ಎಸ್ಸಿ/ಎಸ್ಟಿ ಕಾಯ್ದೆ ತಿದ್ದುಪಡಿ ವಿರುದ್ಧ ಬಂದ್ ಬಿಜೆಪಿಯ ಸಂಚು: ಮಾಯಾವತಿ

Update: 2018-09-07 14:37 GMT

ಹೊಸದಿಲ್ಲಿ, ಸೆ.7: ಎಸ್ಸಿ/ಎಸ್ಟಿ ಕಾಯ್ದೆಗೆ ತಂದಿರುವ ತಿದ್ದುಪಡಿಯ ವಿರುದ್ಧ ಮೇಲ್ಜಾತಿಯ ಮತ್ತು ಇತರ ಹಿಂದುಳಿದ ವರ್ಗಗಳ ಕೆಲವು ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್, ಲೋಕಸಭಾ ಚುನಾವಣೆಗೂ ಮುನ್ನ ಜನರನ್ನು ಜಾತಿ ಆಧಾರದಲ್ಲಿ ವಿಭಜಿಸುವ ಬಿಜೆಪಿಯ ಚುನಾವಣಾ ಸಂಚಾಗಿದೆ ಎಂದು ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಆರೋಪಿಸಿದ್ದಾರೆ. ತೈಲಬೆಲೆ ಏರಿಕೆ ಮುಂತಾದ ಗಂಭೀರ ಸಮಸ್ಯೆಗಳಿಂದ ದೇಶದ ಜನರ ಗಮನವನ್ನು ಇತರೆಡೆಗೆ ಸೆಳೆಯಲು ಬಿಜೆಪಿ ಇಂಥ ಪ್ರತಿಭಟನೆಗಳಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ಮಾಯಾವತಿ ಆರೋಪಿಸಿದ್ದಾರೆ.

ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿಭಜನೆ ರಾಜಕೀಯದಲ್ಲಿ ನಿರತವಾಗಿದೆ. ಅದರ ಭಾಗವಾಗಿ, ಮುಖ್ಯವಾಗಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಎಸ್ಸಿ/ಎಸ್ಟಿ ಕಾಯ್ದೆಯ ತಿದ್ದುಪಡಿಯ ವಿರುದ್ಧ ಪ್ರತಿಭಟನೆಗಳನ್ನು ಆಯೋಜಿಸಲಾಗುತ್ತಿದೆ. ಇದು ಮತ್ತೇನೂ ಅಲ್ಲ, ಆರ್‌ಎಸ್‌ಎಸ್ ಮತ್ತು ಬಿಜೆಪಿ ನಡೆಸುತ್ತಿರುವ ಚುನಾವಣಾ ಸಂಚು ಎಂದು ಬಿಎಸ್‌ಪಿ ಮುಖ್ಯಸ್ಥೆ ತಿಳಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಲ್ಲಿ ಆರೋಪಿಗಳ ಬಂಧನವನ್ನು ಕಡ್ಡಾಯಗೊಳಿಸಿದ್ದ ನಿಬಂಧನೆಯನ್ನು ಸರ್ವೋಚ್ಚ ನ್ಯಾಯಾಲಯ ಸಡಿಲಗೊಳಿಸಿತ್ತು. ಈ ಆದೇಶದ ವಿರುದ್ಧ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ, ನ್ಯಾಯಾಲಯದ ಈ ಆದೇಶವನ್ನು ರದ್ದುಗೊಳಿಸಲು ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿತ್ತು. ಈ ತಿದ್ದುಪಡಿಯ ವಿರುದ್ಧ ಕೆಲವು ಮೀಸಲಾತಿ ವಿರೋಧಿ ಸಂಘಟನೆಗಳು ಗುರುವಾರ ಭಾರತ್ ಬಂದ್‌ಗೆ ಕರೆ ನೀಡಿ ಪ್ರತಿಭಟನೆ ನಡೆಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News