ಪೆಲ್ವಾನ್ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ ಸುನೀಲ್ ಶೆಟ್ಟಿ

Update: 2018-08-31 13:03 GMT

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನೆಮಾದ ಬಗ್ಗೆ ಈಗಾಗಲೇ ಚಿತ್ರರಸಿಕರಲ್ಲಿ ಕುತೂಹಲವಿದೆ. ಕ್ರೀಡೆ ಆಧಾರಿತ ಈ ಚಿತ್ರದಲ್ಲಿ ಸುದೀಪ್ ಓರ್ವ ಬಾಕ್ಸರ್ ಮತ್ತು ಕುಸ್ತಿಪಟುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಎಸ್.ಕೃಷ್ಣ ನಿರ್ದೇಶನದ ಪೈಲ್ವಾನ್‌ಗಾಗಿ ಸುದೀಪ್ ಸಾಕಷ್ಟು ಕಸರತ್ತು ನಡೆಸುತ್ತಿದ್ದು ಮಾರ್ಶಲ್ ಆರ್ಟ್ಸ್ ತರಬೇತಿಯನ್ನೂ ಪಡೆದುಕೊಳ್ಳುತ್ತಿದ್ದಾರೆ. ಅಂದಹಾಗೆ, ಈ ಚಿತ್ರದ ಮೂಲಕ ಬಾಲಿವುಡ್‌ನ ಒಂದು ಕಾಲದ ಆ್ಯಕ್ಷನ್ ಹೀರೊ, ಕರಾವಳಿಯ ಸುನೀಲ್ ಶೆಟ್ಟಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಪೈಲ್ವಾನ್ ಸಿನೆಮಾದಲ್ಲಿ ಶೆಟ್ಟಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿಂದಿನಿಂದಲೂ ಕನ್ನಡ ಸಿನೆಮಾದಲ್ಲಿ ನಟಿಸಬೇಕೆಂಬ ಹಂಬಲ ವ್ಯಕ್ತಪಡಿಸುತ್ತಿದ್ದ ಸುನೀಲ್ ಶೆಟ್ಟಿ ಉತ್ತಮ ಪಾತ್ರಕ್ಕಾಗಿ ಕಾಯುತ್ತಿದ್ದರು. ಈಗ ಪೈಲ್ವಾನ್ ಅವರ ಕನ್ನಡದ ಕನಸನ್ನು ನನಸು ಮಾಡಿದೆ. ಊಹೆಗಳ ಪ್ರಕಾರ ಪೈಲ್ವಾನ್‌ನಲ್ಲಿ ಶೆಟ್ಟಿ, ಸುದೀಪ್ ಕೋಚ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ‘ಹೆಬ್ಬುಲಿ’ ಚಿತ್ರದ ನಂತರ ಸುದೀಪ್ ಮತ್ತು ಕೃಷ್ಣಾ ಜೋಡಿ ಪೈಲ್ವಾನ್ ಮೂಲಕ ಮತ್ತೊಮ್ಮೆ ಒಂದಾಗುತ್ತಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿರುವ ಈ ಚಿತ್ರವನ್ನು ಆರ್‌ಆರ್‌ಆರ್ ಮೋಶನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. ಆಕಾಂಕ್ಷಾ ಸಿಂಗ್, ರವಿಶಂಕರ್, ಕಬೀರ್ ದುಹನ್ ಸಿಂಗ್, ಸುಶಾಂತ್ ಸಿಂಗ್ ಸೇರಿದಂತೆ ಘಟಾನುಘಟಿ ನಟರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News