ಸೂಚನಾ ಪತ್ರದ ಮೂಲಕ ರಿಜಿಸ್ಟ್ರಾರ್‌ಗೆ ಅಧಿಕಾರ ನೀಡಲು ಸಾಧ್ಯವಿಲ್ಲ: ಉಚ್ಚ ನ್ಯಾಯಾಲಯ

Update: 2018-08-31 17:37 GMT

ಹೊಸದಿಲ್ಲಿ, ಆ.31: ಆಮ್ ಆದ್ಮಿ ಸರಕಾರ ಸೂಚನಾಪತ್ರದ ಮೂಲಕ ರಿಜಿಸ್ಟ್ರಾರ್‌ಗೆ ಅಧಿಕಾರವನ್ನು ನೀಡಿ ನೋಂದಣಿ ದಾಖಲೆಗಳನ್ನು ರದ್ದುಪಡಿಸುವಂತೆ ಸೂಚಿಸಲು ಸಾಧ್ಯವಿಲ್ಲ ಎಂದು ದಿಲ್ಲಿ ಉಚ್ಚ ನ್ಯಾಯಾಲಯ ಶುಕ್ರವಾರ ತಿಳಿಸಿದೆ. ಮುಖ್ಯವಾಗಿ ಇಂಥ ವ್ಯವಹಾರಗಳಿಗಾಗಿ ರುವ ಕಾನೂನಿನಲ್ಲಿ ಇದಕ್ಕೆ ಅವಕಾಶವೇ ಇಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ದಿಲ್ಲಿ ಸರಕಾರಕ್ಕೆ ನೋಟಿಸ್ ಜಾರಿ ಮಾಡಿರುವ ಮುಖ್ಯ ನ್ಯಾಯಾಧೀಶ ರಾಜೇಂದ್ರ ಮೆನನ್ ಮತ್ತು ನ್ಯಾಯಾಧೀಶ ವಿ.ಕೆ.ರಾವ್ ಅವರ ನ್ಯಾಯಪೀಠ, ಸರಕಾರೇತರ ಸಂಸ್ಥೆಯೊಂದು ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. ವಂಚನೆ ಪ್ರಕರಣವೊಂದರ ನೋಂದಣಿ ದಾಖಲೆಗಳನ್ನು ರದ್ದುಗೊಳಿಸುವಂತೆ ಸೂಚಿಸಿ ಆಪ್ ಸರಕಾರ 2016ರಲ್ಲಿ ರಿಜಿಸ್ಟ್ರಾರ್‌ಗೆ ನೀಡಿದ್ದ ಅಧಿಕಾರವನ್ನು ಪ್ರಶ್ನಿಸಿ ಎನ್‌ಜಿಒ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. 2016ರಲ್ಲಿ ಈ ಸೂಚನಾಪತ್ರ ಜಾರಿಗೆ ಬಂದ ನಂತರ ರದ್ದುಗೊಳಿಸಲ್ಪಟ್ಟ ನೋಂದಾಯಿತ ದಾಖಲೆಗಳ ಸಂಖ್ಯೆಯನ್ನು ನೀಡುವಂತೆ ಸೂಚಿಸಿರುವ ನ್ಯಾಯಾಲಯ ಈ ಕುರಿತ ಮುಂದಿನ ವಿಚಾರಣೆಯನ್ನು ಸೆಪ್ಟಂಬರ್ 19ಕ್ಕೆ ನಿಗದಿಪಡಿಸಿದೆ.

ನೋಂದಾಯಿತ ದಾಖಲೆಗಳನ್ನು ರದ್ದುಪಡಿಸುವ ಅಧಿಕಾರ ಯಾರಿಗೂ ಇಲ್ಲ ಮತ್ತು ಕ್ರಿಮಿನಲ್ ಮತ್ತು ಸಿವಿಲ್ ದಾವೆಯನ್ನು ಹೂಡುವುದಷ್ಟೇ ಇದಕ್ಕೆ ಪರಿಹಾರ ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ ಎಂಬುದನ್ನು ದಿಲ್ಲಿ ಉಚ್ಚ ನ್ಯಾಯಾಲಯ ಪುನರುಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News