3 ಬಾರಿ ನದಿಗೆ ಹಾರಿ ತಾಯಿ, ಚಿಕ್ಕಮ್ಮನನ್ನು ರಕ್ಷಿಸಿದ 11 ವರ್ಷದ ಬಾಲಕ

Update: 2018-09-06 16:50 GMT

ಗುವಾಹಟಿ, ಸೆ.6: ಬ್ರಹ್ಮಪುತ್ರ ನದಿಯಲ್ಲಿ ಬೋಟ್ ಮುಳುಗಡೆಯಾಗಿ ನೀರುಪಾಲಾಗುತ್ತಿದ್ದ ಇಬ್ಬರನ್ನು 11 ವರ್ಷದ ಬಾಲಕನೊಬ್ಬ ರಕ್ಷಿಸಿರುವ ಬಗ್ಗೆ ವರದಿಯಾಗಿದೆ.

ಈ ಸಾಹಸ ಮೆರೆದ ಬಾಲಕನನ್ನು ಕಮಲ್ ಕಿಶೋರ್ ದಾಸ್ ಎಂದು ಗುರುತಿಸಲಾಗಿದೆ. ಬೋಟ್ ಮುಳುಗಿದ ನಂತರ ಬಾಲಕ ಕಮಲ್ ಕಿಶೋರ್ ದಾಸ್ ದಡಕ್ಕೆ ತಲುಪಿದ್ದರೂ ತನ್ನ ತಾಯಿ ಮತ್ತು ಚಿಕ್ಕಮ್ಮನನ್ನು ರಕ್ಷಿಸುವ ಸಲುವಾಗಿ ಮತ್ತೊಮ್ಮೆ ನದಿಗೆ ಹಾರಿದ್ದ.

ಸುರಕ್ಷಿತವಾಗಿ ಮತ್ತೊಬ್ಬ ತಾಯಿ ಮತ್ತು ಮಗುವನ್ನು ನೀರಿನಿಂದ ಹೊರತಂದಿದ್ದರೂ ಅವರು ಬದುಕುಳಿಯಲಿಲ್ಲ ಎಂದು ಬೇಸರಿಸುತ್ತಾನೆ ಕಮಲ್.

“ನಾನು ಮೊದಲಿಗೆ ನನ್ನ ತಾಯಿ ಮತ್ತು ಚಿಕ್ಕಮ್ಮನನ್ನು ನೀರಿನಿಂದ ಹೊರಕ್ಕೆ ತಂದಿದ್ದೆ. ಈ ಸಂದರ್ಭ ಬುರ್ಖಾ ಧರಿಸಿದ್ದ ಮಹಿಳೆಯೊಬ್ಬರು ಮಗುವನ್ನು ಹಿಡಿದುಕೊಂಡೇ ನೀರಿನಲ್ಲಿ ಮುಳುಗುತ್ತಿರುವುದನ್ನು ನಾನು ನೋಡಿದೆ. ಕೂಡಲೇ ನದಿಗೆ ಹಾರಿ ಇಬ್ಬರನ್ನೂ ಎಳೆದು ತಂದೆ. ಆದರೆ ಮಗು ಮಹಿಳೆಯ ಕೈಯಿಂದ ಜಾರಿ ನೀರಿನಲ್ಲಿ ಕೊಚ್ಚಿಕೊಂಡು ಹೋಯಿತು. ಮಹಿಳೆಯೂ ಕೂಡಲೇ ನೀರಿಗೆ ಹಾರಿದರು. ಆಕೆಯೂ ಕೂಡ ಕೊಚ್ಚಿ ಹೋದರು” ಎಂದು ಕಮಲ್ ಹೇಳುತ್ತಾರೆ.

6ನೆ ತರಗತಿಯ ವಿದ್ಯಾರ್ಥಿಯಾಗಿರುವ ಕಮಲ್ ಉತ್ತರ ಗುವಾಹಟಿಯಿಂದ ತಾಯಿ ಮತ್ತು ಚಿಕ್ಕಮ್ಮನ ಜೊತೆ ಮನೆಗೆ ಮರಳುತ್ತಿದ್ದ. ಇವರು ಪ್ರಯಾಣಿಸುತ್ತಿದ್ದ ಬೋಟ್ ಬ್ರಹ್ಮಪುತ್ರ ನದಿಯಲ್ಲಿ ಮುಳುಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News