‘ಭಾರತ್ ಕೆ ವೀರ್‌’ಗೆ ಆದಾಯ ತೆರಿಗೆ ವಿನಾಯಿತಿ

Update: 2018-09-06 14:38 GMT

ಹೊಸದಿಲ್ಲಿ, ಸೆ.6: ಉಗ್ರವಾದಿಗಳ ವಿರುದ್ಧ ಹೋರಾಡಿ ಪ್ರಾಣವನ್ನು ಕಳೆದುಕೊಂಡ ಅರೆಸೈನಿಕ ಪಡೆಯ ಸಿಬ್ಬಂದಿ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಗೃಹ ಸಚಿವಾಲಯ ನಿಧಿಗೆ ನೀಡಲಾಗುವ ದೇಣಿಗೆಗೆ ಆದಾಯ ತೆರಿಗೆ ವಿನಾಯಿತಿ ನೀಡಲಾಗುತ್ತದೆ ಎಂದು ಗೃಹ ಸಚಿವ ರಾಜನಾಥ ಸಿಂಗ್ ಗುರುವಾರ ತಿಳಿಸಿದ್ದಾರೆ.

ಕಳೆದ ವರ್ಷ ಎಪ್ರಿಲ್‌ನಲ್ಲಿ ಗೃಹ ಸಚಿವಾಲಯ ಭಾರತ್ ಕೆ ವೀರ್ ಅಭಿಯಾನವನ್ನು ಆರಂಭಿಸಿತ್ತು. ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ಬ್ಯಾಡ್ಮಿಂಟನ್ ತಾರೆ ಪುಲ್ಲೇಲ ಗೋಪಿಚಂದ್ ಸೇರಿದಂತೆ ಹಲವು ಗಣ್ಯರು ಜೊತೆ ಸೇರಿ ಈ ಟ್ರಸ್ಟನ್ನು ಸ್ಥಾಪಿಸಿದ್ದಾರೆ. ಈ ಅಭಿಯಾನವನ್ನು ಸದ್ಯ ಒಂದು ನೋಂದಾಯಿತ ಟ್ರಸ್ಟ್ ಆಗಿ ರೂಪಿಸಲಾಗಿದೆ. ಆಮೂಲಕ ದೇಶದ ಎಲ್ಲ ಪ್ರಜೆಗಳು ಹುತಾತ್ಮ ಅರೆಸೈನಿಕ ಪಡೆಯ ಯೋಧರ ಕುಟುಂಬಗಳಿಗೆ ನೆರವಾಗಲು ಸಹಾಯವಾಗಲಿದೆ ಎಂದು ಸಿಂಗ್ ತಿಳಿಸಿದ್ದಾರೆ. ಸಾರ್ವಜನಿಕರು ಭಾರತ್ ಕೆ ವೀರ್ ಜಾಲತಾಣಕ್ಕೆ ಭೇಟಿ ನೀಡಿ ತಮ್ಮ ದೇಣಿಗೆಯನ್ನು ನೀಡಬಹುದಾಗಿದೆ. ಹೀಗೆ ನೀಡಿದ ಸಹಾಯಧನವು ನೇರವಾಗಿ ಹುತಾತ್ಮ ಯೋಧರ ಕುಟುಂಬದ ಬ್ಯಾಂಕ್ ಖಾತೆಗೆ ಬೀಳುತ್ತದೆ. ಈ ಜಾಲತಾಣದ ಮೂಲಕ ಕೇಂದ್ರ ಮೀಸಲು ಪೊಲೀಸ್ ಪಡೆ, ಗಡಿ ರಕ್ಷಣಾ ಪಡೆ, ಕೇಂದ್ರ ಕೈಗಾರಿಕ ರಕ್ಷಣಾ ಪಡೆ, ಇಂಡೊ-ಟಿಬೆಟ್ ಗಡಿ ಪೊಲೀಸ್ ಪಡೆ, ಸಶಸ್ತ್ರ ಸೀಮಾ ಬಲ, ಅಸ್ಸಾಂ ರೈಫಲ್ಸ್, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿಗಳ ಕುಟುಂಬಗಳು ಪ್ರಯೋಜನವನ್ನು ಪಡೆಯಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News