ಭಾರತದಲ್ಲಿ ಸತ್ಯ ಹೇಳುವವರಿಗೆ ಅಪಾಯದ ಪರಿಸ್ಥಿತಿ : ಆ್ಯಮ್ನೆಸ್ಟಿ

Update: 2018-09-05 16:22 GMT

ಹೊಸದಿಲ್ಲಿ, ಸೆ.5: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಒಂದು ವರ್ಷ ಕಳೆದಿದ್ದು ಈಗಲೂ ಹಲವಾರು ಪತ್ರಕರ್ತರು ಸುಳ್ಳು ಆರೋಪ, ದಾಳಿ ಅಥವಾ ಕೊಲೆ ಬೆದರಿಕೆ ಎದುರಿಸುತ್ತಿದ್ದಾರೆ. ಇದೀಗ ಭಾರತದಲ್ಲಿ ಸತ್ಯ ಹೇಳುವವರಿಗೆ ಅಪಾಯದ ಪರಿಸ್ಥಿತಿಯಿದೆ ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್(ಭಾರತ) ವಿಶ್ಲೇಷಿಸಿದೆ.

ಪತ್ರಿಕೋದ್ಯಮದ ಮೇಲಿನ ದಾಳಿಯು ಸಾಂವಿಧಾನಿಕ ಹಕ್ಕಾಗಿರುವ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವುದರ ಜೊತೆಗೆ ಧ್ವನಿಯನ್ನು ಅಡಗಿಸುವ ಗಂಭೀರ ಪರಿಣಾಮವನ್ನೂ ಬೀರುತ್ತದೆ. ಮಾವೋವಾದಿ ನಕ್ಸಲರ ಜೊತೆ ಸಂಪರ್ಕ ಹೊಂದಿದ್ದರೆಂಬ ಆರೋಪದಲ್ಲಿ ಸಾಮಾಜಿಕ ಕಾರ್ಯಕರ್ತರನ್ನು ಗೃಹ ಬಂಧನದಲ್ಲಿ ಇಟ್ಟಿರುವುದು ವಾಕ್ ಸ್ವಾತಂತ್ರವನ್ನು ಹತ್ತಿಕ್ಕುವ ಒಂದು ಸ್ಪಷ್ಟ ಉದಾಹರಣೆಯಾಗಿದೆ ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್(ಭಾರತ)ದ ಆಕಾರ್ ಪಟೇಲ್ ಹೇಳಿದ್ದಾರೆ.

  ಹಲವಾರು ಪತ್ರಕರ್ತರಿಗೆ ಜೀವ ಬೆದರಿಕೆ ಇದೆ. ಕಳೆದ ಅಕ್ಟೋಬರ್‌ನಲ್ಲಿ ಮಾನವ ಹಕ್ಕುಗಳ ಸಮರ್ಥಕರ ವಿರುದ್ಧ ನಡೆದ ರಾಷ್ಟ್ರವ್ಯಾಪಿ ಕಾರ್ಯಾಚರಣೆಯಲ್ಲಿ ಇಬ್ಬರು ಪತ್ರಕರ್ತರನ್ನು ಬಂಧಿಸಲಾಗಿದೆ. ಸತ್ಯವನ್ನು ಗ್ರಹಿಸಲು ನಿರಾಕರಿಸುವವರು ಪತ್ರಿಕೋದ್ಯಮವನ್ನು ದಮನ ಮಾಡಲು ಸಾಧ್ಯವಿಲ್ಲ . ಇದೀಗ ಪತ್ರಕರ್ತರ ಮೇಲೆ ನಡೆದಿರುವ ಎಲ್ಲಾ ದಾಳಿಗಳ ಬಗ್ಗೆ ತನಿಖೆ ನಡೆಸಲು ಸಕಾಲವಾಗಿದೆ ಎಂದು ಪಟೇಲ್ ಹೇಳಿದ್ದಾರೆ.

ಗೌರಿ ಲಂಕೇಶರ ಹತ್ಯೆಯು ದೇಶದಲ್ಲಿ ಪತ್ರಕರ್ತರ ಮೇಲೆ ನಡೆಯುತ್ತಿರುವ ದಾಳಿಯ ಮಾದರಿಯ ಒಂದು ಭಾಗವಾಗಿದೆ ಎಂದು ಅವರು ತಿಳಿಸಿದ್ದಾರೆ. ಪತ್ರಕರ್ತರ ಸುರಕ್ಷಾ ಸಮಿತಿ(ಸಿಪಿಜೆ) ಪ್ರಕಟಿಸಿರುವ ಜಾಗತಿಕ ನಿರ್ಭಯ ಸೂಚ್ಯಂಕದ ಪ್ರಕಾರ , ಪತ್ರಕರ್ತರನ್ನು ಹತ್ಯೆ ಮಾಡುವವರ ವಿರುದ್ಧ ಕಾನೂನುಕ್ರಮ ಜರಗಿಸುವ ಸಾಧ್ಯತೆ ಕಡಿಮೆ ಇರುವ ದೇಶಗಳ ಪಟ್ಟಿಯಲ್ಲಿ ಭಾರತ 12ನೇ ಸ್ಥಾನ(2017ರಲ್ಲಿ) ಪಡೆದಿದೆ. 2014ರಿಂದ 2017ರ ಅವಧಿಯಲ್ಲಿ ಭಾರತದಲ್ಲಿ ಮಾಧ್ಯಮದವರ ವಿರುದ್ಧ 2014 ದಾಳಿ ಪ್ರಕರಣ ವರದಿಯಾಗಿದೆ. ಜಾಗತಿಕ ಪತ್ರಿಕಾ ಸ್ವಾತಂತ್ರ ಸೂಚ್ಯಂಕದ ಪಟ್ಟಿಯಲ್ಲಿ ರುವ 180 ದೇಶಗಳಲ್ಲಿ ಭಾರತ 138ನೇ ಸ್ಥಾನದಲ್ಲಿದೆ(2017ರಲ್ಲಿ 136ನೇ ಸ್ಥಾನ).

ಪತ್ರಕರ್ತರಲ್ಲದೆ, ಇತರ ಸಾಮಾಜಿಕ ಕಾರ್ಯಕರ್ತರು, ಮಾಹಿತಿ ಹಕ್ಕು ಕಾರ್ಯಕರ್ತರನ್ನೂ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ರಾಷ್ಟ್ರೀಯ ಅಪರಾಧ ದಾಖಲೆ ಸಮಿತಿಯ ಮಾಹಿತಿಯಂತೆ 2017ರಲ್ಲಿ ಇಂತಹ 14 ಪ್ರಕರಣ ವರದಿಯಾಗಿದೆ. ಆದರೆ ಇದಕ್ಕಿಂತ ಹೆಚ್ಚಿನ ಪ್ರಕರಣ ನಡೆದಿದೆ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. 2014ರಲ್ಲಿ ರೂಪಿಸಲಾಗಿರುವ ಅಪರಾಧ ಪ್ರಕರಣಗಳ ಮಾಹಿತಿದಾರರ ಸುರಕ್ಷಾ ಕಾಯ್ದೆ ಇನ್ನೂ ಕ್ರಿಯಾಶೀಲವಾಗಿಲ್ಲ. ಈ ಮಧ್ಯೆ, ಕಾಯ್ದೆಗೆ ಕೆಲವು ತಿದ್ದುಪಡಿ ತಂದು ಕಾಯ್ದೆಯನ್ನು ದುರ್ಬಲಗೊಳಿಸಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ ಎಂಬ ದೂರು ಕೇಳಿಬರುತ್ತಿದೆ ಎಂದು ಆ್ಯಮ್ನೆಸ್ಟಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News