ಪುತ್ರಿಯನ್ನು ಕಂಡಾಗಲೆಲ್ಲಾ ಸೆಲ್ಯೂಟ್ ಹೊಡೆಯುತ್ತಾರೆ ಈ ತಂದೆ!

Update: 2018-09-03 14:17 GMT

ಹೈದರಾಬಾದ್, ಸೆ.3: ಕಳೆದ ಮೂರು ದಶಕಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಈಗ ಡಿಸಿಪಿ ಆಗಿರುವ ಎಆರ್ ಉಮಾಮಹೇಶ್ವರ ಶರ್ಮ ತಮಗಿಂತಲೂ ಹಿರಿಯ ಅಧಿಕಾರಿಯಾಗಿರುವ ತಮ್ಮ ಪುತ್ರಿ ಸಿಂಧು ಶರ್ಮ ಜತೆ ನಗರದ ಹೊರವಲಯದ ಕೊಂಗರ ಕಲನ್ ಎಂಬಲ್ಲಿ ತೆಲಂಗಾಣ ರಾಷ್ಟ್ರ ಸಮಿತಿಯ ಸಾರ್ವಜನಿಕ ಸಭೆ ವೇಳೆ ಕರ್ತವ್ಯದಲ್ಲಿದ್ದರು. ಈ ಸಂದರ್ಭ ಪರಸ್ಪರ ಮುಖಾಮುಖಿಯಾದಾಗ ತಮ್ಮ ಪುತ್ರಿಗೆ ಸೆಲ್ಯೂಟ್ ಹೊಡೆಯುವಲ್ಲಿ ಅವರಿಗೆ ಯಾವುದೇ ಹಿಂಜರಿಕೆಯಿರಲಿಲ್ಲ.

“ನಮ್ಮ ಕರ್ತವ್ಯದ ವೇಳೆ ನಾವು ಭೇಟಿಯಾಗುತ್ತಿರುವುದು ಇದು ಮೊದಲ ಬಾರಿ. ಆಕೆಯ ಜತೆ ಕೆಲಸ ಮಾಡಲು ನಾನು ಅದೃಷ್ಟಶಾಲಿ” ಎಂದು ಉಮಾಮಹೇಶ್ವರ ಶರ್ಮ  ಹೇಳುತ್ತಾರೆ. ಎಸ್ಸೈ ಆಗಿ ಪೊಲೀಸ್ ಇಲಾಖೆ ಪ್ರವೇಶಿಸಿದ ಅವರಿಗೆ ಇತ್ತೀಚೆಗೆ ಐಪಿಎಸ್ ರ್ಯಾಂಕ್ ನೀಡಲಾಗಿತ್ತು. ಅವರು ಹೈದರಾಬಾದಿನ ರಚಕೊಂಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮಲ್ಕಜಗಿರಿ ಎಂಬಲ್ಲಿ ಡಿಸಿಪಿಯಾಗಿ ಸೇವೆ ಸಲ್ಲಿಸುತ್ತಿದ್ದು, ಮುಂದಿನ ವರ್ಷ ನಿವೃತ್ತರಾಗಲಿದ್ದಾರೆ. ಅವರ ಪುತ್ರಿ ಸಿಂಧು ಶರ್ಮ 2014ನೇ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿದ್ದಾರೆ.

“ಆಕೆ ನನ್ನ ಹಿರಿಯ ಅಧಿಕಾರಿ.  ಆಕೆಯನ್ನು  ನೋಡಿದಾಗ ನಾನು ಸೆಲ್ಯೂಟ್ ಹೊಡೆಯುತ್ತೇನೆ. ಆದರೆ ಮನೆಯಲ್ಲಿ ನಾವು ಕೇವಲ ತಂದೆ ಹಾಗೂ ಪುತ್ರಿ'' ಎನ್ನುತ್ತಾರೆ ಶರ್ಮ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News