ಏಶ್ಯನ್ ಚಾಂಪಿಯನ್‌ಶಿಪ್ ಪದಕದತ್ತ ಧರುಣ್ ಅಯ್ಯಸ್ವಾಮಿ ಚಿತ್ತ

Update: 2018-09-05 18:36 GMT

ಹೊಸದಿಲ್ಲಿ, ಸೆ.5: ಏಶ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸುವ ಮೂಲಕ ಆತ್ಮವಿಶ್ವಾಸವನ್ನು ಹೆಚ್ಚಿ ಸಿಕೊಂಡಿರುವ ಭಾರತದ 400 ಮೀ. ಹರ್ಡಲ್ಸ್ ಅಥ್ಲೀಟ್ ಧರುಣ್ ಅಯ್ಯಸ್ವಾಮಿ ಮುಂದಿನ ವರ್ಷ ನಡೆಯಲಿರುವ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲುವತ್ತ ಚಿತ್ತವಿರಿಸಿದ್ದಾರೆ.

‘‘ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಜಯಿಸುವುದು ನನ್ನ ಮುಂದಿರುವ ತಕ್ಷಣದ ಗುರಿ. ನಾನು ಯಾವ ಪದಕ ಗೆಲ್ಲುತ್ತೇನೊ ಗೊತ್ತಿಲ್ಲ. ಆದರೆ, ಪದಕದೊಂದಿಗೆ ಮರಳುವ ವಿಶ್ವಾಸ ನನಗಿದೆ. ಕತರ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್ ಕೂಡ ನಡೆಯಲಿದೆ. ಅದರಲ್ಲೂ ಉತ್ತಮ ಪ್ರದರ್ಶನ ನೀಡುವ ಗುರಿ ಹಾಕಿಕೊಂಡಿದ್ದೇನೆ’’ ಎಂದು ಜಕಾರ್ತದಲ್ಲಿ ನಡೆದ ಏಶ್ಯನ್ ಗೇಮ್ಸ್‌ನಲ್ಲಿ 48.96 ಸೆಕೆಂಡ್‌ನಲ್ಲಿ ಗುರಿ ತಲುಪಿ ಬೆಳ್ಳಿ ಜಯಿಸಿದ್ದ ಧರುಣ್ ಹೇಳಿದ್ದಾರೆ.

‘‘ಮುಂದಿನ ವರ್ಷ 48.50 ಸೆಕೆಂಡ್‌ನಲ್ಲಿ ಗುರಿ ತಲುಪುವ ಉದ್ದೇಶವಿದೆ. ನನ್ನ ವೇಗವನ್ನು ಉತ್ತಮಪಡಿಸಿಕೊಂಡರೆ 2020ರ ಒಲಿಂಪಿಕ್ಸ್ ವೇಳೆಗೆ 48.2 ಅಥವಾ 48.1 ಸೆಕೆಂಡ್ ತನಕ ಸುಧಾರಣೆಯಾಗಬಹುದು. ಈ ಸಮಯ ಫೈನಲ್‌ಗೆ ತಲುಪಲು ಸಾಕಾಗುತ್ತದೆ. ಟ್ರಾಕ್ ಆ್ಯಂಡ್ ಫೀಲ್ಡ್ ನಲ್ಲಿ ಫೈನಲ್‌ಗೆ ತಲುಪುವುದೇ ಒಂದು ದೊಡ್ಡ ಸಾಧನೆ. ಫೈನಲ್ ತಲುಪುವುದೇ ನನ್ನ ಈಗಿನ ಗುರಿ’’ ಎಂದು ತಮಿಳುನಾಡಿನ ತಿರುಪುರದ 21ರ ಹರೆಯದ ಅಥ್ಲೀಟ್ ಹೇಳಿದ್ದಾರೆ. ಧರುಣ್ ತನ್ನ 8ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡರು. ಧರುಣ್ ತಾಯಿ ಶಾಲಾ ಶಿಕ್ಷಕಿಯಾಗಿದ್ದು ಅವರು ತನ್ನ ಮಗನ ಬೆಂಬಲಕ್ಕೆ ನಿಂತರು. ಧರುಣ್ ಸಹೋದರಿ ಈ ಹಿಂದೆ ವಾಲಿಬಾಲ್ ಆಟಗಾರ್ತಿಯಾಗಿದ್ದರು. ‘‘ನನಗೆ ತಾಯಿಯ ಬೆಂಬಲವಿಲ್ಲದಿದ್ದರೆ ಈಗ ಎಲ್ಲಿರುತ್ತಿದ್ದೆನೋ ಗೊತ್ತಿಲ್ಲ. ನನ್ನ ಕನಸನ್ನು ಹಿಂಬಾಲಿಸಲು ತಾಯಿ ಸಂಪೂರ್ಣ ಸ್ವಾತಂತ್ರ ನೀಡಿದರು. ಉದ್ಯೋಗಕ್ಕಾಗಿ ಪ್ರಯತ್ನ ನಡೆಸುವೆ. ಸೇನೆ,ನೌಕಾದಳ ಹಾಗೂ ರೈಲ್ವೇಸ್‌ನಲ್ಲಿ ಕೆಲವು ಆಫರ್ ಬಂದಿವೆ. ಆದರೆ,ಯಾವುದೂ ಖಚಿತವಾಗಿಲ್ಲ’’ ಎಂದು ಕರ್ನಾಟಕದ ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಯಾಗಿರುವ ಧರುಣ್ ಹೇಳಿದ್ದಾರೆ.

ಏಶ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಧರುಣ್,‘‘ಅರ್ಹತಾ ಸುತ್ತು ಕೊನೆಗೊಂಡ ಬಳಿಕ ನನಗೆ ಆತ್ಮವಿಶ್ಚಾಸ ಹೆಚ್ಚಾಯಿತು. ಫೈನಲ್‌ಗಿಂತ ಮೊದಲು ಕಂಚಿನ ಪದಕದ ಮೇಲೆ ಗುರಿ ಇಟ್ಟಿದ್ದೆ. ಕತರ್ ಓಟಗಾರನನ್ನು ಸೋಲಿಸುವುದು ಕಷ್ಟ ಎಂದು ನನಗೆ ಗೊತ್ತಿತ್ತು. ಜಪಾನ್ ಓಟಗಾರನು 49 ಸೆಕೆಂಡ್‌ನೊಳಗೆ ಓಡಬಲ್ಲ. ಓಟದ ವೇಳೆ ನನ್ನಲ್ಲಿ ಸಾಕಷ್ಟು ಶಕ್ತಿಯಿತ್ತು. ಹಾಗಾಗಿ ಬೆಳ್ಳಿ ಜಯಿಸಿದೆ’’ ಎಂದರು.

 ಧರುಣ್ ಅಥ್ಲೆಟಿಕ್ಸ್‌ನಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಮೊದಲು ತಮಿಳುನಾಡಿನ ಪರ ಖೋಖೋ ಆಡುತ್ತಿದ್ದರು. ಗುವಾಹಟಿಯಲ್ಲಿ 2016ರಲ್ಲಿ ನಡೆದ ದಕ್ಷಿಣ ಏಶ್ಯಾ ಗೇಮ್ಸ್‌ನಲ್ಲಿ 400 ಮೀ. ಹರ್ಡಲ್ಸ್‌ನಲ್ಲಿ 50.54 ಸೆಕೆಂಡ್‌ನಲ್ಲಿ ಗುರಿ ತಲುಪಿ ಚಿನ್ನ ಜಯಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ಬೆಳಕಿಗೆ ಬಂದಿದ್ದರು. ರಿಯೋ ಒಲಿಂಪಿಕ್ಸ್‌ನಲ್ಲಿ 4x 400 ಮೀ.ರಿಲೇ ತಂಡದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

 ‘‘ಒಲಿಂಪಿಕ್ಸ್ ಬಳಿಕ ಒಂದು ವರ್ಷ ಕಾಲ ನನಗೆ ಗಾಯದ ಸಮಸ್ಯೆ ಕಾಡಿತ್ತು. ಆರು ತಿಂಗಳ ಕಾಲ ಪುನಶ್ಚೇತನ ಶಿಬಿರದಲ್ಲಿದ್ದೆ. ಗಾಯಗೊಂಡ ಬಳಿಕ ತಂಡಕ್ಕೆ ವಾಪಸಾಗುವುದು ತುಂಬಾ ಕಷ್ಟಕರ’’ ಎಂದರು.

ಧರುಣ್ ಏಶ್ಯನ್ ಗೇಮ್ಸ್‌ಗಿಂತ ಮೊದಲು ಮೇನಲ್ಲಿ ಐದು ವಾರಗಳ ಕಾಲ ಪೊಲೆಂಡ್‌ನಲ್ಲಿ ತರಬೇತಿ ಪಡೆದಿದ್ದರು. ಅಲ್ಲಿ ಕೂಡ ಅವರಿಗೆ ಗಾಯದ ಸಮಸ್ಯೆ ಕಾಡಿತ್ತು. ಝೆಕ್ ಗಣರಾಜ್ಯದಲ್ಲಿ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದ ಧರುಣ್ ಕಠಿಣ ಶ್ರಮಪಟ್ಟು ಚೇತರಿಸಿಕೊಂಡಿದ್ದರು. ಝೆಕ್ ಗಣರಾಜ್ಯದಲ್ಲಿ ಪಡೆದ ತರಬೇತಿಯಿಂದ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡರು.

ಗುವಾಹಟಿಯಲ್ಲಿ ಜೂನ್‌ನಲ್ಲಿ ನಡೆದಿದ್ದ ರಾಷ್ಟ್ರೀಯ ಅಂತರ್-ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನೂತನ ಕೂಟ ದಾಖಲೆ ನಿರ್ಮಿಸಿದ್ದ ಧರುಣ್ ಮಾರ್ಚ್‌ನಲ್ಲಿ ನಡೆದಿದ್ದ ಫೆಡರೇಶನ್ ಕಪ್‌ನಲ್ಲಿ 49.45 ಸೆಕೆಂಡ್‌ನಲ್ಲಿ ಗುರಿ ತಲುಪಿ ಜೋಸೆಫ್ ಅಬ್ರಹಾಂ ಹೆಸರಲ್ಲಿದ್ದ 400 ಮೀ.ಹರ್ಡಲ್ಸ್ ರಾಷ್ಟ್ರೀಯ ದಾಖಲೆಯನ್ನು ಮುರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News