ಸೈಬರ್‌ಕಾಂಡ್ರಿಯಾ ಎಂಬ ಈ ಅಂತರ್ಜಾಲ ಸಮಸ್ಯೆ ನಿಮಗೆ ಗೊತ್ತೇ?

Update: 2018-09-06 04:26 GMT

ಈ ಅಂತರ್ಜಾಲ ಯುಗವು ಪ್ರತಿಯೊಂದೂ ಮಾಹಿತಿಯನ್ನು ನಮ್ಮ ಕೈಬೆರಳ ತುದಿಯಲ್ಲಿಯೇ ಲಭ್ಯವಾಗಿಸಿದೆ. ಸರ್ಚ ಇಂಜಿನ್‌ನಲ್ಲಿ ‘ಹೆಲ್ತ್’ಎಂಬ ಎರಡೂವರೆ ಅಕ್ಷರವನ್ನು ಟೈಪಿಸಿದರೆ ಆರೋಗ್ಯದ ಬಗ್ಗೆ ಮಾಹಿತಿಗಳನ್ನೊಳಗೊಂಡಿರುವ ಸಾವಿರಾರು ಪುಟಗಳು ನಮ್ಮೆದುರು ತೆರೆದುಕೊಳ್ಳುತ್ತವೆ. ಇದೇ ವೇಳೆ ತಮ್ಮ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಅಂತರ್ಜಾಲವನ್ನು ಜಾಲಾಡುವವವರ ಸಂಖ್ಯ ಕಡಿಮೆಯೇನಿಲ್ಲ. ಆದರೆ ಕೆಲವರಿಗೆ ಅದೇ ಒಂದು ಗೀಳು ಆಗಿರುತ್ತದೆ ಮತ್ತು ಪದೇಪದೇ ಆರೋಗ್ಯದ ಕುರಿತು ಜಾಲಾಡುತ್ತಿದ್ದರೆ ಅದು ಅವರ ಮಾನಸಿಕತೆಯ ಮೇಲೆ ಪರಿಣಾಮವನ್ನು ಬೀರುತ್ತದೆ. ಇದನ್ನು ಸೈಬರ್‌ಕಾಂಡ್ರಿಯಾ ಅಥವಾ ಕಂಪ್ಯೂಕಾಂಡ್ರಿಯಾ ಎಂದು ಕರೆಯಲಾಗುತ್ತದೆ. ಜನರು ತಮ್ಮ ಆರೋಗ್ಯದ ಬಗ್ಗೆ ವಿಪರೀತವಾಗಿ ಚಿಂತಿಸುವ ಮತ್ತು ಮಾನಸಿಕವಾಗಿ ಗೊಂದಲಕ್ಕೊಳಗಾಗುವ ಈ ವಿಭಿನ್ನ ವಿದ್ಯಮಾನ ವೈದ್ಯರಲ್ಲಿ ಕಳವಳವನ್ನು ಸೃಷ್ಟಿಸಿದೆ.

ಜನರು ತಮ್ಮ ಆರೋಗ್ಯದ ಬಗ್ಗೆ ಅತಿಯಾಗಿ ಚಿಂತಿಸುವುದು ಮತ್ತು ವೈದ್ಯರನ್ನು ಭೇಟಿಯಾಗುವ ಬದಲು ಅಂತರ್ಜಾಲದಲ್ಲಿ ಲಭ್ಯ ಮಾಹಿತಿಗಳ ನೆರವಿನಿಂದ ಸ್ವ ರೋಗನಿರ್ಣಯಕ್ಕೆ ಪ್ರಯತ್ನಿಸುವುದು ಅವರು ಸೈಬರ್‌ಕಾಂಡ್ರಿಯಾಕ್ಕೊಳಗಾಗಲು ಪ್ರಮುಖ ಕಾರಣವಾಗಿದೆ.

ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ನೋವಿರುವವರು ಅಥವಾ ತನಗೆ ಆಪ್ತ ವ್ಯಕ್ತಿಯಲ್ಲಿ ಗಂಭೀರ ಕಾಯಿಲೆಯಿದೆ ಎನ್ನುವುದನ್ನು ತಿಳಿದಿರುವ ವ್ಯಕ್ತಿಗಳು ಸೈಬರ್‌ಕಾಂಡ್ರಿಯಾಕ್ಕೆ ಸುಲಭವಾಗಿ ಗುರಿಯಾಗುತ್ತಾರೆ. ಹೊಸದಾಗಿ ತಾಯಿಪಟ್ಟಕ್ಕೇರಿದವರೂ ಕೂಡ ತಮ್ಮ ನವಜಾತ ಶಿಶುವಿನ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಗಳಿಗಾಗಿ ಅಂತರ್ಜಾಲವನ್ನು ಅತಿಯಾಗಿ ಜಾಲಾಡುತ್ತಿದ್ದರೆ ಸೈಬರ್‌ಕಾಂಡ್ರಿಯಾಕ್ಕೆ ಗುರಿಯಾಗುವ ಅಪಾಯದಲ್ಲಿರುತ್ತಾರೆ.

ಸೈಬರ್‌ಕಾಂಡ್ರಿಯಾದ ಲಕ್ಷಣಗಳು

ದಿನಕ್ಕೆ ಒಂದರಿಂದ ಮೂರು ಗಂಟೆಗಳಷ್ಟು ಕಾಲ ಅಂತರ್ಜಾಲದಲ್ಲಿ ರೋಗಗಳ ಲಕ್ಷಣಗಳನ್ನು ಹುಡುಕಾಡುವುದು, ಅನಾರೋಗ್ಯದಿಂದಿದ್ದಾಗ ಕಾಯಿಲೆಯ ಬಗ್ಗೆ ತಿಳಿದುಕೊಳ್ಳಲು ಇನ್ನೂ ಹೆಚ್ಚಿನ ಅವಧಿಗೆ ಇಂಟರ್ನೆಟ್ ಬಳಸುವುದು, ಕಾಯಿಲೆಗಳಿಗೆ ತುತ್ತಾಗುವ ಭೀತಿಯಲ್ಲಿರುವುದು ಇವೆಲ್ಲ ಸೈಬರ್‌ಕಾಂಡ್ರಿಯಾದ ಲಕ್ಷಣಗಳಾಗಿವೆ. ಕಾಯಲೆಗಳು ಮತ್ತು ಅವುಗಳ ಲಕ್ಷಣಗಳಿಗೆ ಸಂಬಂಧಿಸಿದಂತೆ ಅಂತರ್ಜಾಲದಲ್ಲಿ ಅತಿಯಾಗಿ ಶೋಧಿಸಿದಾಗ ಅಂತಹ ವ್ಯಕ್ತಿಯಲ್ಲಿ ಆರೋಗ್ಯದ ಕುರಿತ ಕಳವಳ ಇನ್ನಷ್ಟು ಹೆಚ್ಚಾಗುತ್ತದೆ.

ಸೈಬರ್‌ಕಾಂಡ್ರಿಯಾದ ಅಪಾಯಗಳು

ಹೆಚ್ಚಿನವರು ತಮ್ಮ ಆರೋಗ್ಯದ ಬಗ್ಗೆ ಅತಿಯಾದ ಕಾಳಜಿಯನ್ನು ಹೊಂದಿರುತ್ತಾರೆ,ಪರಿಣಾಮವಾಗಿ ಒತ್ತಡ ಮತ್ತು ಉದ್ವಿಗ್ನತೆಯಿಂದಾಗಿ ಆರೋಗ್ಯದ ಮೇಲೆ ದುಷ್ಪರಿಣಾಮವುಂಟಾಗುತ್ತದೆ. ಆರೋಗ್ಯದ ಬಗ್ಗೆ ಅತಿಯಾದ ಕಾಳಜಿಯು ವ್ಯಕ್ತಿಯಲ್ಲಿ ತಳಮಳವನ್ನು ಹೆಚ್ಚಿಸುತ್ತದೆ ಮತ್ತು ಇಂತಹ ಸ್ಥಿತಿಯಿಂದ ಪಾರಾಗಲು ವೈದ್ಯರ ಸಲಹೆ ಪಡೆದುಕೊಳ್ಳುವುದು ಅಗತ್ಯವಾಗುತ್ತದೆ.

ಜನರು ಹೆಚ್ಚಿನ ಸಂದರ್ಭಗಳಲ್ಲಿ ಔಷಧಿಗಳು ಮತ್ತು ಚಿಕಿತ್ಸೆಗಳಿಗೆ ಸಂಬಂಧಿಸಿದಂತೆ ಅಂತರ್ಜಾಲದಲ್ಲಿ ಲಭ್ಯ ಮಾಹಿತಿಗಳಿಗಾಗಿ ಹುಡುಕಾಡುತ್ತ ತಪ್ಪು ರೋಗನಿರ್ಧಾರಕ್ಕೆ ಬರುವ ಅಪಾಯವಿರುತ್ತದೆ. ನಿರ್ದಿಷ್ಟ ಕಾಯಿಲೆಗಾಗಿ ನೀವು ಹುಡುಕಾಡುತ್ತಿರುವ ಲಕ್ಷಣಗಳು ಇನ್ನೊಂದು ಕಾಯಿಲೆಯ ಲಕ್ಷಣಗಳೂ ಆಗಿರಬಹುದು. ಹೀಗಾಗಿ ಅತ್ಯುತ್ತಮ ಆರೋಗ್ಯ ಸಲಹೆಗಾಗಿ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು.

ಸೈಬರ್‌ಕಾಂಡ್ರಿಯಾಕ್ಕೆ ಚಿಕಿತ್ಸೆ

ನಾವು ಅನಾರೋಗ್ಯದಿಂದಿದ್ದಾಗ ವೈದ್ಯರು ನೀಡುವ ಚಿಕಿತ್ಸೆಗೆ ಬದಲಿ ಯಾವುದೂ ಇಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಸೈಬರ್‌ಕಾಂಡ್ರಿಯಾದಿಂದ ಪಾರಾಗುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗುತ್ತದೆ. ನಿಮಗೆ ನಿಮ್ಮ ಆರೋಗ್ಯದ ಕುರಿತು ಅತಿಯಾದ ಕಾಳಜಿಯಿದ್ದರೆ ಸ್ವ ರೋಗನಿರ್ಧಾರದ ಬದಲು ತಜ್ಞವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು. ಇದರಿಂದ ಸಮಸ್ಯೆಯಂದ ಪಾರಾಗಲು ಸಾಧ್ಯವಾಗುತ್ತದೆ ಮತ್ತು ನಿಮಗೆ ಉಂಟಾಗಿರುವ ಅನಾರೋಗ್ಯವನ್ನು ನಿಖರವಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

ಸೈಬರ್‌ಕಾಂಡ್ರಿಯಾದಿಂದ ಬಳಲುತ್ತಿರುವವರಿಗೆ ಕಾಗ್ನಿಟಿವ್ ಬಿಹೇವಿಯರಲ್ ಚಿಕಿತ್ಸೆ ಅಗತ್ಯವಾಗುತ್ತದೆ. ಇದೊಂದು ಮಾನಸಿಕ ಚಿಕಿತ್ಸೆಯಾಗಿದ್ದು,ತನ್ನ ಬಗ್ಗೆ ಮತ್ತು ಸುತ್ತಲಿನ ಜಗತ್ತಿನ ಬಗ್ಗೆ ವ್ಯಕ್ತಿಯಲ್ಲಿ ಮನೆ ಮಾಡಿರುವ ನಕಾರಾತ್ಮಕ ಚಿಂತನೆಗಳನ್ನು ತೊಲಗಿಸಿ ಆತನ ವರ್ತನೆಗಳಲ್ಲಿ ಬದಲಾವಣೆಗಳನ್ನು ತರಲಾಗುತ್ತದೆ. ಖಿನ್ನತೆಯಂತಹ ಮನಸ್ಸಿಗೆ ಸಂಬಂಧಿಸಿದ ಸಮಸ್ಯೆಗಳಿಗೂ ಈ ಚಿಕಿತ್ಸೆಯನ್ನು ಬಳಸಲಾಗುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಓದುವ ಗೀಳಿನಿಂದ ಹೊರಬರಲು ಈ ಚಿಕಿತ್ಸೆಯು ನೆರವಾಗುತ್ತದೆ.

ಯಾವಾಗಲೂ ದೃಢೀಕೃತ ವೆಬ್ ಸೈಟ್‌ಗಳಿಂದ ಮಾತ್ರ ಮಾಹಿತಿಗಳನ್ನು ಪಡೆಯಬೇಕು. ನೀವು ಯಾವುದೇ ಮಾಹಿತಿಯನ್ನು ಓದಿರಲಿ,ಅದನ್ನು ಕುರುಡಾಗಿ ನಂಬಬೇಡಿ ಮತ್ತು ತಕ್ಷಣವೇ ಅನುಸರಿಸುವ ದುಸ್ಸಾಹಸ ಮಾಡಬೇಡಿ. ಮೊದಲು ಆ ಮಾಹಿತಿಯ ಬಗ್ಗೆ ವೈದ್ಯರಲ್ಲಿ ಸಮಾಲೋಚಿಸಿ ಅದರ ಸಾಧಕಬಾಧಕಗಳನ್ನು ತಿಳಿದುಕೊಳ್ಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News