ಪ್ರಮುಖ ಸಾಕ್ಷಿಯ ಸಾವಿಗೆ ವಿಷ ಕಾರಣವಲ್ಲ: ಎಫ್‌ಎಸ್‌ಲ್ ವರದಿ

Update: 2018-09-02 16:02 GMT

ಲಕ್ನೋ, ಸೆ.2: ಇತ್ತೀಚಿಗೆ ಸಾವನ್ನಪ್ಪಿದ್ದ ಉನ್ನಾವೊ ಅತ್ಯಾಚಾರ ಪ್ರಕರಣದ ಪ್ರಮುಖ ಸಾಕ್ಷಿ ಯೂನುಸ್ ಸಾವಿಗೆ ವಿಷಪ್ರಾಶನ ಕಾರಣವಾಗಿತ್ತು ಎನ್ನುವುದನ್ನು ವಿಧಿವಿಜ್ಞಾನ ಪ್ರಯೋಗಾಲಯ(ಎಫ್‌ಎಸ್‌ಎಲ್)ದ ವರದಿಯು ತಳ್ಳಿಹಾಕಿದೆ.

ರಾಸಾಯನಿಕ ವಿಶ್ಲೇಷಣೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದ ವಿಸೆರಾದಲ್ಲಿ ಯಾವುದೇ ವಿಷದ ಅಂಶ ಪತ್ತೆಯಾಗಿಲ್ಲ. ಇದು ಯೂನುಸ್ ಸಾವಿನ ಕುರಿತು ಎಲ್ಲ ಊಹಾಪೋಹಗಳಿಗೂ ಅಂತ್ಯ ಹಾಡಿದೆ ಎಂದು ಎಡಿಜಿಪಿ ಆನಂದ ಕುಮಾರ್ ಅವರು ರವಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಯೂನುಸ್ ಆ.18ರಂದು ನಿಗೂಢ ಸಾವನ್ನಪ್ಪಿದ್ದರು. ಅವರ ಸಾವಿನ ಹಿಂದೆ ಒಳಸಂಚು ನಡೆದಿತ್ತು. ಅವರಿಗೆ ವಿಷಪ್ರಾಶನ ಮಾಡಿಸಲಾಗಿತ್ತು ಎಂದು ಅತ್ಯಾಚಾರ ಸಂತ್ರಸ್ತೆಯ ಚಿಕ್ಕಪ್ಪ ಆರೋಪಿಸಿದ್ದ ಹಿನ್ನೆಲೆಯಲ್ಲಿ ದಫನ್ ಮಾಡಲಾಗಿದ್ದ ಯೂನುಸ್ ಶವವನ್ನು ಹೊರಕ್ಕೆ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿತ್ತು.

ಕುಟುಂಬದವರು ಪೊಲೀಸರಿಗೂ ಮಾಹಿತಿ ನೀಡದೆ ಶವವನ್ನು ಅವಸರದಿಂದ ದಫನ್ ಮಾಡಿದ್ದು ಶಂಕೆಗೆ ಕಾರಣವಾಗಿತ್ತು. ಯೂನುಸ್ ಯಕೃತ್ತಿನ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಅವರು 2013ರಿಂದಲೂ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಅವರ ಕುಟುಂಬವು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News