ವಿಮಾನದಿಂದ ಹೊರಬಂದರೆ ನಿಮ್ಮನ್ನು ಕೊಲ್ಲುತ್ತೇವೆ ಎಂದು ಬಿಜೆಪಿ ಕಾರ್ಯಕರ್ತರು ಬೆದರಿಸಿದರು

Update: 2018-09-05 07:25 GMT

ಚೆನ್ನೈ, ಸೆ.5: ಬಿಜೆಪಿ ಸರಕಾರದ ವಿರುದ್ಧ ಘೋಷಣೆ ಕೂಗಿದ ಆರೋಪದ ಮೇಲೆ ಬಂಧಿತರಾಗಿದ್ದ ಕೆನಡಾದಲ್ಲಿನ ಸಂಶೋಧನಾ ವಿದ್ಯಾರ್ಥಿನಿ ಸೋಫಿಯಾ ಲೂಯಿಸ್ ಗೆ ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.

ಟ್ಯುಟಿಕೊರಿನ್ ವಿಮಾನ ನಿಲ್ದಾಣದಲ್ಲಿ ತಮ್ಮ ಪುತ್ರಿಯನ್ನು ಸುತ್ತುವರಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಸೋಫಿಯಾ ತಂದೆ ಡಾ. ಸ್ಯಾಮಿ ನೀಡಿದ ದೂರಿನ ಮೇಲೆ ಪೊಲೀಸರು ಇನ್ನಷ್ಟೇ ಕ್ರಮ ಕೈಗೊಳ್ಳಬೇಕಿದೆ.

ಸೌಂದರರಾಜನ್ ಅವರು ಪ್ರಯಾಣಿಸುತ್ತಿದ್ದ ವಿಮಾನದಲ್ಲಿಯೇ ಡಾ. ಸ್ಯಾಮಿ ತಮ್ಮ ಪತ್ನಿ ಹಾಗೂ ಪುತ್ರಿಯ ಜತೆ ಚೆನ್ನೈನಿಂದ ತೂತುಕುಡಿಗೆ (ಟ್ಯುಟಿಕೊರಿನ್)  ಪ್ರಯಾಣಿಸುತ್ತಿದ್ದಾಗ ಸೋಫಿಯಾ ‘ಬಿಜೆಪಿಯ ಫ್ಯಾಸಿಸ್ಟ್ ಆಡಳಿತಕ್ಕೆ ಧಿಕ್ಕಾರ’ ಎಂದು ಕೂಗಿ ಎಲ್ಲರನ್ನೂ ಚಕಿತಗೊಳಿಸಿದ್ದರು. “ವಿಮಾನದಲ್ಲಿ ಏನನ್ನೂ ಹೇಳದ ಬಿಜೆಪಿ ನಾಯಕಿ ವಿಮಾನವು ನಿಲ್ದಾಣದಲ್ಲಿ ಇಳಿದೊಡನೆ ಅಲ್ಲಿದ್ದ ಎಲ್ಲಾ ಬಿಜೆಪಿ ಕಾರ್ಯಕರ್ತರನ್ನು ಜತೆಗೂಡಿಸಿದಾಗ ಅವರೆಲ್ಲರೂ ನಮ್ಮ ವಿರುದ್ಧ ಘೋಷಣೆ ಕೂಗಿ ಬೆದರಿಸಲಾರಂಭಿಸಿದ್ದರು. ವಿಮಾನದಿಂದ ಹೊರಬಂದರೆ ನಿಮ್ಮನ್ನು ಕೊಲ್ಲುತ್ತೇವೆ ಎಂದರು. ಕೆಟ್ಟ ಭಾಷೆಯನ್ನು ಅವರು ಉಪಯೋಗಿಸಿದರೂ ನನ್ನ ಪುತ್ರಿ ಬೆದರಲಿಲ್ಲ” ಎಂದು ಡಾ .ಸ್ಯಾಮಿ ಹೇಳುತ್ತಾರೆ.

“ಪೊಲೀಸರು ನಮ್ಮನ್ನು  ಪ್ರತ್ಯೇಕ ಕೊಠಡಿಗೆ ಕರೆದುಕೊಂಡು ಹೋಗಿ ಕ್ಷಮೆ ಕೇಳಿದರೆ ದೊಡ್ಡ ವಿಚಾರವಾಗದು ಎಂದರೂ ನನ್ನ ಪುತ್ರಿ ಕ್ಷಮೆಯಾಚಿಸಲು ನಿರಾಕರಿಸಿ ತನಗೆ ವಾಕ್ ಸ್ವಾತಂತ್ರ್ಯವಿಲ್ಲವೇ ಎಂದು ಪ್ರಶ್ನಿಸಿದಾಗ ಸೌಂದರರಾಜನ್ ಪೊಲೀಸ್ ದೂರು ನೀಡಿದ್ದರು” ಎಂದು ಡಾ.ಸ್ಯಾಮಿ ವಿವರಿಸುತ್ತಾರೆ.

ವಿಮಾನ ನಿಲ್ದಾಣದಲ್ಲಿ ಒಂದು ಗುಂಪು ನಮ್ಮನ್ನು ಹೋಗಗೊಡುವುದಿಲ್ಲ ಎಂದರೆ ಇನ್ನೊಂದು ಸುಮಾರು 50 ಜನರ ಗುಂಪು  ನಮ್ಮನ್ನು ಸುತ್ತುವರಿದು ಬೆದರಿಸಿತ್ತು. ಆದರೆ ಇಲ್ಲಿಯ ತನಕ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ವಿಷಾದದಿಂದ ನುಡಿಯುತ್ತಾರೆ.

“ನಾವು ಬಿಜೆಪಿ ನಾಯಕಿಯನ್ನು ಈ ಹಿಂದೆ ನೋಡಿಲ್ಲ, ಒಂದೇ ವಿಮಾನದಲ್ಲಿ ಪಯಣಿಸದೇ ಇದ್ದರೆ ಈ ಸಮಸ್ಯೆ ಎದುರಾಗುತ್ತಿರಲಿಲ್ಲ, ನನ್ನ ಪುತ್ರಿ ಕೆನಡಾದಲ್ಲಿ ಕಲಿಯುತ್ತಿದ್ದಾಳೆ, ಆಕೆಯ ಪಾಸ್ ಪೋರ್ಟ್ ಬ್ಲಾಕ್ ಮಾಡಲು ಯತ್ನಿಸುತ್ತಿದ್ದಾರೆ. ಇದು ಒಂದು ವಿಧದ ಹಿಂಸೆಯಲ್ಲವೇ ?'' ಎಂದು ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News