ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಗಾಗಿ ಸೆರೆನಾ-ಒಸಾಕಾ ಹಣಾಹಣಿ

Update: 2018-09-07 18:40 GMT

ನ್ಯೂಯಾರ್ಕ್, ಸೆ.7: ಅಮೆರಿಕನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಅಮೆರಿಕದ ಹಿರಿಯ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಹಾಗೂ ಜಪಾನ್‌ನ ಕಿರಿಯ ಆಟಗಾರ್ತಿ ನಯೊಮಿ ಒಸಾಕಾ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಗಾಗಿ ಶನಿವಾರ ಹೋರಾಡಲಿದ್ದಾರೆ. ಗುರುವಾರ ಇಲ್ಲಿ ನಡೆದ ಎರಡನೇ ಸೆಮಿ ಫೈನಲ್‌ನಲ್ಲಿ ಕಳೆದ ವರ್ಷ ಯುಎಸ್ ಓಪನ್‌ನಲ್ಲಿ ಎರಡನೇ ಸ್ಥಾನ ಪಡೆದಿದ್ದ ಕಿ ಮ್ಯಾಡಿಸನ್‌ರನ್ನು ನೇರ ಸೆಟ್‌ಗಳಿಂದ ಸದೆ ಬಡಿದ ಜಪಾನ್ ಆಟಗಾರ್ತಿ ನಯೊಮಿ ಒಸಾಕಾ ಫೈನಲ್ ತಲುಪಿದ್ದಾರೆ. ಈ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

 ಸೆಮಿ ಫೈನಲ್ ಹಣಾಹಣಿಯಲ್ಲಿ 20ರ ಹರೆಯದ ಒಸಾಕಾ ಅಮೆರಿಕದ ಆಟಗಾರ್ತಿ ಮ್ಯಾಡಿಸನ್‌ರನ್ನು 6-2, 6-4 ಸೆಟ್‌ಗಳಿಂದ ಸೋಲಿಸಿದರು. ಈ ಗೆಲುವಿನೊಂದಿಗೆ ವೃತ್ತಿಜೀವನದಲ್ಲಿ ಮೊದಲ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದಾರೆ.

ಒಸಾಕಾ ಶನಿವಾರ ನಡೆಯಲಿರುವ ಫೈನಲ್ ಫೈಟ್‌ನಲ್ಲಿ ಆರು ಬಾರಿಯ ಚಾಂಪಿಯನ್ ಸೆರೆನಾ ವಿಲಿಯಮ್ಸ್ ರನ್ನು ಎದುರಿಸಲಿದ್ದಾರೆ. ಒಸಾಕಾ ಗ್ರಾನ್‌ಸ್ಲಾಮ್ ಫೈನಲ್ ತಲುಪಿದ ಜಪಾನ್‌ನ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದಾರೆ.

ಸೆರೆನಾ 9ನೇ ಬಾರಿ ಫೆನಲ್‌ಗೆ ಲಗ್ಗೆ

ಇದಕ್ಕೆ ಮೊದಲು ನಡೆದ ಯುಎಸ್ ಓಪನ್‌ನ ಮಹಿಳೆಯರ ಸಿಂಗಲ್ಸ್‌ನ ಮೊದಲ ಸೆಮಿ ಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್ 9ನೇ ಬಾರಿ ಪ್ರಶಸ್ತಿ ಸುತ್ತಿಗೆ ತಲುಪಿದ ಸಾಧನೆ ಮಾಡಿದರು.

ಗುರುವಾರ ನಡೆದ ಅಂತಿಮ-4ರ ಸುತ್ತಿನ ಪಂದ್ಯದಲ್ಲಿ 17ನೇ ಶ್ರೇಯಾಂಕದ ವಿಲಿಯಮ್ಸ್ ಲಾಟ್ವಿಯದ ಅನಸ್ಟೇಸಿಜಾ ಸೆವಾಸ್ಟೋವಾರನ್ನು 6-3, 6-0 ಅಂತರದಿಂದ ಸುಲಭವಾಗಿ ಮಣಿಸಿದರು. ಕಳೆದ ವರ್ಷ ಸೆ.1 ರಂದು ಪುತ್ರಿ ಒಲಿಂಪಿಯಾಗೆ ಜನ್ಮ ನೀಡಿದ ಬಳಿಕ ದಾಖಲೆ 23ನೇ ಗ್ರಾನ್‌ಸ್ಲಾಮ್ ಪ್ರಶಸ್ತಿ ನಿರೀಕ್ಷೆಯಲ್ಲಿರುವ ವಿಲಿಯಮ್ಸ್ ಮೊದಲ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಸೆಮಿ ಫೈನಲ್‌ನಲ್ಲಿ ಆಡಿದ 19ನೇ ಶ್ರೇಯಾಂಕದ ಸೆವಾಸ್ಟೋವಾರನ್ನು ಕೇವಲ 66 ನಿಮಿಷಗಳಲ್ಲಿ ಸೋಲಿಸಿದರು.

‘‘ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇದೊಂದು ಅಪೂರ್ವ ಜಯ. ಸರಿಯಾಗಿ ಒಂದುವರ್ಷದ ಹಿಂದೆ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಲು ನನ್ನ ಪ್ರಾಣದೊಂದಿಗೆ ಹೋರಾಡುತ್ತಿದ್ದೆ. ಟೆನಿಸ್‌ನಲ್ಲಿ ಮತ್ತೊಮ್ಮೆ ಆಡಲು ಅವಕಾಶ ಲಭಿಸಿದ್ದಕ್ಕೆ ಸಂತೋಷವಾಗುತ್ತಿದೆ. ಧನಾತ್ಮಕ ಅಂಶಗಳತ್ತ ಎದುರು ನೋಡುತ್ತಿರುವೆ’’ ಎಂದು ಈ ವರ್ಷ ವಿಂಬಲ್ಡನ್ ಫೈನಲ್‌ನಲ್ಲಿ ಸೋತು ರನ್ನರ್ಸ್-ಅಪ್ ಪ್ರಶಸ್ತಿ ಗೆದ್ದ ಬಳಿಕ ಎರಡನೇ ಬಾರಿಗೆ ಫೈನಲ್‌ಗೆ ತಲುಪಿರುವ ವಿಲಿಯಮ್ಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News