ಅಣ್ವಸ್ತ್ರಗಳನ್ನು ಹೊಂದಿರುವ ದೇಶಗಳ ‘ಚೌರ್ಯ ಪಟ್ಟಿ’ಯಲ್ಲಿ ಭಾರತ ನಂ.19

Update: 2018-09-06 14:44 GMT

ಹೊಸದಿಲ್ಲಿ, ಸೆ.6: ಶಸ್ತ್ರಾಸ್ತ್ರಗಳಲ್ಲಿ ಬಳಕೆಯಾಗುವ ಪರಮಾಣು ಸಾಮಗ್ರಿಗಳನ್ನು ಹೊಂದಿರುವ ರಾಷ್ಟ್ರಗಳಿಗಾಗಿ ಸುರಕ್ಷತೆಗೆ ಸಂಬಂಧಿಸಿದಂತೆ 2018ನೇ ಸಾಲಿಗಾಗಿ ಅಮೆರಿಕದ ನ್ಯೂಕ್ಲಿಯರ್ ಥ್ರೆಟ್ ಇನಿಷಿಯೇಟಿವ್(ಎನ್‌ಟಿಐ) ಸಿದ್ಧಗೊಳಿಸಿರುವ ‘ಥೆಫ್ಟ್ ರ್ಯಾಂಕಿಂಗ್’ ಅಥವಾ ಅಣ್ವಸ್ತ್ರ ಚೌರ್ಯ ಪಟ್ಟಿಯಲ್ಲಿ 19ನೇ ಸ್ಥಾನಕ್ಕೇರುವ ಮೂಲಕ ಭಾರತವು ತನ್ನ ಸ್ಥಿತಿಯನ್ನು ಉತ್ತಮಗೊಳಿಸಿಕೊಂಡಿದೆ. 2016ನೇ ಸಾಲಿನ ಪಟ್ಟಿಯಲ್ಲಿ ಅದು 20ನೇ ಸ್ಥಾನದಲ್ಲಿತ್ತು. ಎನ್‌ಟಿಐ ಪ್ರತಿ ಎರಡು ವರ್ಷಗಳಿಗೊಮ್ಮೆ ಈ ಪಟ್ಟಿಯನ್ನು ಬಿಡುಗಡೆಗೊಳಿಸುತ್ತದೆ.

ಅಪಾಯಗಳು ಹೆಚ್ಚುತ್ತಿದ್ದರೂ ಅಣ್ವಸ್ತ್ರಗಳ ಸುರಕ್ಷತೆಯಲ್ಲಿ ಪ್ರಗತಿ,ಅವುಗಳ ಕನಿಷ್ಠಗೊಳಿಸುವಿಕೆ ಮತ್ತು ನಿವಾರಣೆ ಹಾಗೂ ಪರಮಾಣು ಸ್ಥಾವರಗಳ ಸುರಕ್ಷತೆಯನ್ನು ಕಾಯ್ದುಕೊಳ್ಳುವ ಪ್ರಕ್ರಿಯೆಗಳು 2016ರಿಂದ ವೇಗ ಪಡೆದುಕೊಂಡಿವೆ ಎಂದು ಎನ್‌ಟಿಐ ತಿಳಿಸಿದೆ.

ಪರಮಾಣು ಸ್ಥಾವರಗಳಿಗೆ ರಕ್ಷಣೆ,ನಿಯಂತ್ರಣ ಮತ್ತು ಉತ್ತರದಾಯಿತ್ವ,ಒಳಗಿನವರಿಂದ ಬೆದರಿಕೆಯ ತಡೆಗೆ ಕ್ರಮ,ಸಾಗಾಣಿಕೆಯ ಸಂದರ್ಭಗಳಲ್ಲಿ ಭದ್ರತೆ ಮತ್ತು ಸೈಬರ್ ಸುರಕ್ಷತೆಯನ್ನು ಹೆಚ್ಚಿಸುವ ಹಾಗೂ ಸ್ವತಂತ್ರ ನಿಯಂತ್ರಣ ಏಜೆನ್ಸಿಯನ್ನು ಸ್ಥಾಪಿಸುವ ಮೂಲಕ ಭಾರತವು ತನ್ನ ಪರಮಾಣು ಭದ್ರತೆ ಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳಬಹುದಾಗಿದೆ ಎಂದು ಎನ್‌ಟಿಐ ವರದಿಯಲ್ಲಿ ಹೇಳಿದೆ.

ಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನವು ಪಟ್ಟಿಯಲ್ಲಿ 20ನೇ ಸ್ಥಾನದಲ್ಲಿದ್ದು, 2016ರಿಂದೀಚಿಗೆ ಸೂಕ್ತಕ್ರಮಗಳ ಮೂಲಕ ಅದು ತನ್ನ ಪರಮಾಣು ಸುರಕ್ಷತೆಯನ್ನು ಹೆಚ್ಚಿಸಿಕೊಂಡಿದೆ ಎಂದು ವರದಿಯು ತಿಳಿಸಿದೆ.

ಎನ್‌ಟಿಐ 2012ರಲ್ಲಿ ಮೊದಲ ಬಾರಿಗೆ ಪಟ್ಟಿಯನ್ನು ಬಿಡುಗಡೆ ಮಾಡಿದಾಗ ಶಸ್ತ್ರಾಸ್ತ್ರಗಳಲ್ಲಿ ಬಳಕೆಯಾಗುವ ಪರಮಾಣು ಸಾಮಗ್ರಿಗಳನ್ನು ಹೊಂದಿದ್ದ 32 ದೇಶಗಳಿದ್ದು, ಈ ಸಂಖ್ಯೆಯೀಗ 22ಕ್ಕಿಳಿದಿದೆ.

 ಕಳೆದೆರಡು ವರ್ಷಗಳಲ್ಲಿ ಅರ್ಜೆಂಟಿನಾ ಮತ್ತು ಪೋಲಂಡ್ ತಮ್ಮ ಭೂಪ್ರದೇಶಗಳಲ್ಲಿಯ ಎಲ್ಲ ಸಂಸ್ಕರಿತ ಯುರೇನಿಯಂ ಅನ್ನು ನಿವಾರಿಸಿರುವ ಅಥವಾ ವಿಲೇವಾರಿಗೊಳಿಸಿರುವ ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಕಳೆದ ಮೂರು ದ್ವೈವಾರ್ಷಿಕ ಪಟ್ಟಿಗಳಲ್ಲಿ ಮೊದಲ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ಈ ಬಾರಿ ಅಗ್ರಸ್ಥಾನವನ್ನು ಸ್ವಿಟ್ಝರ್‌ಲಂಡ್‌ನೊಂದಿಗೆ ಹಂಚಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News