ಮಕ್ಕಳಿಗೆ ನೀಡಿದ ಚಾಕಲೇಟನ್ನು ಕೂಡಲೇ ವಾಪಸ್ ತೆಗೆದುಕೊಳ್ಳಲಾಗದು

Update: 2018-09-07 12:46 GMT

ಹೊಸದಿಲ್ಲಿ, ಸೆ.7: ಎಸ್ಸಿ/ಎಸ್ಟಿ ಕಾಯ್ದೆಗೆ ಕೇಂದ್ರ ಸರಕಾರ ತಂದಿರುವ ತಿದ್ದುಪಡಿಯನ್ನು ವಿರೋಧಿಸಿ ದೇಶಾದ್ಯಂತ ವ್ಯಕ್ತವಾಗುತ್ತಿರುವ ಆಕ್ರೋಶದ ಹಿನ್ನೆಲೆಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್, ಈ ವಿಷಯವನ್ನು ಎಲ್ಲ ರಾಜಕೀಯ ಪಕ್ಷಗಳು ಜೊತೆಯಾಗಿ ಕುಳಿತು ಚರ್ಚಿಸಬೇಕು ಎಂದು ಅಭಿಪ್ರಾಯಿಸಿದ್ದಾರೆ.

ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯ ಕೆಲವೊಂದು ನಿಬಂಧನೆಗಳನ್ನು ಮಾರ್ಪಾಟುಗೊಳಿಸಿ ಸರ್ವೋಚ್ಚ ನ್ಯಾಯಾಲಯ ನೀಡಿದ ಆದೇಶವನ್ನು ರದ್ದುಗೊಳಿಸುವ ಸಲುವಾಗಿ ಲೋಕಸಭೆ ಮತ್ತು ರಾಜ್ಯಸಭೆ ಕ್ರಮವಾಗಿ ಆಗಸ್ಟ್ 6 ಮತ್ತು ಆಗಸ್ಟ್ 9ರಂದು ಪರಿಶಿಷ್ಟ ಜಾತಿಗಳ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ತಿದ್ದುಪಡಿ ಮಸೂದೆಯನ್ನು ಜಾರಿಗೆ ತಂದಿತ್ತು. ಸರಕಾರದ ಈ ನಿರ್ಧಾರದ ವಿರುದ್ಧ ಗುರುವಾರ ಕೆಲವು ಮೀಸಲಾತಿ ವಿರೋಧಿ ಸಂಘಟನೆಗಳು ಭಾರತ್ ಬಂದ್ ನಡೆಸಿದ್ದವು.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಹಾಜನ್, ಈ ಕಾಯ್ದೆಯ ಮೂಲ ರಚನೆಯನ್ನು ಕಾಪಾಡುವುದಾಗಿ ಎಲ್ಲ ಪಕ್ಷಗಳು ಒಪ್ಪಿಕೊಂಡಿರುವ ಕಾರಣ ಈ ವಿಷಯವನ್ನು ರಾಜಕೀಯಗೊಳಿಸಬಾರದು ಎಂದು ತಿಳಿಸಿದ್ದಾರೆ. ಸಂಸತ್ ಕೆಲಸ ಕಾನೂನನ್ನು ಅನುಷ್ಠಾನಕ್ಕೆ ತರುವುದು. ಆದರೆ ಈ ವಿಷಯದಲ್ಲಿ (ಎಸ್ಸಿ/ಎಸ್ಟಿ ಕಾಯ್ದೆಗೆ ಮಾಡಲಾದ ತಿದ್ದುಪಡಿಯ ಬಗ್ಗೆ) ಎಲ್ಲ ಸಂಸದರು ಯೋಚಿಸುವ ಅಗತ್ಯವಿದೆ. ಈ ಚರ್ಚೆಗೆ ಪೂರಕ ವಾತಾವರಣವನ್ನು ಸೃಷ್ಟಿಸುವ ಜವಾಬ್ದಾರಿ ಈ ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಮೇಲಿದೆ ಎಂದು ಅವರು ತಿಳಿಸಿದ್ದಾರೆ.

ಈ ವೇಳೆ ತನ್ನ ನಿಲುವನ್ನು ಸ್ಪಷ್ಟಪಡಿಸಿದ ಮಹಾಜನ್, “ನಾನು ನನ್ನ ಮಗನಿಗೆ ದೊಡ್ಡ ಚಾಕಲೇಟನ್ನು ನೀಡುತ್ತೇನೆ ಎಂದು ಭಾವಿಸಿ. ಆದರೆ ನಂತರ ಅಷ್ಟೊಂದು ಚಾಕಲೇಟನ್ನು ಒಮ್ಮೆಲೆ ತಿನ್ನುವುದು ಸರಿಯಲ್ಲ ಎಂದು ನನಗೆ ಅನಿಸುತ್ತದೆ. ಆಗ ನಾನು ಹೆಚ್ಚಿನ ಚಾಕಲೇಟನ್ನು ಆತನಿಂದ ವಾಪಸ್ ಪಡೆಯಲು ಪ್ರಯತ್ನಿಸುತ್ತೇನೆ. ಆದರೆ ಅದು ಅಷ್ಟು ಸುಲಭವಲ್ಲ. ಯಾಕೆಂದರೆ ಹಾಗೆ ಮಾಡಿದಾಗ ಆತನಿಗೆ ಕೋಪಬರುತ್ತದೆ ಮತ್ತು ಆತ ಅಳಲು ಆರಂಭಿಸುತ್ತಾನೆ” ಎಂದು ವಿವರಿಸಿದ್ದಾರೆ. “ಆದರೆ ಕೆಲವು ಭಾವಶೀಲ ವ್ಯಕ್ತಿಗಳು ಆ ಮಗು ಸರಿಯಾಗಿ ಅರ್ಥೈಸುವಂತೆ ಬುದ್ಧಿ ಹೇಳುತ್ತಾರೆ ಮತ್ತು ಆತನಿಂದ ಚಾಕಲೇಟನ್ನು ವಾಪಸ್ ಪಡೆಯುತ್ತಾರೆ” ಎಂದು ಇದೇ ವೇಳೆ ಸುಮಿತ್ರಾ ಮಹಾಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸದ್ಯದ ಪರಿಸ್ಥಿತಿ ಉತ್ತಮವಾಗಿಲ್ಲ. ಹಿಂದೆ ಸಮಾಜದ ಒಂದು ವರ್ಗಕ್ಕೆ ಅನ್ಯಾಯ ಮಾಡಲಾಗಿದೆ ಎಂದ ಮಾತ್ರಕ್ಕೆ ಅದರ ಲೆಕ್ಕವನ್ನು ಚುಕ್ತ ಮಾಡಲು ಇತರ ವರ್ಗಗಳಿಗೂ ಅನ್ಯಾಯ ಮಾಡಬೇಕು ಎಂದರ್ಥವಲ್ಲ. ನ್ಯಾಯ ಎಲ್ಲರಿಗೂ ಸಿಗಬೇಕು ಮತ್ತು ಜನರಿಗೆ ಸರಿಯಾಗಿ ವಿವರಿಸುವ ಮೂಲಕ ಮಾತ್ರ ಅದನ್ನು ಪಡೆಯಲು ಸಾಧ್ಯ. ವಂಚಿತ ಜಾತಿಗಳ ವಿರುದ್ಧ ಯಾರೂ ದೌರ್ಜನ್ಯ ನಡೆಸುತ್ತಿಲ್ಲ ಎಂಬ ಭಾವನೆ ಎಲ್ಲರಲ್ಲೂ ಮೂಡುವಂತಾಗಬೇಕು ಎಂದು ಮಹಾಜನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News