3 ಲಕ್ಷ ರೂ. ಪಾವತಿಸಿ ಊಟಿ ರೈಲನ್ನು ಬುಕ್ ಮಾಡಿದ ಬ್ರಿಟಿಷ್ ದಂಪತಿ!

Update: 2018-09-03 13:57 GMT

ಊಟಿ, ಸೆ.3: ತಮ್ಮ ಹನಿಮೂನ್ ಗಾಗಿ ಇಂಗ್ಲೆಂಡ್ ನಿಂದ ಭಾರತಕ್ಕೆ ಆಗಮಿಸಿದ್ದ ಬ್ರಿಟಿಷ್ ದಂಪತಿ ನೀಲಗಿರಿ ಬೆಟ್ಟಗಳ ಸೌಂದರ್ಯವನ್ನು ಆಸ್ವಾದಿಸುವ ಉದ್ದೇಶದಿಂದ ಒಂದು ಇಡೀ ವಿಶೇಷ ರೈಲನ್ನು ತಮಗಾಗಿ ಕಾದಿರಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

ಮೆಟ್ಟುಪಾಳಯಂ (ಕೊಯಂಬತ್ತೂರು)ದಿಂದ ಉದಕಮಂಡಲ (ಊಟಿ) ತನಕದ ಒಂದು ಇಡೀ ಟ್ರಿಪ್ ಅನ್ನು ಅವರು ರೂ 3 ಲಕ್ಷ ಪಾವತಿಸಿ ತಮಗಾಗಿ ಕಾದಿರಿಸಿದ್ದರಲ್ಲದೆ ಪ್ರಕೃತಿ ರಮಣೀಯ ನೀಲಗಿರಿ ಬೆಟ್ಟದ ಸೌಂದರ್ಯವನ್ನು ದಾರಿಯುದ್ದಕ್ಕೂ ಸವಿದರು.

ಮೂವತ್ತು ವರ್ಷದ ಗ್ರಹಾಂ ವಿಲಿಯಂ ಲಿನ್ನ್ ಹಾಗೂ 27 ವರ್ಷದ ಸಿಲ್ವಿಯಾ ಪ್ಲಾಸಿಕ್ ಎರಡು ವಾರಗಳ ಹಿಂದೆ ವಿವಾಹವಾಗಿದ್ದರಲ್ಲದೆ ಹನಿಮೂನ್ ಗಾಗಿ ಭಾರತಕ್ಕೆ ಆಗಮಿಸಿದ್ದರು. ನೀಲಗಿರಿ ಬೆಟ್ಟಗಳ ಸೌಂದರ್ಯದ ಬಗ್ಗೆ ತಿಳಿದಿದ್ದ ಅವರು ಇಡೀ ರೈಲನ್ನು ತಮಗಾಗಿ ಐಆರ್‍ಸಿಟಿಸಿ ಮೂಲಕ ಕಾದಿರಿಸಿದ್ದರು.  ರೈಲ್ವೆ ಮಂಡಳಿ ಕೂಡ ಆವರ ಮನವಿಗೆ ಒಪ್ಪಿ ಸೇಲಂ ವಿಭಾಗಕ್ಕೆ ಈ 120 ಸೀಟುಗಳ ರೈಲನ್ನು ಈ ದಂಪತಿಗಳಿಗಾಗಿಯೆಂದೇ ಓಡಿಸಲು ತಿಳಿಸಿತು.

ದಂಪತಿಗೆ ಮೆಟ್ಟುಪಾಳಯಂ ಮತ್ತು ಕೂನೂರಿನಲ್ಲಿ ಹಾರ್ದಿಕ ಸ್ವಾಗತವನ್ನು ರೈಲ್ವೆ ಸಿಬ್ಬಂದಿ ಮತ್ತು ಅಧಿಕಾರಿಗಳು  ಕೋರಿದರು. ಬೆಳಿಗ್ಗೆ 9.10ಕ್ಕೆ ಮೆಟ್ಟುಪಾಳಯಂನಿಂದ ತೆರಳಿದ ರೈಲು ಅಪರಾಹ್ನ 2.40ಕ್ಕೆ ಊಟಿ ತಲುಪಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News