4ರ ಹರೆಯದ ಬಾಲಕನ ಹತ್ಯೆ: ಆರೋಪಿಗಳಿಗೆ ಗಲ್ಲು

Update: 2018-09-05 14:49 GMT

ಶಿಮ್ಲಾ, ಸೆ.5: 2014ರಲ್ಲಿ ಯುಗ್ ಗುಪ್ತಾ ಎಂಬ ನಾಲ್ಕರ ಹರೆಯದ ಬಾಲಕನಿಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ ಪ್ರಕರಣದ ಮೂವರು ಆರೋಪಿಗಳಿಗೆ ಹಿಮಾಚಲ ಪ್ರದೇಶ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಆರೋಪಿಗಳಾದ ಚಂದರ್ ಶರ್ಮಾ, ತಾಜಿಂದರ್ ಪಾಲ್ ಸಿಂಗ್ ಮತ್ತು ವಿಕ್ರಾಂತ್ ಬಕ್ಷಿ ಬಾಲಕನ ಅಪಹರಣ, ಹತ್ಯೆ ಮತ್ತು ಸಂಚಿನಲ್ಲಿ ದೋಷಿಗಳಾಗಿದ್ದಾರೆ ಎಂದು ಸೆಶನ್ಸ್ ನ್ಯಾಯಾಲಯ ನ್ಯಾಯಾಧೀಶ ವಿರೇಂದರ್ ಸಿಂಗ್ ತೀರ್ಪು ನೀಡಿದ್ದಾರೆ. ಆರೋಪಿಗಳಿಗೆ ಶಿಕ್ಷೆಯನ್ನು ಘೊಷಿಸುವುದಕ್ಕೂ ಮುನ್ನ ನ್ಯಾಯಾಲಯವು ಅವರ ಹೆತ್ತವರ ಹೇಳಿಕೆಗಳನ್ನು ದಾಖಲಿಸಿತ್ತು.

ಉದ್ಯಮಿಯೊಬ್ಬರ ಪುತ್ರನಾಗಿದ್ದ ಯುಗ್ ಗುಪ್ತಾನನ್ನು 2014ರ ಜೂನ್ 14ರಂದು ಶಿಮ್ಲಾದ ರಾಮ್ ಬಝಾರ್‌ನಲ್ಲಿರುವ ಆತನ ಮನೆಯ ಎದುರಿನಿಂದ ನೆರೆಹೊರೆಯ ನಿವಾಸಿ ಚಂದರ್ ಶರ್ಮಾ ಚಾಕಲೇಟ್ ಆಸೆ ತೋರಿಸಿ ಅಪಹರಿಸಿದ್ದ.

ಬಾಲಕನನ್ನು ತನ್ನ ಬಂಧನದಲ್ಲಿ ನಗ್ನವಾಗಿಯೇ ಇರಿಸಿದ್ದ ಆರೋಪಿ ಆತನನ್ನು ಹಿಂಸಿಸಿ ನಿರಂತರ ಏಳು ದಿನಗಳ ಕಾಲ ಬಾಲಕನಿಗೆ ಒತ್ತಾಯಪೂರ್ವಕವಾಗಿ ಮದ್ಯ ಕುಡಿಸಿದ್ದ. ಏಳು ದಿನಗಳ ನಂತರ ಬಾಲಕನನ್ನು ಸಜೀವವಾಗಿ ನೀರಿನ ಟ್ಯಾಂಕ್‌ನೊಳಗೆ ಎಸೆಯಲಾಗಿತ್ತು. ಬಾಲಕ ಮೃತಪಟ್ಟ ಆರು ದಿನಗಳ ನಂತರ ಜೂನ್ 27ರಂದು, ಆತನ ತಂದೆಗೆ ಪತ್ರ ಬರೆದ ಆರೋಪಿ 3.6 ಕೋಟಿ ರೂ. ನೀಡುವಂತೆ ಆಗ್ರಹಿಸಿದ್ದ. ನಂತರ ಇದೇ ರೀತಿ ಮೂರು ಪತ್ರಗಳನ್ನು ಬರೆಯಲಾಗಿತ್ತು. ಯುಗ್ ಗುಪ್ತಾ ಹತ್ಯೆ ಶಿಮ್ಲಾದಲ್ಲಿ ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿತ್ತು. ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು.

ಎರಡು ವರ್ಷಗಳ ತನಿಖೆಯ ನಂತರವೂ ಪೊಲೀಸರು ಈ ಪ್ರಕರಣವನ್ನು ಬೇಧಿಸಲು ವಿಫಲವಾದಾಗ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಯಿತು. 2016ರ ಆಗಸ್ಟ್ 21ರಂದು ಸಿಐಡಿ, ಕೆಲ್‌ಸ್ಟಾನ್ ಪ್ರದೇಶದ ಶಿಮ್ಲಾ ನಗರ ಪಾಲಿಕೆಯ ನೀರು ಸಂಗ್ರಹಣ ಟ್ಯಾಂಕ್‌ನಲ್ಲಿ ಬಾಲಕನ ಅಸ್ಥಿಪಂಜರವನ್ನು ಪತ್ತೆ ಮಾಡಿತ್ತು. ನಗರದಲ್ಲಿ ಕಾಮಾಲೆ ರೋಗ ಹರಡಿದ್ದ ಪರಿಣಾಮ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲು ಅದರೊಳಗಿಳಿದಿದ್ದ ಪೌರ ಕಾರ್ಮಿಕರು ಬಾಲಕನ ಅಸ್ಥಿಪಂಜರವನ್ನು ಪತ್ತೆ ಮಾಡಿದ್ದರು. ಇದಾದ ಮರುದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿರುವುದಾಗಿ ಪೊಲೀಸರು ಘೋಷಿಸಿದರು. ಪ್ರಕರಣದ ಪ್ರಮುಖ ಆರೋಪಿ ಚಂದರ್ ಶರ್ಮಾ, ಹತ್ಯೆಯ ನಂತರ ನಡೆದ ಪ್ರತಿಭಟನೆಗಳಲ್ಲೂ ಭಾಗಿಯಾಗಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News