ತ್ರಿಪುರಾ: ಸಿಪಿಎಂ ಮಾಜಿ ಶಾಸಕ ಬಿಶ್ವಜಿತ್ ದತ್ತಾ ಬಿಜೆಪಿಗೆ ಸೇರ್ಪಡೆ

Update: 2018-09-01 14:52 GMT

ಹೊಸದಿಲ್ಲಿ, ಸೆ.1: ತ್ರಿಪುರಾದ ಮಾಜಿ ಸಿಪಿಎಂ ಶಾಸಕ ಬಿಶ್ವಜಿತ್ ದತ್ತಾ, ಶನಿವಾರ ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ರಾಜ್ಯ ಸಿಪಿಎಂನಲ್ಲಿ ಭ್ರಷ್ಟಾಚಾರ, ಗುಂಪುಗಾರಿಕೆ ಹಾಗೂ ಕ್ರಿಮಿನಲ್ ಚಟುವಟಿಕೆಗಳು ವ್ಯಾಪಕವಾಗಿದೆಯೆಂದು ಅವರು ಆರೋಪಿಸಿದ್ದಾರೆ. 68 ವರ್ಷದ ದತ್ತಾ ಅವರು, ಖೊವಾಯಿ ಪಟ್ಟಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

ದತ್ತಾ ಅವರ ಸೇರ್ಪಡೆಯನ್ನು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಪಕ್ಷದ ತ್ರಿಪುರಾ ಉಸ್ತುವಾರಿ ಸುನೀಲ್ ದಿಯೋಧರ್ ಸ್ವಾಗತಿಸಿದ್ದಾರೆ. ದತ್ತಾ ಅವರು ಸಿಪಿಎಂನ ಅತ್ಯಂತ ಪ್ರಾಮಾಣಿಕ ನಾಯಕರಲ್ಲಿ ಒಬ್ಬರಾಗಿದ್ದರೆಂದು ಅವರು ಹೇಳಿದ್ದಾರೆ.1964ರಿಂದಲೂ ದತ್ತಾ ಸಿಪಿಎಂ ಪಕ್ಷದ ಒಡನಾಟ ಹೊಂದಿದ್ದರು. ಫೆಬ್ರವರಿ 18ರಂದು ನಡೆದ ವಿಧಾನಸಭಾ ಚುನಾವಣೆಯ ತಾನು ಸ್ಪರ್ಸದಂತೆ ಮಾಡಲು ತನ್ನನ್ನು ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಹಾಗೂ ಎಡರಂಗದ ಇನ್ನೋರ್ವ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿತ್ತು ಎಂದವರು ಆರೋಪಿಸಿದ್ದಾರೆ.

ತ್ರಿಪುರಾ ವಿಧಾನಸಭಾ ಚುನಾವಣೆಗೆ ದತ್ತಾ ಅವರನ್ನು ತನ್ನ ಅಭ್ಯರ್ಥಿಯಾಗಿ ಎಡರಂಗ ಅವಿರೋಧವಾಗಿ ಘೋಷಿಸಿತ್ತು. ಆನಂತರ ಅವರ ಬದಲಿಗೆ ಎಸ್‌ಎಐ ನಾಯಕ ನಿರ್ಮಲ್ ಬಿಸ್ವಾಸ್ ಅವರಿಗೆ ಟಿಕೆಟ್ ನೀಡಲಾಗಿತ್ತು.

  ದತ್ತಾ ಅವರ ಆರೋಪಗಳನ್ನು ಸಿಪಿಎಂ ರಾಜ್ಯ ನಾಯಕ ಹಾಗೂ ತ್ರಿಪುರಾ ವಿಧಾನಸಭೆಯ ಉಪಸ್ಪೀಕರ್ ಪಬಿತ್ರಾ ಕಾರ್ ಶನಿವಾರ ನಿರಾಕರಿಸಿದ್ದಾರೆ. ‘‘ಚುನಾವಣೆ ವೇಳೆ ಬಿಶ್ವಜಿತ್ ದತ್ತಾ ಅನಾರೋಗ್ಯ ಪೀಡಿತರಾಗಿದ್ದುದು ಹಾಗೂ ಅವರ ದೇಹಸ್ಥಿತಿ ಹದಗೆಟ್ಟಿತ್ತೆಂಬುದು ಎಲ್ಲರಿಗೆ ತಿಳಿದಿದೆ. ಓರ್ವ ಅಸ್ವಸ್ಥನನ್ನು ನಾವು ಹೇಗೆ ಕಣಕ್ಕಿಳಿಸಲು ಸಾಧ್ಯ’’ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News