ಉಪವಾಸ ಸತ್ಯಾಗ್ರಹ 9ನೇ ದಿನಕ್ಕೆ : ‘ವಿಲ್’ ಮೂಲಕ ಆಸ್ತಿ ಹಂಚಿಕೆ ಮಾಡಿದ ಹಾರ್ದಿಕ್ ಪಟೇಲ್

Update: 2018-09-03 13:48 GMT

ಅಹ್ಮದಾಬಾದ್, ಸೆ.3: ಪಾಟಿದಾರ್ ಸಮುದಾಯಕ್ಕೆ ಮೀಸಲಾತಿ ಒದಗಿಸಬೇಕು ಹಾಗೂ ರೈತರ ಕೃಷಿ ಸಾಲ ಮನ್ನಾ ಮಾಡಬೇಕು ಎಂಬ ಬೇಡಿಕೆ ಮುಂದಿರಿಸಿ ಪಾಟಿದಾರ್ ಮುಖಂಡ ಹಾರ್ದಿಕ್ ಪಟೇಲ್ ಆರಂಭಿಸಿರುವ ಅನಿರ್ದಿಷ್ಟಾವಧಿ ಉಪವಾಸ ಸೋಮವಾರ 9ನೇ ದಿನಕ್ಕೆ ಕಾಲಿರಿಸಿದೆ. ಈ ಮಧ್ಯೆ, ‘ವಿಲ್’ ಮೂಲಕ ಹಾರ್ದಿಕ್ ತಮ್ಮ ಆಸ್ತಿಯನ್ನು ಹಂಚಿಕೆ ಮಾಡಿದ್ದಾರೆ.

ತನ್ನ ಆಸ್ತಿಯನ್ನು ಹೆತ್ತವರು, ಒಬ್ಬಳು ಸಹೋದರಿ, 2015ರಲ್ಲಿ ಮೀಸಲಾತಿಗೆ ಆಗ್ರಹಿಸಿ ನಡೆದ ಪ್ರತಿಭಟನೆಯ ಸಂದರ್ಭ ಹತರಾದ 14 ಯುವ ಕಾರ್ಯಕರ್ತರಿಗೆ ಹಾಗೂ ತನ್ನ ಊರಿನ ಸಮೀಪ ಇರುವ ಅಸ್ವಸ್ಥ ಮತ್ತು ಮುದಿ ಹಸುಗಳ ಆಶ್ರಯತಾಣ ‘ಪಂಜ್ರಪೋಲ್’ ಹೆಸರಲ್ಲಿ ವಿಭಾಗ ಮಾಡಿದ್ದಾರೆ.

ಒಂದು ವೇಳೆ ಉಪವಾಸ ಸತ್ಯಾಗ್ರಹ ಸಂದರ್ಭ ತನ್ನ ಮರಣ ಸಂಭವಿಸಿದರೆ ಆಗ ಕಣ್ಣುಗಳನ್ನು ದಾನ ಮಾಡಬೇಕು ಎಂಬ ಆಶಯವನ್ನೂ ಅವರು ವ್ಯಕ್ತಪಡಿಸಿರುವುದಾಗಿ ಪಾಟಿದಾರ್ ಅನಾಮತ್ ಆಂದೋಲನ ಸಮಿತಿ(ಪಿಎಎಎಸ್) ವಕ್ತಾರ ಮನೋಜ್ ಪನಾರ ತಿಳಿಸಿದ್ದಾರೆ. ಹಾರ್ದಿಕ್ ಆರೋಗ್ಯಸ್ಥಿತಿ ಹದಗೆಡುತ್ತಿದೆ. ವೈದ್ಯರು ಈ ಬಗ್ಗೆ ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಾರ್ದಿಕ್ ವಿಲ್ ತಯಾರಿಸಿದ್ದಾರೆ. ವಿಲ್‌ನ ಪ್ರಕಾರ ಹಾರ್ದಿಕ್ ಬ್ಯಾಂಕ್ ಖಾತೆಯಲ್ಲಿ 50,000 ರೂ. ಇದ್ದು ಇದರಲ್ಲಿ 20 ಸಾವಿರ ರೂ. ಹೆತ್ತವರಿಗೆ, ಉಳಿದ ಹಣ ಪಂಜ್ರಪೋಲ್‌ಗೆ ಸಲ್ಲುತ್ತದೆ.

 ಹಾರ್ದಿಕ್ ಬರೆದ ಪುಸ್ತಕ ‘ಹೂ ಟುಕ್ ಮೈ ಜಾಬ್’ನಿಂದ ದೊರಕುವ ಗೌರವಧನ, ಜೀವವಿಮೆಯ ಮೊತ್ತ, ಈಗ ಉಪಯೋಗಿಸುತ್ತಿರುವ ಕಾರನ್ನು ಮಾರಿ ಬಂದ ಹಣದಲ್ಲಿ ಶೇ.15ರಷ್ಟು ಹೆತ್ತವರಿಗೆ, ಶೇ.15ರಷ್ಟು ಸಹೋದರಿಗೆ ಹಾಗೂ ಶೇ.70ರಷ್ಟು ಮೊತ್ತ ಮೃತಪಟ್ಟ 14 ಯುವ ಕಾರ್ಯಕರ್ತರಿಗೆ ಹಂಚಿಕೆಯಾಗಲಿದೆ.  ಕಳೆದ 9 ದಿನಗಳಿಂದ ಸತ್ಯಾಗ್ರಹ ನಡೆಸುತ್ತಿರುವ ಹಾರ್ದಿಕ್ ಪಟೇಲರನ್ನು ಟಿಎಂಸಿ, ಎನ್‌ಸಿಪಿ, ಆರ್‌ಜೆಡಿ ಮುಖಂಡರು ಭೇಟಿ ಮಾಡಿದ್ದರೂ ಗುಜರಾತ್‌ನ ಬಿಜೆಪಿ ಸರಕಾರ ಯಾವುದೇ ರೀತಿಯ ಸ್ಪಂದನೆ ತೋರಿಲ್ಲ.

ರವಿವಾರ ಹಾರ್ದಿಕ್‌ರನ್ನು ಭೇಟಿ ಮಾಡಿದ ಬಿಹಾರದ ಮಾಜಿ ಮುಖ್ಯಮಂತ್ರಿ, ಹಿಂದುಸ್ತಾನಿ ಅವಾಮಿ ಮೋರ್ಛಾದ ಅಧ್ಯಕ್ಷ ಜೀತನ್‌ರಾಮ್ ಮಾಂಝಿ, ರಾಜ್ಯ ಸರಕಾರ ಪ್ರತಿಭಟನಾಕಾರರ ಬೇಡಿಕೆಯನ್ನು ಆಲಿಸಬೇಕು ಮತ್ತು ಧನಾತ್ಮಕ ನಿಲುವು ವ್ಯಕ್ತಪಡಿಸಬೇಕು. ಆದರೆ ಸರಕಾರ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಮಧ್ಯೆ, ಹಾರ್ದಿಕ್‌ರನ್ನು ಭೇಟಿಯಾಗಲು ಅವರ ಮನೆಗೆ ಹೋಗುತ್ತಿದ್ದ ತಮ್ಮನ್ನು ತಡೆದು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ ಎಂದು ಹಾರ್ದಿಕ್ ಬೆಂಬಲಿಗರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News