ಇರಾಕ್‌ನ ಇರಾನ್ ಕಾನ್ಸುಲೇಟ್ ಕಚೇರಿಯಲ್ಲಿ ಪ್ರತಿಭಟನಕಾರರ ದಾಂಧಲೆ

Update: 2018-09-08 16:34 GMT

ಬಸ್ರಾ (ಇರಾಕ್), ಸೆ. 8: ಇರಾಕ್‌ನ ರಾಜಕೀಯ ಕುಲೀನರ ದುರಾಡಳಿತ ಮತ್ತು ಭ್ರಷ್ಟಾಚಾರದ ವಿರುದ್ಧ ಭುಗಿಲೆದ್ದಿರುವ ಜನರ ಆಕ್ರೋಶವು ನಾಗರಿಕ ಅಶಾಂತಿಗೆ ಕಾರಣವಾಗಿದೆ. ಶುಕ್ರವಾರ ಪ್ರತಿಭಟನಕಾರರು ಬಸ್ರಾ ನಗರದಲ್ಲಿರುವ ಇರಾನ್ ಕಾನ್ಸುಲೇಟ್‌ಗೆ ನುಗ್ಗಿದರು ಹಾಗೂ ಪ್ರತಿಭಟನಕಾರರ ಇನ್ನೊಂದು ಗುಂಪು ಸಮೀಪದ ತೈಲ ಸ್ಥಾವರದ ಕೆಲಸಗಾರರನ್ನು ಸ್ವಲ್ಪ ಅವಧಿಗೆ ಒತ್ತೆಸೆರೆಯಲ್ಲಿಟ್ಟಿತು.

ಐದು ದಿನಗಳ ಕಾಲ ಬಸ್ರಾ ನಗರದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸಿರುವ ಪ್ರತಿಭಟನಕಾರರು ಸರಕಾರಿ ಕಟ್ಟಡಗಳಲ್ಲಿ ದಾಂಧಲೆ ನಡೆಸಿದ್ದಾರೆ ಹಾಗೂ ಅವುಗಳಿಗೆ ಬೆಂಕಿ ಕೊಟ್ಟಿದ್ದಾರೆ.

ಶುಕ್ರವಾರ ಇರಾನ್‌ನ ಕಾನ್ಸುಲೇಟ್ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದರು ಹಾಗೂ ಪೀಠೋಪಕರಣಗಳನ್ನು ಧ್ವಂಸಗೊಳಿಸಿದರು. ಅವರು ಇರಾಕ್‌ನ ರಾಜಕೀಯ ವ್ಯವಹಾರಗಳಲ್ಲಿ ಇರಾನ್‌ನ ಹಸ್ತಕ್ಷೇಪವನ್ನು ಖಂಡಿಸುತ್ತಿದ್ದರು.

ಪ್ರತಿಭಟನಕಾರರು ನುಗ್ಗಿದಾಗ ಇರಾನ್ ಕಾನ್ಸುಲೇಟ್ ಕಚೇರಿ ಖಾಲಿಯಾಗಿತ್ತು.

ಈ ದಾಳಿಗೆ ಇರಾಕ್ ವಿಷಾದ ವ್ಯಕ್ತಪಡಿಸಿದೆ.

ಆದರೆ, ಈ ದಾಳಿಗೆ ಇರಾನ್ ಇರಾಕನ್ನೇ ಜವಾಬ್ದಾರಿಯಾಗಿಸಿದೆ. ತನ್ನ ರಾಯಭಾರ ಕಚೇರಿಗೆ ರಕ್ಷಣೆ ನೀಡುವಲ್ಲಿ ಇರಾಕ್ ವಿಫಲವಾಗಿದೆ ಎಂದು ಇರಾನ್ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News