ಹೈದರಾಬಾದ್: ನಿಝಾಮರ ಚಿನ್ನದ ಬುತ್ತಿ, ಚಹಾ ಕಪ್ ಮ್ಯೂಸಿಯಂನಿಂದ ಕಳವು

Update: 2018-09-04 03:21 GMT

ಹೈದರಾಬಾದ್, ಸೆ. 4: ಇಲ್ಲಿನ ಪುರಾನಿ ಹವೇಲಿಯಲ್ಲಿರುವ ನಿಝಾಮರ ಮ್ಯೂಸಿಯಂಗೆ ರವಿವಾರ ಮಧ್ಯರಾತ್ರಿಯ ಬಳಿಕ ವೆಂಟಿಲೇಟರ್ ಮೂಲಕ ನುಗ್ಗಿದ ಕಳ್ಳರು, ಹೈದರಾಬಾದ್ ನಿಝಾಮರ ಕಾಲದ ವಜ್ರಖಚಿತ ಚಿನ್ನದ ಬುತ್ತಿ ಮತ್ತು ಚಿನ್ನದ ಚಹಾ ಕಪ್ ಕಳವು ಮಾಡಿದ್ದಾರೆ. ಇವುಗಳನ್ನು ಹೈದರಾಬಾದ್‌ನ ಕೊನೆಯ ನಿಝಾಮ ಮೀರ್ ಉಸ್ಮಾನ್ ಅಲಿಖಾನ್, ಅಸಫ್ ಝಾ-7 ಬಳಸುತ್ತಿದ್ದರು ಎನ್ನಲಾಗಿದೆ.

ಈ ಕಳ್ಳರ ಪತ್ತೆಗೆ ಹೈದರಾಬಾದ್ ಪೊಲೀಸರು ಜಾಲ ಬೀಸಿದ್ದು, 10 ತಂಡಗಳನ್ನು ರಚಿಸಿದ್ದಾರೆ. ಈ ಪುರಾತನ ವಸ್ತುಗಳ ಮೌಲ್ಯ ಅಂತಾರಾಷ್ಟ್ರೀಯ ಹರಾಜಿನಲ್ಲಿ 50 ಕೋಟಿಗಿಂತಲೂ ಅಧಿಕವಾಗಬಹುದು ಎಂದು ಅಂದಾಜಿಸಲಾಗಿದೆ. ಮೂರು ಅಂತಸ್ತಿನ ಟಿಫನ್ ಬಾಕ್ಸ್ 2 ಕೆ.ಜಿ. ತೂಕವಿದ್ದು, ಇದಕ್ಕೆ ವಜ್ರ ಮತ್ತು ಮಾಣಿಕ್ಯ ಅಳವಡಿಸಲಾಗಿದೆ.

ಇವುಗಳನ್ನು ಪ್ರದರ್ಶಕ್ಕೆ ಇಟ್ಟಿದ್ದ ಕಪಾಟಿನಿಂದ ಈ  ವಸ್ತುಗಳು ಕಳ್ಳತನವಾಗಿರುವ ಬಗ್ಗೆ ಮಾಹಿತಿ ಸಿಕ್ಕಿದ ತಕ್ಷಣ ಇಡೀ ಆವರಣವನ್ನು ಮುಚ್ಚಲಾಗಿದ್ದು, ಪುರಾವೆ ನಾಶವಾಗದಂತೆ ಎಚ್ಚರ ವಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನಾ ಸ್ಥಳವನ್ನು ವೀಕ್ಷಿಸಿದಾಗ, ಕಳ್ಳರು ಮರದ ವೆಂಟಿಲೇಟರ್ ಮೂಲಕ ಕೊಠಡಿಯನ್ನು ಪ್ರವೇಶಿಸಿರುವುದು ತಿಳಿದುಬಂದಿದೆ. ಕೊಠಡಿಯ ವಿನ್ಯಾಸದ ಬಗ್ಗೆ ಮಾಹಿತಿ ಇರುವವರೇ ಈ ಕೃತ್ಯ ಎಸಗಿರಬೇಕು ಎಂದು ಶಂಕಿಸಲಾಗಿದೆ. ಏಕೆಂದರೆ ಸಿಸಿಟಿವಿ ಕ್ಯಾಮೆರಾವನ್ನು ತಿರುಗಿಸಿ, ಇದರಲ್ಲಿ ದೃಶ್ಯಾವಳಿ ಸೆರೆ ಆಗದಂತೆ ಎಚ್ಚರ ವಹಿಸಿದ್ದಾರೆ.

ಸುಮರು 20 ಅಡಿ ಇಳಿದು ನೆಲ ಅಂತಸ್ತು ತಲುಪಿ, ಕಪಾಟಿನ ಫ್ರೇಮ್ ಮುರಿದು ಈ ಪ್ರಾಚ್ಯ ವಸ್ತುಗಳನ್ನು ಅಪಹರಿಸಿದ್ದಾರೆ. ಅದೇ ಮಾರ್ಗದ ಮೂಲಕ ಪರಾರಿಯಾಗಿದ್ದಾರೆ. ಸೋಮವಾರ ಮುಂಜಾನೆ 9 ಗಂಟೆಗೆ ಸಿಬ್ಬಂದಿ ಮ್ಯೂಸಿಯಂ ತೆರೆದಾಗ, ಚಿನ್ನದ ವಸ್ತುಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಮೊದಲು ಮ್ಯೂಸಿಯಂನಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳ ಕೈವಾಡ ಇದರಲ್ಲಿ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News