ನೆರೆಪೀಡಿತ ಕೇರಳಕ್ಕೆ 1.50 ಕೋಟಿ ರೂ. ನೀಡುವಂತೆ ಔಷಧಿ ಕಂಪೆನಿಗೆ ಸೂಚಿಸಿದ ಕೋರ್ಟ್

Update: 2018-08-31 16:54 GMT

ಮುಂಬೈ, ಆ.31: ಇತರ ಔಷಧಿ ಕಂಪೆನಿಗಳ ಟ್ರೇಡ್‌ಮಾರ್ಕ್‌ನಲ್ಲಿ (ವ್ಯಾಪಾರ ಚಿಹ್ನೆ) ತಯಾರಾಗುತ್ತಿರುವ ಔಷಧೀಯ ಉತ್ಪನ್ನಗಳನ್ನು ನಕಲು ಮಾಡಿರುವ ಆರೋಪವನ್ನು ಎದುರಿಸುತ್ತಿದ್ದ ಗಲ್ಫಾ ಲ್ಯಾಬೊರೇಟರೀಸ್ ಸಂಸ್ಥೆ ದೋಷಿ ಎಂದು ತೀರ್ಪು ನೀಡಿರುವ ಬಾಂಬೆ ಉಚ್ಚ ನ್ಯಾಯಾಲಯ, ಅದಕ್ಕೆ ಶಿಕ್ಷೆಯಾಗಿ ಕೇರಳ ನೆರೆಪೀಡಿತರ ಪರಿಹಾರ ನಿಧಿಗೆ 1.50 ಕೋಟಿ ರೂ. ಪಾವತಿಸುವಂತೆ ಸಂಸ್ಥೆಗೆ ಸೂಚಿಸಿದೆ.

ಟ್ರೇಡ್‌ಮಾರ್ಕ್ ಅತಿಕ್ರಮಣ ಪ್ರಕರಣದಲ್ಲಿ ಗಲ್ಫಾ ಲ್ಯಾಬೊರೇಟರೀಸ್ ದೋಷಿಯಾಗಿದೆ ಎಂದು ಬಾಂಬೆ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಎಸ್.ಜೆ. ಕಥವಲ್ಲಾ ಆಗಸ್ಟ್ 28ರಂದು ತೀರ್ಪು ನೀಡಿದ್ದರು. ಗ್ಲೆನ್‌ಮಾರ್ಕ್ ಸಂಸ್ಥೆಯ ಪ್ರಕಾರ, ಆರೋಪಿ ಸಂಸ್ಥೆಯು ಗ್ಲೆನ್‌ಮಾಕರ್ರ್ನ ಕ್ಯಾಂಡಿಡ್ ಬಿ ಕ್ರೀಮ್ ಉತ್ಪನ್ನದ ವಿನ್ಯಾಸ ಮತ್ತು ಮಾದರಿಯನ್ನೇ ಹೊಂದಿರುವ ಕ್ಲೊಡಿಡ್ ಬಿ ಎಂಬ ಕ್ರೀಮನ್ನು ಮಾರಾಟ ಮಾಡುತ್ತಿತ್ತು. ಈ ವಾದವನ್ನು ಒಪ್ಪಿದ ನ್ಯಾಯಾಲಯ, ಆರೋಪಿ ಸಂಸ್ಥೆಯು ಗ್ಲೆನ್‌ಮಾರ್ಕ್ ಫಾರ್ಮಸೂಟಿಕಲ್ಸ್‌ನ ಉತ್ಪನ್ನಗಳನ್ನು ವ್ಯವಸ್ಥಿತವಾಗಿ ನಕಲು ಮಾಡುತ್ತಿದೆ ಎಂದು ತಿಳಿಸಿತ್ತು. ಔಷಧಗಳು ಸಿಹಿತಿಂಡಿಗಳಲ್ಲ. ಗ್ರಾಹಕರ ಆರೋಗ್ಯ ಸುಧಾರಣೆಗೆ ಔಷಧಿಯನ್ನು ಪೂರೈಸುವ ಫಾರ್ಮಸೂಟಿಕಲ್ ಸಂಸ್ಥೆಗಳು ಗ್ರಾಹಕರ ಬಗ್ಗೆ ಕಾಳಜಿವಹಿಸುವ ವಿಶೇಷ ಕರ್ತವ್ಯವನ್ನೂ ಹೊಂದಿವೆ ಎಂದು ನ್ಯಾಯಾಲಯ ತಿಳಿಸಿದೆ.

ವಾಸ್ತವದಲ್ಲಿ ಈ ಸಂಸ್ಥೆಗಳ ಮೇಲೆ ಸಾರ್ವಜನಿಕ ಆರೋಗ್ಯದ ಜವಾಬ್ದಾರಿಯೂ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಸಂಸ್ಥೆಗಳ ಕಾರ್ಪೊರೇಟ್ ಮತ್ತು ಆರ್ಥಿಕ ಗುರಿಗಳು ಅದರ ಅಧಿಕಾರಿಗಳು ನಿರ್ಧಾರದ ಮೇಲೆ ಪರಿಣಾಮ ಬೀರುತ್ತವೆ ಎಂದು ನ್ಯಾಯಾಲಯ ಪ್ರತಿಪಾದಿಸಿದೆ.

ಆರಂಭದಲ್ಲಿ ಪರಿಹಾರ ಮೊತ್ತವನ್ನು ಗ್ಲೆನ್‌ಮಾರ್ಕ್ ಸಂಸ್ಥೆಗೆ ನೀಡುವಂತೆ ನ್ಯಾಯಾಲಯ ಸೂಚಿಸಿದ್ದರೂ, ಈ ಮೊತ್ತವನ್ನು ಯಾವುದೇ ಎನ್‌ಜಿಒಗೆ ಹಸ್ತಾಂತರಿಸುವಂತೆ ಗ್ಲೆನ್‌ಮಾರ್ಕ್ ಮನವಿ ಮಾಡಿದೆ. ಈ ಹಿನ್ನೆಲೆಯಲ್ಲಿ ಈ ಮೊತ್ತವನ್ನು ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವಂತೆ ನ್ಯಾಯಾಲಯ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News