ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಪ್ರಸಾರಕ್ಕೆ ಅಂಕುಶ: ಸಚಿವರ ತಂಡಕ್ಕೆ ವರದಿ ಸಲ್ಲಿಸಿದ ಸಮಿತಿ

Update: 2018-08-30 18:07 GMT

ಹೊಸದಿಲ್ಲಿ, ಆ.30: ಸುಳ್ಳು ಸುದ್ದಿ ಪ್ರಸಾರ ತಡೆಗಟ್ಟಲು ಹಾಗೂ ಮಕ್ಕಳ ಅಶ್ಲೀಲ ವಿಷಯಗಳ ನಿರೂಪಣೆಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಉನ್ನತ ಮಟ್ಟದ ಸರಕಾರಿ ಸಮಿತಿಯೊಂದು ಸಚಿವರ ತಂಡಕ್ಕೆ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.

ನಿಯಮಗಳನ್ನು ಪಾಲಿಸಿ ಅಥವಾ ಕಾನೂನುಕ್ರಮ ಎದುರಿಸಿ ಎಂಬ ಕಠಿಣ ಸಂದೇಶವನ್ನು ಸಾಮಾಜಿಕ ಮಾಧ್ಯಮಗಳ ಭಾರತೀಯ ವಿಭಾಗದ ಮುಖ್ಯಸ್ಥರಿಗೆ ರವಾನಿಸುವಂತೆ ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿ ರಾಜೀವ್ ಗೌಬ ನೇತೃತ್ವದ ಸಮಿತಿ ಸಲ್ಲಿಸಿರುವ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಚಿವರ ತಂಡಕ್ಕೆ ವರದಿಯನ್ನು ಸಲ್ಲಿಸಲಾಗಿದ್ದು, ವರದಿಯ ಶಿಫಾರಸುಗಳನ್ನು ಸಚಿವರ ತಂಡ ಪ್ರಧಾನಿಯವರಿಗೆ ತಲುಪಿಸಲಿದೆ .

ಸಂಸತ್ತಿನಲ್ಲಿ ಅನುಮೋದನೆ ಪಡೆದು ಭಾರತೀಯ ದಂಡ ಸಂಹಿತೆ(ಐಪಿಸಿ)ಯ ನಿಯಮಗಳನ್ನು ಕಠಿಣಗೊಳಿಸುವಂತೆ ವರದಿಯಲ್ಲಿ ಶಿಫಾರಸು ಮಾಡಲಾಗಿದ್ದು ವಿದೇಶ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್, ಸಾರಿಗೆ ಸಚಿವ ನಿತಿನ್ ಗಡ್ಕರಿ, ಕಾನೂನು ಸಚಿವ ರವಿಶಂಕರ್ ಪ್ರಸಾದ್ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಸಚಿವ ಥಾವರ್‌ಚಂದ್ ಗೆಹ್ಲೋಟ್ ಸಮಿತಿಯ ಸದಸ್ಯರಾಗಿದ್ದಾರೆ. ವಿಶ್ವದ ಪ್ರಮುಖ ಸಾಮಾಜಿಕ ಮಾಧ್ಯಮಗಳು ಭಾರತದಲ್ಲಿ ವೇದಿಕೆಯನ್ನು ಹೊಂದಿವೆ. ತಮ್ಮ ವೆಬ್‌ಸೈಟ್‌ಗಳಿಂದ ಆಕ್ಷೇಪಾರ್ಹ ವೀಡಿಯೊ ಹಾಗೂ ವಿಷಯಗಳನ್ನು ತೆಗೆದುಹಾಕಬೇಕೆಂಬ ಸೂಚನೆಯನ್ನು ಅವರು ಪಾಲಿಸದಿದ್ದರೆ ಅವರ ವಿರುದ್ಧ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳು ಸರಕಾರದ ಸೂಚನೆಯನ್ನು ತಕ್ಷಣದಿಂದ ಪಾಲಿಸಬೇಕು. ಇಲ್ಲದಿದ್ದರೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಟ್ವಿಟರ್ ಇಂಡಿಯಾ, ಫೇಸ್‌ಬುಕ್, ವಾಟ್ಸಾಪ್ ಮತ್ತು ಯೂಟ್ಯೂಬ್ ಮಾಧ್ಯಮಗಳ ಪ್ರತಿನಿಧಿಗಳೊಂದಿಗೆ ಇತ್ತೀಚೆಗೆ ಸಭೆ ನಡೆಸಿದ್ದ ಸರಕಾರಿ ಅಧಿಕಾರಿಗಳು ಸ್ಪಷ್ಟವಾಗಿ ತಿಳಿಸಿದ್ದರು. ಬೇಜವಾಬ್ದಾರಿಯ ಹಾಗೂ ಸ್ಫೋಟಕ ವಿಷಯಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುತ್ತಿರುವ ಬಗ್ಗೆ ಉದಾಸೀನ ವಹಿಸಬಾರದು ಎಂದು ಸಾಮಾಜಿಕ ಮಾಧ್ಯಮಗಳಿಗೆ ತಿಳಿಸಲಾಗಿದ್ದು ಕಾನೂನು ಜಾರಿಗೊಳಿಸುವ ಸಮಿತಿಗಳೊಂದಿಗೆ ಸಹಕರಿಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News