ಮಧ್ಯಪ್ರದೇಶ ಸಿಎಂ ಸಂಚರಿಸುತ್ತಿದ್ದ ವಾಹನಕ್ಕೆ ಕಲ್ಲುತೂರಾಟ

Update: 2018-09-03 12:17 GMT

ಇಂದೋರ್, ಸೆ.3: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ ಪ್ರಚಾರ ಕಾರ್ಯದ ನಿಮಿತ್ತ ಹಮ್ಮಿಕೊಳ್ಳಲಾಗಿರುವ ‘ಜನ ಆಶೀರ್ವಾದ ಯಾತ್ರೆ’ಯ ಅಂಗವಾಗಿ ಮುಖ್ಯಮಂತ್ರಿ ಹಾಗೂ ತಂಡ ಬಸ್ಸಿನಲ್ಲಿ ಪ್ರಯಾಣಿಸುತ್ತಿತ್ತು. ವಿಧಾನಸಭೆಯ ವಿಪಕ್ಷ ನಾಯಕ, ಕಾಂಗ್ರೆಸ್ ಮುಖಂಡ ಅಜಯ್ ಸಿಂಗ್ ಅವರ ಸ್ವಕ್ಷೇತ್ರವಾಗಿರುವ ಚುರ್ಹತ್ ಎಂಬಲ್ಲಿ ಕಲ್ಲುತೂರಾಟ ನಡೆಸಲಾಗಿದೆ. ಘಟನೆಯಲ್ಲಿ ಮುಖ್ಯಮಂತ್ರಿಗಳಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಚುರ್ಹತ್ ಪೊಲೀಸ್ ಇನ್ಸ್‌ಪೆಕ್ಟರ್ ರಾಮ್‌ಬಾಬು ಚೌಧರಿ ತಿಳಿಸಿದ್ದಾರೆ.

ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ, ಈ ಘಟನೆಗೆ ಅಜಯ್ ಸಿಂಗ್ ಕಾರಣ ಎಂದಿದ್ದಾರೆ. ನಿಮಗೆ ತಾಕತ್ತಿದ್ದರೆ ನನ್ನೆದುರು ನಿಲ್ಲಿ. ದೈಹಿಕವಾಗಿ ನೀವು ನನಗಿಂತ ಬಲಿಷ್ಟನಾಗಿರಬಹುದು. ಆದರೆ ರಾಜ್ಯದ ಜನತೆ ನನ್ನ ಬೆಂಬಲಕ್ಕಿದ್ದಾರೆ. ನಿಮ್ಮ ಕೃತ್ಯಗಳಿಗೆ ಹೆದಗಿ ಶರಣಾಗುವ ವ್ಯಕ್ತಿ ನಾನಲ್ಲ ಎಂದಿದ್ದಾರೆ.

ಆದರೆ ಆರೋಪ ನಿರಾಕರಿಸಿರುವ ಅಜಯ್ ಸಿಂಗ್, ಕಾಂಗ್ರೆಸ್ ಪಕ್ಷ ಎಂದಿಗೂ ಹಿಂಸಾಚಾರಕ್ಕೆ ಆಸ್ಪದ ನೀಡುವುದಿಲ್ಲ. ಕಲ್ಲು ತೂರಾಟದ ಘಟನೆಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ನನ್ನ ಹೆಸರು ಕೆಡಿಸಲು ನಡೆಸಿರುವ ಪೂರ್ವನಿಯೋಜಿತ ಸಂಚು ಇದಾಗಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News