ಲಾಹೋರ್ ಚೌಕಕ್ಕೆ ಭಗತ್‌ಸಿಂಗ್ ಹೆಸರಿಡುವ ಮನವಿ: ಸೂಕ್ತ ನಿರ್ಧಾರ ಕೈಗೊಳ್ಳಲು ಪಾಕ್ ಕೋರ್ಟ್ ಸೂಚನೆ

Update: 2018-09-06 16:48 GMT

ಲಾಹೋರ್, ಸೆ.6: ಲಾಹೋರ್‌ನ ಶಾದ್‌ಮಾನ್ ಚೌಕ್‌ಗೆ ಭಾರತದ ಸ್ವಾತಂತ್ರ ಸಂಗ್ರಾಮದ ಕ್ರಾಂತಿಕಾರಿ ನಾಯಕ ಭಗತ್‌ಸಿಂಗ್ ಅವರ ಹೆಸರನ್ನಿಡುವ ಬಗ್ಗೆ ಸೂಕ್ತ ನಿರ್ಧಾರವನ್ನು ಶೀಘ್ರವೇ ಕೈಗೊಳ್ಳುವಂತೆ ಪಾಕಿಸ್ತಾನದ ನ್ಯಾಯಾಲಯವೊಂದು ಬುಧವಾರ ಸ್ಥಳೀಯ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.

ಭಗತ್‌ಸಿಂಗ್‌ರನ್ನು ಅವರ ಸಹಚರರಾದ ರಾಜ್‌ಗುರು ಹಾಗೂ ಸುಖ್‌ದೇವ್ ಜೊತೆ 1931ರ ಮಾರ್ಚ್‌ನಲ್ಲಿ ಲಾಹೋರ್‌ನ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು. ಲಾಹೋರ್‌ನ ಐತಿಹಾಸಿಕ ಕಾರಾಗೃಹವಿದ್ದ ಸ್ಥಳದಲ್ಲಿ ಆನಂತರ ಶಾದ್‌ಮಾನ್ ಚೌಕವನ್ನು ನಿರ್ಮಿಸಲಾಗಿತ್ತು.

ಶಾದ್‌ಮಾನ್ ಚೌಕ್‌ಗೆ ಭಗತ್‌ಸಿಂಗ್‌ರ ಹೆಸರನ್ನಿಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಬೇಕೆಂದು ಪಾಕಿಸ್ತಾನದ ಭಗತ್‌ಸಿಂಗ್ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷ ಇಮ್ತಿಯಾಝ್ ರಶೀದ್ ಖುರೇಷಿ ಅವರು, ಲಾಹೋರ್ ಹೈಕೋರ್ಟ್‌ಗೆ ಮನವಿ ಮಾಡಿದ್ದರು. ಅವರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀಶ ಶಹೀದ್ ಜಮೀಲ್ ಖಾನ್ ಅವರು ಈ ಬಗ್ಗೆ ಸೂಕ್ತ ನಿರ್ಧಾರವನ್ನು ಕೈಗೊಳ್ಳುವಂತೆ ಲಾಹೋರ್ ಜಿಲ್ಲಾಧಿಕಾರಿಯವರಿಗೆ ಸೂಚಿಸಿದ್ದಾರೆ. ಭಗತ್‌ಸಿಂಗ್ ಅವರು ಇಡೀ ಭಾರತೀಯ ಉಪಖಂಡದ ಸ್ವಾತಂತ್ರ ಹೋರಾಟಗಾರರಾಗಿದ್ದು, ಅವರು ಸ್ವಾತಂತ್ರದ ಧ್ಯೇಯಕ್ಕಾಗಿ ತನ್ನ ಸಂಗಡಿಗರೊಂದಿಗೆ ಪ್ರಾಣಾರ್ಪಣೆ ಮಾಡಿದ್ದಾರೆಂದು ರಶೀದ್ ಖುರೇಷಿ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

 ಪಾಕಿಸ್ತಾನದ ಸ್ಥಾಪಕ ಮುಹಮ್ಮದ್ ಅಲಿ ಜಿನ್ನಾ ಕೂಡಾ ಭಗತ್‌ಸಿಂಗ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದರೆಂಬ ವಿಷಯವನ್ನು ಉಲ್ಲೇಖಿಸಿರುವ ರಶೀದ್ ಖುರೇಷಿ ಅವರು ಭಾರತೀಯ ಉಪಖಂಡದಲ್ಲಿ ಭಗತ್‌ಸಿಂಗ್‌ರಂತಹ ವೀರಪುರುಷ ಇನ್ನೊಬ್ಬರಿಲ್ಲವೆಂದು ಹೇಳಿದ್ದಾರೆ. ಪಾಕಿಸ್ತಾನದ ಹಾಗೂ ಜಗತ್ತಿನ ಜನತೆಗೆ ಸ್ಫೂರ್ತಿಯನ್ನು ತುಂಬಲು ಭಗತ್‌ಸಿಂಗ್‌ರನ್ನು ಗಲ್ಲಿಗೇರಿಸಿದ ಸ್ಥಳದಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸುವಂತೆಯೂ ರಶೀದ್ ಖುರೈಷಿ ಅರ್ಜಿಯಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News