ಕೊರಿಯ ಪರ್ಯಾಯ ದ್ವೀಪದಲ್ಲಿ ಯುದ್ಧಾಭ್ಯಾಸ ಮುಂದುವರಿಕೆ: ಅಮೆರಿಕ ಘೋಷಣೆ

Update: 2018-08-29 16:45 GMT

ವಾಶಿಂಗ್ಟನ್, ಆ. 29: ಕೊರಿಯ ಪರ್ಯಾಯ ದ್ವೀಪದಲ್ಲಿ ಸ್ಥಗಿತಗೊಳಿಸಲಾಗಿದ್ದ ಯುದ್ಧಾಭ್ಯಾಸವನ್ನು ಅಮೆರಿಕ ಮುಂದುವರಿಸಲಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ‘ಪೆಂಟಗನ್’ ಮಂಗಳವಾರ ಹೇಳಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ನಡುವೆ ಜೂನ್‌ನಲ್ಲಿ ಸಿಂಗಾಪುರದಲ್ಲಿ ನಡೆದ ಶೃಂಗ ಸಭೆಯ ಬಳಿಕ, ಸದ್ಭಾವನಾ ಕ್ರಮವಾಗಿ ಈ ಯುದ್ಧಾಭ್ಯಾಸವನ್ನು ಸ್ಥಗಿತಗೊಳಿಸಲಾಗಿತ್ತು.

‘‘ಸದ್ಭಾವನಾ ಕ್ರಮವಾಗಿ ಹಲವು ಯುದ್ಧಾಭ್ಯಾಸಗಳನ್ನು ಸ್ಥಗಿತಗೊಳಿಸಲು ನಾವು ನಿರ್ಧರಿಸಿದ್ದೆವು. ಇನ್ನು ಅವುಗಳನ್ನು ಸ್ಥಗಿತಗೊಳಿಸುವ ಯಾವುದೇ ಉದ್ದೇಶವಿಲ್ಲ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಹೇಳಿದರು.

ಆದಾಗ್ಯೂ, ಕೊರಿಯ ಪರ್ಯಾಯ ದ್ವೀಪದಲ್ಲಿ ಮಿತ್ರ ದೇಶಗಳೊಂದಿಗೆ ನಡೆಸುವ ಯುದ್ಧಾಭ್ಯಾಸವನ್ನು ಶೀಘ್ರವೇ ಪುನರಾರಂಭಗೊಳಿಸುವುದಕ್ಕೆ ಸಂಬಂಧಿಸಿದ ಯಾವುದೇ ಸೂಚನೆಯನ್ನು ಅವರು ನೀಡಲಿಲ್ಲ.

ಆಗಸ್ಟ್‌ನಲ್ಲಿ ನಡೆಯಲು ನಿಗದಿಯಾಗಿದ್ದ ಬೃಹತ್ ಪ್ರಮಾಣದ ‘ಉಲ್ಚಿ ಫ್ರೀಡಂ ಗಾರ್ಡಿಯನ್’ ಯುದ್ಧಾಭ್ಯಾಸ ಸೇರಿದಂತೆ ದಕ್ಷಿಣ ಕೊರಿಯದೊಂದಿಗೆ ನಡೆಸಲು ಉದ್ದೇಶಿಸಲಾಗಿದ್ದ ಹಲವು ಯುದ್ಧಾಭ್ಯಾಸಗಳನ್ನು ಸ್ಥಗಿತಗೊಳಿಸಿರುವುದಾಗಿ ಶೃಂಗಸಭೆಯ ಬಳಿಕ ಅಮೆರಿಕ ಘೋಷಿಸಿತ್ತು.

ಹೆಚ್ಚುತ್ತಿರುವ ಪರಸ್ಪರ ಅಪನಂಬಿಕೆ

ಶೃಂಗಸಭೆಯ ಹೊರತಾಗಿಯೂ, ಅಮೆರಿಕ ಮತ್ತು ಉತ್ತರ ಕೊರಿಯಗಳ ನಡುವೆ ಪರಸ್ಪರ ಅಪನಂಬಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಶೃಂಗಸಭೆಯಲ್ಲಿ ಏರ್ಪಟ್ಟ ಒಪ್ಪಂದದಂತೆ ಉತ್ತರ ಕೊರಿಯ ತನ್ನ ಪರಮಾಣು ಮೂಲಸೌಕರ್ಯಗಳನ್ನು ನಾಶಪಡಿಸುತ್ತಿಲ್ಲ ಎಂಬ ಸಂಶಯವನ್ನು ಅಮೆರಿಕ ವ್ಯಕ್ತಪಡಿಸುತ್ತಾ ಬಂದಿರುವುದನ್ನು ಸ್ಮರಿಸಬಹುದಾಗಿದೆ.

ಅದೇ ವೇಳೆ, ಪರಮಾಣು ನಿಶ್ಶಸ್ತ್ರೀಕರಣಕ್ಕೆ ಸಂಬಂಧಿಸಿದ ಒಪ್ಪಂದ ಮುರಿದುಬೀಳಬಹುದು ಎಂಬ ಸೂಚನೆಯನ್ನು ಉತ್ತರ ಕೊರಿಯ ಇತ್ತೀಚೆಗೆ ನೀಡಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News