ಅಂತಾರಾಷ್ಟ್ರೀಯ ಗಡಿರೇಖೆಯ ಮುಂಚೂಣಿ ಪ್ರದೇಶದ ಅಭಿವೃದ್ಧಿಗೆ ಕೇಂದ್ರದಿಂದ 400 ಕೋ. ರೂ. ಬಿಡುಗಡೆ

Update: 2018-09-03 17:06 GMT

ಹೊಸದಿಲ್ಲಿ, ಸೆ. 3: ಗಡಿಯಲ್ಲಿ ವಾಸಿಸುತ್ತಿರುವ ಜನರ ಜೀವನ ಸುಧಾರಿಸುವ ಮಹತ್ವಾಕಾಂಕ್ಷಿ ಯೋಜನೆಯ ಒಂದು ಭಾಗವಾಗಿ ಮುಂಚೂಣಿ ಪ್ರದೇಶವನ್ನು ಅಭಿವೃದ್ಧಿಗೊಳಿಸಲು ಅಂತಾರಾಷ್ಟ್ರೀಯ ಗಡಿ ರೇಖೆ ಹೊಂದಿರುವ 10 ರಾಜ್ಯಗಳಿಗೆ ಕೇಂದ್ರ ಸರಕಾರ ಸುಮಾರು 400 ಕೋ. ರೂ. ಬಿಡುಗಡೆ ಮಾಡಿದೆ.

17 ರಾಜ್ಯಗಳಲ್ಲಿರುವ ಅಂತಾರಾಷ್ಟ್ರೀಯ ಗಡಿ ರೇಖೆಯಲ್ಲಿ ಇರುವ ಗ್ರಾಮಗಳ ಸರ್ವ ವಿಧದ ಅಭಿವೃದ್ಧಿಗೆ 2017-18ರಲ್ಲಿ ಬಿಡುಗಡೆಗೊಳಿಸಲಾದ 1,100 ಕೋ. ರೂ.ನೊಂದಿಗೆ ಹೆಚ್ಚುವರಿಯಾಗಿ ಪ್ರಸಕ್ತ ವಿತ್ತ ವರ್ಷದಲ್ಲಿ ಈ ನಿಧಿ ಬಿಡುಗಡೆ ಮಾಡಲಾಗಿದೆ.

2018-19ರ ಅವಧಿಯಲ್ಲಿ ಗಡಿ ಪ್ರದೇಶ ಅಭಿವೃದ್ಧಿ ಯೋಜನೆ (ಬಿಎಡಿಪಿ)ಯ ಅಡಿ ಜಮ್ಮು ಹಾಗೂ ಕಾಶ್ಮೀರ, ಅಸ್ಸಾಂ, ಹಿಮಾಚಲ ಪ್ರದೇಶ, ಮಣಿಪುರ, ಅರುಣಾಚಲಪ್ರದೇಶ, ಮೇಘಾಲಯ, ಮಿರೆರಾಂ, ನಾಗಾಲ್ಯಾಂಡ್ ಹಾಗೂ ಪಶ್ಚಿಮಬಂಗಾಳ ಸರಕಾರಕ್ಕೆ 399.44 ಕೋ. ರೂ. ಇದುವರೆಗೆ ಬಿಡುಗಡೆ ಮಾಡಲಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಗಡಿ ರೇಖೆಯಿಂದ 50 ಕಿ. ಮೀ. ಒಳಗೆ ವಾಸಿಸುವ ಜನರನ್ನು ಗುರಿಯಾಗಿರಿಸಿ ಗಡಿ ಪ್ರದೇಶದ ಜನರ ವಿಶೇಷ ಅಭಿವೃದ್ಧಿ ಸಾಧಿಸಲು 17 ರಾಜ್ಯಗಳ 111 ಗಡಿ ಜಿಲ್ಲೆಗಳನ್ನು ಗಡಿ ಪ್ರದೇಶ ಅಭಿವೃದ್ಧಿ ಕಾರ್ಯಕ್ರಮ ಒಳಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಡಿ ಪ್ರದೇಶದಲ್ಲಿ ಸುಸ್ಥಿರ ಬದುಕು ಸಾಧ್ಯವಾಗುವಂತೆ ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲೆ, ಕುಡಿಯುವ ನೀರು ಪೂರೈಕೆ, ಸಮುದಾಯ ಭವನ, ಚರಂಡಿ ನಿರ್ಮಾಣವನ್ನು ಗಡಿ ಪ್ರದೇಶ ಅಭಿವೃದ್ಧಿ ಯೋಜನೆ ಒಳಗೊಂಡಿದೆ ಎಂದು ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News