ಜಾಮೀನಿನಲ್ಲಿ ಹೊರಬಂದ ಅಜ್ಮೀರ್ ದರ್ಗಾ ಸ್ಫೋಟ ಪ್ರಕರಣದ ದೋಷಿಗೆ ಹೂಹಾರದ ಸ್ವಾಗತ!

Update: 2018-09-05 12:42 GMT

ಸೂರತ್, ಸೆ.5: ಹನ್ನೊಂದು ವರ್ಷಗಳ ಹಿಂದೆ, 2007ರಲ್ಲಿ ನಡೆದ ಅಜ್ಮೀರ್ ದರ್ಗಾ ಸ್ಫೋಟ ಪ್ರಕರಣದಲ್ಲಿನ ಶಾಮೀಲಾತಿಗಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಇಬ್ಬರಲ್ಲಿ ಒಬ್ಬನಾಗಿರುವ ಭವೇಶ್ ಪಟೇಲ್ ಎರಡು ದಿನಗಳ ಹಿಂದೆ ಜಾಮೀನಿನ ಮೇಲೆ ಹೊರ ಬಂದು  ಭರೂಚ್ ನಲ್ಲಿರುವ ತನ್ನ ಮನೆಗೆ ಬಂದಾಗ  ಆತನಿಗೆ ಭವ್ಯ ಸ್ವಾಗತ ದೊರಕಿದೆ. ಬಿಜೆಪಿ ಮತ್ತು ವಿಹಿಂಪ ಪದಾಧಿಕಾರಿಗಳು ಸೇರಿ ಹಲವಾರು ಮಂದಿ ಈ ಸಂದರ್ಭ ಹಾಜರಿದ್ದರು.

ಆಗಸ್ಟ್ 2017ರಲ್ಲಿ ಪಟೇಲ್ (40) ಹಾಗೂ ಅಜ್ಮೀರ್ ನ ದೇವೇಂದ್ರ ಗುಪ್ತಾ (42) ಎಂಬಿಬ್ಬರಿಗೆ ಜೈಪುರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇಬ್ಬರಿಗೂ ರಾಜಸ್ಥಾನ ಹೈಕೋರ್ಟ್ ಕಳೆದ ವಾರ ಜಾಮೀನು ನೀಡಿತ್ತು.  ಅವರನ್ನು ಸಾಂದರ್ಭಿಕ ಸಾಕ್ಷ್ಯ ಹಾಗೂ  ಇತರ ಸಾಧ್ಯತೆಗಳ ಆಧಾರದಲ್ಲಿ ದೋಷಿಗಳೆಂದು ಘೋಷಿಸಲಾಗಿತ್ತು ಎಂದು ಅವರ ವಕೀಲರು ವಾದಿಸಿದ್ದರು.

ರವಿವಾರ ಪಟೇಲ್  ಭರೂಚ್ ರೈಲು ನಿಲ್ದಾಣದಲ್ಲಿ ಬಂದಿಳಿದಾಗ  ದೊಡ್ಡ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಕಾವಿಧಾರಿಯಾಗಿದ್ದ ಆತ ತನ್ನನ್ನು ಸ್ವಾಮಿ ಮುಕ್ತಾನಂದ ಎಂದು ಕರೆದುಕೊಂಡಿದ್ದಾನಲ್ಲದೆ ದಂಡಿಯಾಬಜಾರ್ ಪ್ರದೇಶದಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನದಿಂದ ಹಾಥಿಖಾನದಲ್ಲಿರುವ ತನ್ನ ನಿವಾಸದ ತನಕ ಮೆರವಣಿಗೆಯಲ್ಲಿ ಸಾಗಿದ್ದ.

ದಾರಿಯುದ್ದಕ್ಕೂ ಜನರು ಆತನನ್ನು ತಮ್ಮ ಹೆಗಲಲ್ಲಿ ಕೂರಿಸಿದ್ದರಲ್ಲದೆ ಆತನಿಗೆ ಹೂವಿನ ಮಳೆಗರೆದಿದ್ದರು ಕೆಲವು ಕಡೆ ಪಟಾಕಿಗಳನ್ನೂ ಸಿಡಿಸಲಾಯಿತಲ್ಲದೆ, ಡಿಜೆ ಸಂಗೀತವೂ ಇತ್ತು.

ಬಿಜೆಪಿ ನಾಯಕ ಹಾಗೂ ಭರೂಚ್ ಮುನಿಸಿಪಾಲಿಟಿ  ಅಧ್ಯಕ್ಷ ಸುರ್ಭಿಬೆನ್ ತಮಕುವಾಲ, ಕೌನ್ಸಿಲರ್ ಮಾರುತಿ ಸಿನ್ಹ ಹಾಗೂ ಕೆಲ ಆರೆಸ್ಸೆಸ್ ಸದಸ್ಯರೂ ಹಾಜರಿದ್ದರು. ಭವೇಶ್ ಪಟೇಲ್ ಹಾಗೂ ದೇವೇಂದ್ರ ಗುಪ್ತಾ ಇಬ್ಬರೂ ಮಾಜಿ ಆರೆಸ್ಸೆಸ್ ಕಾರ್ಯಕರ್ತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News