ಪತ್ರಕರ್ತರ ಸಹವಾಸ ಬೇಡ: ಬಿಜೆಪಿ ಪ್ರತಿನಿಧಿಗಳ ಆಪ್ತ ಸಹಾಯಕರಿಗೆ ಕಟ್ಟುನಿಟ್ಟಿನ ಸೂಚನೆ

Update: 2018-09-07 04:45 GMT

ಹೊಸದಿಲ್ಲಿ, ಸೆ.7: "ಪತ್ರಕರ್ತರು ಪಕ್ಷದ ಕಚೇರಿಗಳಲ್ಲಿ ಅನಗತ್ಯವಾಗಿ ಕುಳಿತುಕೊಂಡು ವದಂತಿ ಹಬ್ಬಿಸಲು ಅವಕಾಶ ನೀಡಬೇಡಿ"- 2019ರ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ, ಪಕ್ಷದ ಎಲ್ಲ ಶಾಸಕರು ಮತ್ತು ಸಂಸದರ ಆಪ್ರಸಹಾಯಕರಿಗೆ ನೀಡಿದ ಕಟ್ಟುನಿಟ್ಟಿನ ಸೂಚನೆ ಇದು!

ಜತೆಗೆ ಪಕ್ಷದ ಹೊಸ ಬೆಂಬಲಿಗರ ಮೇಲೆ ಕಣ್ಗಾವಲು ಇಡುವಂತೆ, ಬಿಜೆಪಿ ಸಿದ್ಧಾಂತ ಮತ್ತು ತತ್ವವನ್ನು ಅರ್ಥ ಮಾಡಿಕೊಳ್ಳುವ, ಸಾಮಾಜಿಕ ಜಾಲತಾಣ ಬಳಸುವವರ ವಿವರಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವಂತೆಯೂ ಸೂಚಿಸಿದೆ.

ಚುನಾವಣೆ ಹಿನ್ನೆಲೆಯಲ್ಲಿ ಮುಜುಗರವನ್ನು ತಪ್ಪಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಆಪ್ತ ಸಹಾಯಕರಿಗೆ ತರಬೇತಿಯನ್ನು ಕೂಡಾ ಬಿಜೆಪಿ ಆಯೋಜಿಸಿದೆ. ದೇಶದ ಎಲ್ಲೆಡೆಯಿಂದ ಆಗಮಿಸಿರುವ ಜನಪ್ರತಿನಿಧಿಗಳ ಆಪ್ತ ಸಹಾಯಕರ ಎರಡು ದಿನಗಳ ತರಬೇತಿ ಗುರುವಾರ ಹಾಗೂ ಶುಕ್ರವಾರ ನಡೆದಿದ್ದು, ಈ ಶಿಬಿರದಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ತರಬೇತಿ ವೇಳೆ ಬಿಡುಗಡೆಯಾಗುವ 65 ಪುಟಗಳ ಮಾರ್ಗಸೂಚಿ ಪುಸ್ತಕದಲ್ಲಿ, ಪ್ರವಾಸ ಆಯೋಜನೆ, ಕ್ಷೇತ್ರ ಕಾರ್ಯ, ಎಂಪಿ ಹಾಗೂ ಎಂಎಲ್‌ಎ ನಿಧಿ ಬಳಕೆ, ಹಣಕಾಸು ನಿರ್ವಹಣೆ ಮತ್ತು ವೈಯಕ್ತಿಕ ಅಭಿವೃದ್ಧಿ, ಮತದಾರರು ಹಾಗೂ ಸಾರ್ವಜನಿಕರ ದೂರುಗಳನ್ನು ನಿರ್ವಹಿಸುವ ಬಗ್ಗೆ ಸಲಹೆ ನೀಡಲಾಗಿದೆ.

ಪಕ್ಷದ ತರಬೇತಿ ವಿಭಾಗ ಬಿಡುಗಡೆ ಮಾಡಿರುವ ಕೈಪಿಡಿಯಲ್ಲಿ ಪಕ್ಷದ ಸೈದ್ಧಾಂತಿಕ ಮತ್ತು ಐತಿಹಾಸಿಕ ಹಿನ್ನೆಲೆ, ಬಿಜೆಪಿ ಸರ್ಕಾರದ ಕಲ್ಯಾಣ ಯೋಜನೆಗಳ ವಿವರಗಳು, ಪಕ್ಷಕ್ಕೆ ಇರುವ ಬಾಹ್ಯ ಹಾಗೂ ಆಂತರಿಕ ಅಪಾಯಗಳು ಮತ್ತು ಸರ್ಕಾರದ ಆರ್ಥಿಕ ನೀತಿಗಳ ಸಂಕ್ಷಿಪ್ತ ವಿವರ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News