2,990 ಕೋಟಿ ರೂ. ವೆಚ್ಚದ ಪಟೇಲ್ ಪ್ರತಿಮೆಗೆ ಅಂತಿಮ ಸ್ಪರ್ಶ ನೀಡುತ್ತಿರುವ ಚೀನಾ ಕಾರ್ಮಿಕರು

Update: 2018-09-03 14:49 GMT

ಅಹ್ಮದಾಬಾದ್, ಸೆ.3: ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ , ಗುಜರಾತಿನಲ್ಲಿ ಸ್ಥಾಪಿಸಲಾಗುವ ದೇಶದ ಪ್ರಥಮ ಗೃಹಸಚಿವ ಸರ್ದಾರ್ ವಲ್ಲಭಬಾಯಿ ಪಟೇಲರ ಪ್ರತಿಮೆಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದ್ದು ಅಕ್ಟೋಬರ್ 31ರಂದು ಪ್ರಧಾನಿ ಅನಾವರಣಗೊಳಿಸಲಿದ್ದಾರೆ.

ಈ ಪ್ರತಿಮೆ ‘ಏಕತೆಯ ಪ್ರತಿಮೆ’ ಎಂದು ಬಿಜೆಪಿ ಹೇಳುತ್ತಿದ್ದರೆ, ಪ್ರಧಾನಿ ಮೋದಿ ಮತ್ತು ಬಿಜೆಪಿ ನಡೆಸುತ್ತಿರುವ ಪ್ರತಿಮಾ ರಾಜಕೀಯದ ಮುಂದುವರಿದ ಭಾಗ ಇದಾಗಿದೆ ಎಂದು ವಿಪಕ್ಷಗಳು ಹಾಗೂ ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಅಮೆರಿಕದ ವಿಶ್ವಪ್ರಸಿದ್ಧ ‘ಸ್ಟಾಚ್ಯೂ ಆಫ್ ಲಿಬರ್ಟಿ’ಗಿಂತ ದುಪ್ಪಟ್ಟು ಎತ್ತರದ ಪಟೇಲ್ ಪ್ರತಿಮೆ ನಿರ್ಮಾಣದ ವೆಚ್ಚ 2,990 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈಗ ಚೀನಾದಲ್ಲಿರುವ 128 ಮೀಟರ್ ಎತ್ತರದ ಬುದ್ಧನ ಪ್ರತಿಮೆ ವಿಶ್ವದ ಅತೀ ಎತ್ತರದ ಪ್ರತಿಮೆಯಾಗಿದ್ದು ಪಟೇಲ್ ಪ್ರತಿಮೆಯ ಎತ್ತರ 182 ಮೀಟರ್ ಇರಲಿದೆ. ಆದರೆ, ಮುಂಬೈಯಲ್ಲಿ 2021ರಲ್ಲಿ ಅನಾವರಣಗೊಳ್ಳಲಿರುವ ಶಿವಾಜಿ ಪ್ರತಿಮೆ 212 ಮೀಟರ್ ಎತ್ತರ ಇರಲಿದ್ದು ಪಟೇಲ್ ಪ್ರತಿಮೆಯ ಎತ್ತರವನ್ನು ಮೀರಿಸಲಿದೆ.

ಚೀನಾದ ನೂರಾರು ಕಾರ್ಮಿಕರೂ ಸೇರಿದಂತೆ ಸುಮಾರು 2,500 ಕಾರ್ಮಿಕರು ಪಟೇಲ್ ಪ್ರತಿಮೆಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ಈ ಪ್ರತಿಮೆಯನ್ನು ವೀಕ್ಷಿಸಲು ಅನುಕೂಲವಾಗುವಂತೆ ಪ್ರತಿಮೆಯ ಎದೆಮಟ್ಟದ ವರೆಗೆ , ಅಂದರೆ 153 ಮೀಟರ್ ಎತ್ತರದ ವೀಕ್ಷಣಾ ಗ್ಯಾಲರಿಯನ್ನೂ ನಿರ್ಮಿಸಲಾಗುವುದು. ಪ್ರಧಾನಿ ಮೋದಿಯ ನೆಚ್ಚಿನ ಯೋಜನೆಯಾಗಿರುವ ಪಟೇಲ್ ಪ್ರತಿಮೆ ಮುಂದಿನ ದಿನಗಳಲ್ಲಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸಲಿದೆ ಎಂದು ಮೋದಿ ನಿರೀಕ್ಷಿಸಿದ್ದಾರೆ.

ಆದರೆ ಈ ಯೋಜನೆಯ ಹಿಂದೆ ರಾಜಕೀಯ ಕಾರಣವೂ ಇದೆ ಎಂದು ಹೇಳಲಾಗುತ್ತಿದೆ. ವಲ್ಲಭಬಾಯಿ ಪಟೇಲರು ದೇಶದ ಪ್ರಥಮ ಪ್ರಧಾನಿಯಾಗಲು ಹೆಚ್ಚಿನ ಅರ್ಹತೆ ಹೊಂದಿದ್ದರೂ ನೆಹರೂ ವಂಶದ ಪ್ರಭಾವದಿಂದ ಅವರನ್ನು ಬದಿಗೊತ್ತಿ ಜವಾಹರಲಾಲ್ ನೆಹರೂ ಪ್ರಧಾನಿಯಾದರು ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಮೋದಿ ತಮ್ಮ ಚುನಾವಣಾ ಪ್ರಚಾರ ಕಾರ್ಯದಲ್ಲಿ ಪಟೇಲ್ ಪರಂಪರೆಯನ್ನು ಸಾಕಷ್ಟು ಬಾರಿ ಬಳಸಿಕೊಂಡಿದ್ದಾರೆ. ಈಗ ಈ ‘ಏಕತೆಯ ಪ್ರತಿಮೆ’ಯನ್ನು ಮುಂದಿನ ಚುನಾವಣೆಯಲ್ಲಿ ಬಳಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಆದರೆ ಇದು ಯಾವ ರೀತಿ ಮತದಾರರ ಮೇಲೆ ಪ್ರಭಾವ ಬೀರುತ್ತದೆ ಎಂಬ ಬಗ್ಗೆ ಕಳವಳ ಹೊಂದಿದ್ದೇನೆ ಎಂದು ಹೊಸದಿಲ್ಲಿಯ ಜೆಎನ್‌ಯು ವಿವಿಯ ನಿವೃತ್ತ ಪ್ರೊಫೆಸರ್ ಘನಶ್ಯಾಮ್ ಶಾ ಹೇಳುತ್ತಾರೆ.

ಮಹಾರಾಷ್ಟ್ರದಲ್ಲಿ ನಿರ್ಮಾಣವಾಗಲಿರುವ ಶಿವಾಜಿಯ ಪ್ರತಿಮೆಗೆ 2016ರಲ್ಲಿ ಮೋದಿ ಶಿಲಾನ್ಯಾಸ ಮಾಡಿದ್ದರು. ಅಲ್ಲದೆ ಮುಂಬೈಯ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರಿನ ಎದುರು ಮಹಾರಾಜ ಎಂಬ ಹೆಸರನ್ನು ಸೇರಿಸಿರುವುದಾಗಿ ಕಳೆದ ವಾರ ಕೇಂದ್ರ ಸರಕಾರ ಘೋಷಿಸಿದೆ. ಈ ಮಧ್ಯೆ, ಹೊಸದಿಲ್ಲಿಯಲ್ಲಿರುವ ನೆಹರೂ ಸ್ಮಾರಕ ವಸ್ತುಸಂಗ್ರಹಾಲಯವನ್ನು ಬದಲಿಸಿ, ಅಲ್ಲಿ ದೇಶದ ಎಲ್ಲಾ ಪ್ರಧಾನಿಗಳ ಕುರಿತ ಸ್ಮಾರಕಗಳನ್ನು ಹೊಂದಿಸುವ ಕೇಂದ್ರ ಸರಕಾರದ ಯೋಜನೆಯನ್ನು ಟೀಕಿಸಿರುವ ಕಾಂಗ್ರೆಸ್, ನೆಹರೂ ಪ್ರತಿಷ್ಠೆಗೆ ಘಾಸಿ ಎಸಗುವ ಪ್ರಯತ್ನ ಇದಾಗಿದೆ ಎಂದು ಆರೋಪಿಸಿದೆ.

ಇತಿಹಾಸ ಬದಲಿಸಲು ಬಿಜೆಪಿ ಪ್ರಯತ್ನ: ಟೀಕೆ

ಬಿಜೆಪಿ ಕೆಲವು ಸಮಯಗಳಿಂದ ಪ್ರತಿಮೆಗಳ ಮೊರೆ ಹೋಗಿದೆ. ನೆಹರೂ ಪರಂಪರೆಯನ್ನು ಬದಿಗೆ ಸರಿಸಲು ಪಟೇಲರ ಹೆಸರನ್ನು ಬಳಸಲಾಗುತ್ತಿದೆ. ಇದುವರೆಗೆ ಗ್ರಹಿಸಿರುವ ಇತಿಹಾಸವನ್ನು ಬದಲಾಯಿಸಿ, ಬಲಪಂಥೀಯರೂ ಭಾರತದ ಸ್ವಾತಂತ್ರ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ತೋರಿಸಲು ಬಿಜೆಪಿ ಬಯಸುತ್ತಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಸೋಶಿಯಲ್ ಸೈಯನ್ಸ್ ರಿಸರ್ಚ್‌ನ ಸುಧಾ ಪೈ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News