ಇನ್ನು ಮುಂದೆ ಬೇರೆ ದೇಶಕ್ಕಾಗಿ ಪಾಕ್ ಯುದ್ಧ ಮಾಡುವುದಿಲ್ಲ: ಇಮ್ರಾನ್ ಖಾನ್

Update: 2018-09-07 16:08 GMT

ಇಸ್ಲಾಮಾಬಾದ್, ಸೆ. 7: ಇನ್ನು ಮುಂದೆ ಪಾಕಿಸ್ತಾನ ಬೇರೆ ದೇಶದ ಪರವಾಗಿ ಯುದ್ಧ ಮಾಡುವುದಿಲ್ಲ ಎಂದು ಪ್ರಧಾನಿ ಇಮ್ರಾನ್ ಖಾನ್ ಗುರುವಾರ ಹೇಳಿದ್ದಾರೆ.

ತಾನು ಹಿಂದಿನಿಂದಲೂ ಯುದ್ಧ ವಿರೋಧಿಯಾಗಿದ್ದೇನೆ ಹಾಗೂ ತನ್ನ ಸರಕಾರದ ವಿದೇಶ ನೀತಿಯು ದೇಶದ ಅತ್ಯುನ್ನತ ಹಿತಾಸಕ್ತಿಗೆ ಪೂರಕವಾಗಿರುತ್ತದೆ ಎಂದು ಅವರು ನುಡಿದರು.

ಪಾಕಿಸ್ತಾನಿ ಸೇನೆಯು ರಾವಲ್ಪಿಂಡಿಯಲ್ಲಿರುವ ತನ್ನ ಪ್ರಧಾನ ನೆಲೆಯಲ್ಲಿ ಏರ್ಪಡಿಸಿದ ರಕ್ಷಣಾ ಮತ್ತು ಹುತಾತ್ಮರ ದಿನಾಚರಣೆ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು. ಸಂಸದರು, ರಾಜತಾಂತ್ರಿಕರು, ಕ್ರೀಡಾಪಟುಗಳು, ಕಲಾವಿದರು ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಭಯೋತ್ಪಾದನೆ ವಿರುದ್ಧದ ಯುದ್ಧದಿಂದಾಗಿ ಸಂಭವಿಸಿದ ವಿನಾಶ ಮತ್ತು ಕಷ್ಟನಷ್ಟಗಳ ಬಗ್ಗೆ ಮಾತನಾಡಿದ ಖಾನ್, ‘‘ನಾನು ಈ ಯುದ್ಧಕ್ಕೆ ಹಿಂದಿನಿಂದಲೂ ವಿರೋಧಿಯಾಗಿದ್ದೇನೆ’’ ಎಂದರು.

‘‘ಭವಿಷ್ಯದಲ್ಲಿ ಬೇರೆ ಯಾವುದೇ ದೇಶದ ಯುದ್ಧದಲಿ ನಾವು ಭಾಗಿಯಾಗುವುದಿಲ್ಲ’’ ಎಂದರು.

ಸಶಸ್ತ್ರ ಪಡೆಗಳ ಪಾತ್ರವನ್ನು ಶ್ಲಾಘಿಸಿದ ಪ್ರಧಾನಿ

ಆದಾಗ್ಯೂ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನಿ ಸಶಸ್ತ್ರ ಪಡೆಗಳು ವಹಿಸಿದ ಪಾತ್ರವನ್ನು ಅವರು ಶ್ಲಾಘಿಸಿದರು.

‘‘ಪಾಕಿಸ್ತಾನಿ ಸೇನೆಯಂತೆ ಬೇರೆ ಯಾವ ದೇಶವೂ ಭಯೋತ್ಪಾದನೆ ವಿರುದ್ಧ ಹೋರಾಟ ಮಾಡಿಲ್ಲ’’ ಎಂದು ಅವರು ಹೇಳಿದರು.

‘‘ಭದ್ರತಾ ಪಡೆಗಳು ಮತ್ತು ಗುಪ್ತಚರ ಸಂಸ್ಥೆಗಳು ಎಲ್ಲ ಬೆದರಿಕೆಗಳಿಂದ ದೇಶವನ್ನು ಕಾಪಾಡುತ್ತವೆ. ದೇಶ ರಕ್ಷಣೆಯಲ್ಲಿ ಅವುಗಳು ವಹಿಸುವ ಪಾತ್ರಕ್ಕೆ ಹೋಲಿಕೆಯಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News