ಇಂಡಿಯಾ ಬ್ಲೂ ತಂಡದ ಮಡಿಲಿಗೆ ದುಲೀಪ್ ಟ್ರೋಫಿ

Update: 2018-09-07 18:36 GMT

ದಿಂಡಿಗಲ್, ಸೆ.7: ಇಂಡಿಯಾ ರೆಡ್ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿರುವ ಇಂಡಿಯಾ ಬ್ಲೂ ತಂಡ ದುಲೀಪ್ ಟ್ರೋಫಿಯನ್ನು ಗೆದ್ದುಕೊಂಡಿದೆ.

ನಾಲ್ಕನೇ ದಿನವಾದ ಶುಕ್ರವಾರ ಕೇವಲ 37 ನಿಮಿಷಗಳಲ್ಲಿ ಇಂಡಿಯಾ ಬ್ಲೂ ತಂಡ ರೆಡ್ ವಿರುದ್ಧ ಇನಿಂಗ್ಸ್ ಹಾಗೂ 187 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.

ಎನ್‌ಪಿಆರ್ ಕಾಲೇಜ್ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಎಡಗೈ ಸ್ಪಿನ್ನರ್ ಸೌರಭ್ ಕುಮಾರ್(51ಕ್ಕೆ 5 ವಿಕೆಟ್) ಹಾಗೂ ಪಾರ್ಟ್-ಟೈಮ್ ಸ್ಪಿನ್ನರ್ ದೀಪಕ್ ಹೂಡ(56ಕ್ಕೆ 5)10 ವಿಕೆಟ್‌ಗಳನ್ನು ಪಡೆದು ಬ್ಲೂ ತಂಡಕ್ಕೆ ದೊಡ್ಡ ಅಂತರದ ಗೆಲುವು ತಂದರು.

ಸೌರಭ್ ದಿನದ ಮೊದಲ ಎಸೆತದಲ್ಲೇ ಇಶಾನ್ ಕಿಶನ್(30)ವಿಕೆಟ್ ಉರುಳಿಸಿ ಇಂಡಿಯಾ ರೆಡ್ ವಿಕೆಟ್ ಪತನಕ್ಕೆ ನಾಂದಿ ಹಾಡಿದರು. ಕಿಶನ್ ವಿಕೆಟ್ ಉರುಳಿದಾಗ ರೆಡ್ ತಂಡದ ಸ್ಕೋರ್ 6ಕ್ಕೆ 134.

ಸೌರಭ್ ಹಾಗೂ ದೀಪಕ್ ಇಂಡಿಯಾ ರೆಡ್ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಅವಕಾಶ ನೀಡದೆ ಕೇವಲ 10.5 ಓವರ್‌ಗಳಲ್ಲಿ ಉಳಿದ 4 ವಿಕೆಟ್ ಉರುಳಿಸಿದರು. ಇಂಡಿಯಾ ರೆಡ್ ಎರಡನೇ ಇನಿಂಗ್ಸ್‌ನಲ್ಲಿ 38.5 ಓವರ್‌ಗಳಲ್ಲಿ 172 ರನ್‌ಗೆ ಆಲೌಟಾಯಿತು. ‘‘ಎನ್‌ಪಿಆರ್ ಕಾಲೇಜ್ ಗ್ರೌಂಡ್ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡುವ ತಂಡ ಉತ್ತಮ ಪ್ರದರ್ಶನ ನೀಡುತ್ತದೆ. ನಾವು ಬ್ಯಾಟಿಂಗ್ ಮಾಡುವಾಗ ವಾತಾವರಣ ಕಠಿಣವಾಗಿತ್ತು. ತಂಡದಲ್ಲಿ ಉತ್ತಮ ಎಡಗೈ ಸ್ಪಿನ್ನರ್ ಕೊರತೆಯಿದೆ. ಇದು ನಮಗೆ ಹಿನ್ನಡೆಯಾಗಿದೆ. ನಾವು ಶಾಬಾಝ್ ನದೀಮ್ ಸೇವೆಯಿಂದ ವಂಚಿತರಾಗಿದ್ದೇವೆ. ಈಗ ಭಾರತ ‘ಎ’ ತಂಡದ ಪರ ಆಡುತ್ತಿರುವ ನದೀಮ್ ಟೂರ್ನಮೆಂಟ್‌ನ ಲೀಗ್ ಹಂತದಲ್ಲಿ ಇಂಡಿಯಾ ರೆಡ್ ಪರ ಉತ್ತಮ ಪ್ರದರ್ಶನ ನೀಡಿದ್ದರು’’ ಎಂದು ಇಂಡಿಯಾ ರೆಡ್ ನಾಯಕ ಅಭಿನವ್ ಮುಕುಂದ್ ಹೇಳಿದ್ದಾರೆ.

‘‘ನಮ್ಮ ತಂಡದ ಪ್ರತಿ ಸದಸ್ಯರೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ 541 ರನ್ ಗಳಿಸಿದ ಕಾರಣ ಮೇಲುಗೈ ಸಾಧಿಸಲು ಸಾಧ್ಯವಾಯಿತು. ನಮ್ಮ ಬೌಲರ್‌ಗಳು ದಾಂಡಿಗರಿಗೆ ಉತ್ತಮ ಸಾಥ್ ನೀಡಿದರು. ಇದೊಂದು ಉತ್ತಮ ಸರ್ವಾಂಗೀಣ ಪ್ರಯತ್ನವಾಗಿದೆ’’ ಎಂದು ಇಂಡಿಯಾ ಬ್ಲೂ ತಂಡದ ನಾಯಕ ಫೈಝ್ ಫಝಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News