ಬ್ರಾಹ್ಮಣರ ಒತ್ತಡಕ್ಕೆ ಮಣಿದು ಮೀನುಗಾರಿಕಾ ಲೈಸೆನ್ಸ್ ರದ್ದು! : ಹೈಕೋರ್ಟ್ ಮೆಟ್ಟಿಲೇರಿದ ಮೀನುಗಾರರು

Update: 2018-09-01 14:45 GMT

ಅಹ್ಮದಾಬಾದ್, ಸೆ.1: ಬ್ರಾಹ್ಮಣ ಸಮುದಾಯದ ಒಂದು ಗುಂಪಿನ ಆಕ್ಷೇಪದ ಹಿನ್ನೆಲೆ ಯಲ್ಲಿ ತಮ್ಮ ಮೀನುಗಾರಿಕಾ ಗುತ್ತಿಗೆಯ ಪರವಾನಿಗೆಯನ್ನು ರದ್ದುಪಡಿ ಸಿರುವುದನ್ನು ಪ್ರಶ್ನಿಸಿ ಗುಜರಾತ್‌ನ ಮೀನುಗಾರರ ಸಂಘಟನೆಯೊಂದು ಅರ್ಜಿ ಸಲ್ಲಿಸಿರುವುದನ್ನು ಗುಜರಾತ್ ಹೈಕೋರ್ಟ್ ಶನಿವಾರ ವಿಚಾರಣೆಗೆ ಸ್ವೀಕರಿಸಿದೆ ಹಾಗೂ ಈ ಬಗ್ಗೆ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಸಬರ್‌ಕಾಂತಾದ ಪ್ರತಾಪ್‌ಸಾಗರ ಸರೋವರದಲ್ಲಿ ಮೀನುಹಿಡಿಯುವುದರಿಂದ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತಿದೆಯೆಂದು ಹೇಳಿಕೊಂಡು ಬ್ರಾಹ್ಮಣ ಸಮುದಾಯದ ಒಂದು ಗುಂಪು ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಸಬರ್‌ಕಾಂತ ಜಿಲ್ಲಾಕಾರಿಯವರು ಮೀನುಗಾರಿಕೆಯ ಪರವಾನಗಿಯನ್ನು ರದ್ದುಪಡಿಸಿದ್ದರು.

ಮೀನುಗಾರಿಕಾ ಗುತ್ತಿಗೆಯ ಲೈಸೆನ್ಸ್ ರದ್ದುಪಡಿಸಲಾಗಿರುವ ಬಗ್ಗೆ ಸೆಪ್ಟೆಂಬರ್ 5ರೊಳಗೆ ಉತ್ತರಿಸುವಂತೆ ನ್ಯಾಯಮೂರ್ತಿ ಆನಂತ್ ಎಸ್.ದಾವೆ ನೇತೃತ್ವದ ವಿಭಾಗೀಯ ಪೀಠವು ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ.

 ಮೀನುಗಾರರ ಸಂಘಟನೆ ‘ಆಶಾ ಮತ್ಸ ವಿಕಾಸ್ ಖೇಡುತ್ ಮಂಗಲಂ’, ತನ್ನ ಅಧ್ಯಕ್ಷೆ ಅಶಾಬೆನ್ ಪಿ. ಮಕ್ವಾನಾ ಮೂಲಕ ಫೆ.2ರಂದು ಗುಜರಾತ್ ಹೈಕೋರ್ಟ್‌ಗೆ ಈ ಅರ್ಜಿಯನ್ನು ಸಲ್ಲಿಸಿತ್ತು.

 ಪ್ರತಾಪ್‌ಸಾಗರ ಸರೋವರದಲ್ಲಿ ಮೀನುಗಾರಿಕಾ ಗುತ್ತಿಗೆಯನ್ನು ನೀಡಲು ಗುಜರಾತ್ ಸರಕಾರವು 2017ರ ಜೂನ್‌ನಲ್ಲಿ ಜಾಹೀರಾತು ಮೂಲಕ ಟೆಂಡರ್ ಕರೆದಿತ್ತು. ‘ಆಶಾ ಮತ್ಸ ವಿಕಾಸ್ ಖೇಡುತ್ ಮಂಗಲಂ’ ಸಂಘಟನೆಯು ಈ ಟೆಂಡರ್ ಪಡೆಯುವಲ್ಲಿ ಸಲವಾಗಿತ್ತು. 2017ರ ಜುಲೈನಿಂದ 2022ರ ಜೂನ್‌ವರೆಗೆ ಐದು ವರ್ಷಗಳ ಕಾಲ ಪ್ರತಾಪ್ ಸಾಗರ ಜಲಾಶಯದಲ್ಲಿ ಮೀನುಗಾರಿಕೆಯ ಗುತ್ತಿಗೆಯನ್ನು ಆ ಸಂಘಟನೆಗೆ ನೀಡಲಾಗಿತ್ತು.

  

ಮೀನುಗಾರಿಕೆಗೆ ಟೆಂಡರ್ ನೀಡಿರುವುದನ್ನು ಪ್ರಶ್ನಿಸಿ ಜಿಲ್ಲೆಯ ನಿವಾಸಿ ಹೀರಾಲಾಲ್ ಪನ್ನಾಲಾಲ್ ಜೋಶಿ ಎಂಬವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದ್ದರು. ಪ್ರತಾಪ್‌ಸಾಗರದಲ್ಲಿ ಮೀನುಗಾರಿಕೆ ಮಾಡುವುದರಿಂದ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗಿದೆಯೆಂದು ಅವರು ಆರೋಪಿಸಿದ್ದರು. ಈ ವರ್ಷದ ಏಪ್ರಿಲ್‌ನಲ್ಲಿ ಜೋಶಿ ತನ್ನ ಅರ್ಜಿಯನ್ನು ಹಿಂಪಡೆದಿದ್ದರು ಹಾಗೂ ಮೀನುಗಾರಿಕಾ ಟೆಂಡರ್ ಬಗ್ಗೆ ತನ್ನ ಯಾವುದೇ ಆಕ್ಷೇಪಗಳಿಲ್ಲವೆಂದು ಸ್ಪಷ್ಟಪಡಿಸಿದ್ದರು. ಆದರೂ, ಸಬರಕಾಂತ ಜಿಲ್ಲಾಕಾರಿ ಮೀನುಗಾರಿಕಾ ಲೈಸೆನ್ಸ್‌ನ ರದ್ದತಿಯನ್ನು ಹಿಂಪಡೆದುಕೊಂಡಿಲ್ಲವೆಂದು ಅವರ ವಕೀಲರಾದ ಸುಬ್ರಹ್ಮಣ್ಯುನ್ ಐಯ್ಯರ್ ತಿಳಿಸಿದ್ದಾರೆ.

ಆದಾಗ್ಯೂ ಸರೋವರದ ಪಕ್ಕದಲ್ಲೇ ಇರುವ ರಾಯಗಢ ಗ್ರಾಮದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಕೆಲವರು 2017ರ ಜೂನ್‌ನಲ್ಲಿ ಮೀನುಗಾರಿಕೆಯ ಗುತ್ತಿಗೆ ರದ್ದತಿಗೆ ಆಗ್ರಹಿಸಿ 2017ರ ಜೂನ್‌ನಲ್ಲಿ ಜಿಲ್ಲಾಕಾರಿಗೆ ಮನವಿ ಸಲ್ಲಿಸಿದ್ದರೆಂಬುದು, ಆರ್‌ಟಿಐ ಅರ್ಜಿಯ ಮೂಲಕ ತನಗೆ ತಿಳಿದುಬಂದಿರುವುದಾಗಿ ಮೀನುಗಾರಿಕಾ ಸಂಘಟವು ಗುಜರಾತ್ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News