ಇರಾಕ್‌ನಲ್ಲಿರುವ ಇರಾನಿ ಶಸ್ತ್ರಾಸ್ತ್ರ ನೆಲೆಗಳ ಮೇಲೆ ದಾಳಿಗೆ ಇಸ್ರೇಲ್ ಸಿದ್ಧತೆ?

Update: 2018-09-03 17:01 GMT

 ಜೆರುಸಲೇಂ,ಸೆ.2: ಯುದ್ಧಗ್ರಸ್ತ ಸಿರಿಯದಲ್ಲಿ ಸರಣಿ ವಾಯುದಾಳಿಗಳನ್ನು ನಡೆಸಿರುವಂತೆ, ಇರಾಕ್‌ನಲ್ಲಿರುವ ಶಂಕಿತ ಇರಾನಿ ಮಿಲಿಟರಿ ಶಸ್ತ್ರಾಗಾರಗಳ ಮೇಲೆಯೂ ತಾನು ದಾಳಿ ನಡೆಸುವ ಸಾಧ್ಯತೆಯಿದೆಯೆಂದು ಇಸ್ರೇಲ್ ರವಿವಾರ ಸುಳಿವು ನೀಡಿದೆ.

 ಇರಾನ್ ತನ್ನ ಅಲ್ಪ ವ್ಯಾಪ್ತಿಯ ಪ್ರಕ್ಷೇಪಕ ಕ್ಷಿಪಣಿಗಳನ್ನು ಇರಾಕ್‌ನಲ್ಲಿರುವ ತನ್ನ ಶಿಯಾ ಮೈತ್ರಿ ಗುಂಪುಗಳಿಗೆ ಹಸ್ತಾಂತರಿಸಿದೆಯೆಂದು ರಾಯ್ಟರ್ಸ್‌ ಸುದ್ದಿಸಂಸ್ಥೆಯು, ಕಳೆದ ವಾರ ವರದಿ ಮಾಡಿತ್ತು.

ಇರಾನ್‌ನ ಪ್ರಾಂತೀಯ ವಿಸ್ತರಣೆಯು, ತನ್ನ ವಿರುದ್ಧ ಹೊಸ ಮೈತ್ರಿಕೂಟಗಳನ್ನು ಸ್ಥಾಪಿಸುವ ಪ್ರಯತ್ನವಾಗಿದೆ ಎಂದು ಇಸ್ರೇಲ್ ಭಾವಿಸುತ್ತಿದೆ. ಸಿರಿಯದಲ್ಲಿ ನಡೆಯುತ್ತಿರುವ ಸಮರದಲ್ಲಿ, ಅಧ್ಯಕ್ಷ ಬಶರ್ ಅಲ್ ಅಸ್ಸದ್ ಅವರ ಸರಕಾರಿ ಪಡೆಗಳಿಗೆ ಇರಾನ್ ಸೇನೆಯು ನೆರವಾಗುವುದನ್ನು ತಡೆಯಲು ಇಸ್ರೇಲ್ ಕಳೆದ ವಾರ ಸಿರಿಯದ ವಿವಿಧೆಡೆ ವಾಯುದಾಳಿಗಳನ್ನು ನಡೆಸಿತ್ತು.

ಇಸ್ರೇಲ್‌ನ ರಕ್ಷಣಾ ಸಚಿವ ಅವಿಗ್‌ಡೊರ್ ಲಿಬೆರ್‌ಮ್ಯಾನ್ ರವಿವಾರ ಜೆರುಸಲೇಂನಲ್ಲಿ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡುತ್ತಾ, ಸಿರಿಯದಲ್ಲಿ ನಡೆಯುತ್ತಿರುವ ಪ್ರತಿಯೊಂದು ಸಂಗತಿಗಳ ಮೇಲೂ ನಾವು ಖಂಡಿತವಾಗಿಯೂ ನಿಗಾ ಇರಿಸಿದ್ದೇವೆ. ಇರಾನಿನ ಬೆದರಿಕೆಗಳನ್ನು ನಾವು ಕೇವಲ ಸಿರಿಯದ ಪ್ರಾಂತಕ್ಕೇ ಸೀಮಿತಗೊಳಿಸಿಲ್ಲ ಎಂದು ಹೇಳಿದ್ದಾರೆ.

 ಆದರೆ ತಾಂತ್ರಿಕವಾಗಿ ಇಸ್ರೇಲ್ ವಿರುದ್ಧ ಸಂಘರ್ಷದಲ್ಲಿ ತೊಡಗಿರುವ ಇರಾಕ್ ಸರಕಾರ ಅಥವಾ ಅಮೆರಿಕದ ಸೇನಾ ಮಿಲಿಟರಿ ಕಮಾಂಡ್, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

   ಆದಾಗ್ಯೂ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪೆಯೊ ಅವರು ಶನಿವಾರ, ಇರಾನಿನ ಕ್ಷಿಪಣಿಗಳನ್ನು ಇರಾಕ್‌ಗೆ ವರ್ಗಾಯಿಸಲಾಗಿದೆಯೆಂಬ ವರದಿಗಳ ಬಗ್ಗೆ ತಾನು ತೀವ್ರ ಆತಂಕಹೊಂದಿರುವುದಾಗಿ ತಿಳಿಸಿದ್ದಾರೆ. ಒಂದು ವೇಳೆ ಆ ವರದಿಗಳು ನಿಜವಾಗಿದ್ದಲ್ಲಿ ಅದು ಇರಾಕಿನ ಸಾರ್ವಭೌಮತೆ ಹಾಗೂ ಇರಾನ್ ಜೊತೆ ಅಂತಾರಾಷ್ಟ್ರೀಯ ಅಣು ಒಪ್ಪಂದಕ್ಕೆ ಅನುಮೋದನೆ ನೀಡುವ ಭದ್ರತಾ ಮಂಡಳಿಯ ನಿರ್ಣಯದ ಘೋರ ಉಲ್ಲಂಘನೆಯಾಗಿದೆ ಎಂದವರು ಹೇಳಿದ್ದಾರೆ. ಆದರೆ ಟೆಹರಾನ್ ಪ್ರಕ್ಷೇಪಕ ಕ್ಷಿಪಣಿ ಕಾರ್ಯಕ್ರಮ ಹಮ್ಮಿಕೊಂಡಿದೆಯೆಂದು ಆರೋಪಿಸಿ, ಟ್ರಂಪ್ ಆಡಳಿತವು ಇರಾನ್ ಜೊತೆಗಿನ ಅಣು ಒಪ್ಪಂದದಿಂದ ಕಳೆದ ಮೇನಲ್ಲಿ ಹಿಂದೆ ಸರಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News