ಬದುಕುಳಿದ ಮಕ್ಕಳು ನಮ್ಮ ನಿರೀಕ್ಷೆಯ ಪ್ರತಿನಿಧಿಗಳಾಗಿದ್ದಾರೆ ಎಂದು ವಿಜಯನ್ ಟ್ವೀಟ್ ಮಾಡಿದ್ದಾರೆ.

ಕಾಸರಗೋಡಿನಲ್ಲಿ 450ಕ್ಕೂ ಅಧಿಕ ಖಾಸಗಿ ಬಸ್ ನಿರ್ವಾಹಕರು ತಮ್ಮ ಒಂದು ದಿನದ ಸಂಗ್ರಹವನ್ನು ನೆರೆ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದಾರೆ. ರಾಜ್ಯದ ಹಲವೆಡೆ ಬೃಹತ್ ಸ್ವಚ್ಛತಾ ಅಭಿಯಾನ ಆರಂಭವಾಗಿದೆ. ಮಂಗಳವಾರ 28,757 ಮನೆಗಳು, ಆಸ್ಪತ್ರೆ, ಸರಕಾರಿ ಕಚೇರಿ ಮುಂತಾದ 288 ಸಾರ್ವಜನಿಕ ಸಂಸ್ಥೆಗಳು, 52 ಶಾಲೆಗಳು, ಮಾರುಕಟ್ಟೆ, ಬಸ್ಸು ನಿಲ್ದಾಣ ಮುಂತಾದ 122 ಸ್ಥಳಗಳನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ 60 ಸಾವಿರಕ್ಕೂ ಹೆಚ್ಚು ಸ್ವಯಂಸೇವಕರು ಸಹಕರಿಸಿದ್ದರು ಎಂದು ವಿತ್ತಸಚಿವ ಥಾಮಸ್ ಇಸಾಕ್ ತಿಳಿಸಿದ್ದಾರೆ.

ಈ ಮಧ್ಯೆ, ಕೇಂದ್ರದ ಸಹಾಯಕ ವಿತ್ತಸಚಿವ ಪಿ.ರಾಧಾಕೃಷ್ಣನ್ ನೇತೃತ್ವದ ಉನ್ನತ ಮಟ್ಟದ ನಿಯೋಗವು ಕೇರಳದಲ್ಲಿ ಬ್ಯಾಂಕ್‌ಗಳು ಹಾಗೂ ವಿಮಾ ಸಂಸ್ಥೆಗಳು ಕೈಗೊಂಡಿರುವ ಪರಿಹಾರ ಹಾಗೂ ಪುನರ್ವಸತಿ ಕಾರ್ಯದ ಪರಿಶೀಲನೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ. ಹೆಚ್ಚುವರಿ ಕಾರ್ಯದರ್ಶಿ ದೇಬಾಶಿಷ್ ಪಾಂಡ, ಆರ್ಥಿಕ ಸಲಹೆಗಾರ ಎನ್.ಶ್ರೀನಿವಾಸ ರಾವ್ ಸೇರಿದಂತೆ ಕೇಂದ್ರ ಸರಕಾರದ ಅಧಿಕಾರಿಗಳು ನಿಯೋಗದಲ್ಲಿರುತ್ತಾರೆ. ವಿವಿಧ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳ, ವಿಮಾ ಕಂಪೆನಿಗಳ , ನಬಾರ್ಡ್‌ನ ಆಡಳಿತ ನಿರ್ದೇಶಕರು ಹಾಗೂ ಅಧ್ಯಕ್ಷರು, ರಾಜ್ಯ ಸರಕಾರದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ನೆರೆಬಾಧಿತ ಪ್ರದೇಶಗಳಲ್ಲಿ ಬ್ಯಾಂಕ್‌ನ ಶಾಖೆ ಹಾಗೂ ಎಟಿಎಂಗಳ ಕಾರ್ಯವನ್ನು ಪುನರಾರಂಭಿಸುವುದು, ಹರಿದು ಹೋಗಿರುವ ಅಥವಾ ದೋಷಪೂರಿತ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವುದು, ಸಾಲ ಮರುಪಾವತಿ ಅವಧಿ ವಿಸ್ತರಣೆ ಇತ್ಯಾದಿ ಪ್ರಕ್ರಿಯೆಗಳಿಗೆ ಈಗಾಗಲೇ ಚಾಲನೆ ದೊರಕಿದೆ. ಅಲ್ಲದೆ ನೆರೆಬಾಧಿತ ಪ್ರದೇಶಗಳ ನಿವಾಸಿಗಳು ಸಲ್ಲಿಸುವ ವಿಮೆ ‘ಕ್ಲೇಮ್’ಗಳನ್ನು ಕ್ಷಿಪ್ರವಾಗಿ ಪರಿಷ್ಕರಿಸುವುದು, ಕೆಲವು ದಾಖಲೆಪತ್ರ ಇಲ್ಲದಿದ್ದರೂ ವಿಮೆಯ ಮೊತ್ತ ಪಾವತಿಸುವುದು ಮುಂತಾದ ಪ್ರಕ್ರಿಯೆಗಳನ್ನು ವಿಮಾ ಸಂಸ್ಥೆಗಳು ನಡೆಸುತ್ತಿವೆ. ಕೇರಳದಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಪಾವತಿಸುವ ಅಂತಿಮ ದಿನಾಂಕವನ್ನು ಆಗಸ್ಟ್ 31ರಿಂದ ಸೆ.15ಕ್ಕೆ ವಿಸ್ತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News