ಪತಿಬೇಕು.com: ರಂಜನೆಗಾಗಿ ಈ ಚಿತ್ರ ನೋಡಬೇಕು!

Update: 2018-09-08 18:31 GMT
Editor : ಶಶಿ

ಬಹುಶಃ ಕಮರ್ಷಿಯಲ್ ಸಿನೆಮಾಗಳಲ್ಲಿ ಈ ವರ್ಷದಷ್ಟು ಹೊಸ ರೀತಿಯ ಪ್ರಯೋಗ ಈ ಹಿಂದೆಂದೂ ನಡೆದಿರಲಿಲ್ಲ ಎನ್ನಬಹುದು. ಶೀತಲ್ ಶೆಟ್ಟಿ ನಾಯಕಿಯಾಗಿರುವ ಪತಿಬೇಕು.com ಸಿನೆಮಾ ಕೂಡ ಅಂಥದೇ ಒಂದು ಹೊಸತನ ತುಂಬಿರುವಂಥ ಚಿತ್ರ.

ಸಾಮಾನ್ಯವಾಗಿ ನಾಯಕಿ ಪ್ರಧಾನ ಚಿತ್ರಗಳು ಅಂದೊಡನೆ ಅಲ್ಲಿ ಕಣ್ಣೀರಿಗೆ ಪ್ರಾಧಾನ್ಯತೆ ಇರುತ್ತದೆ ಅಥವಾ ಅಪರೂಪಕ್ಕೆ ಆ್ಯಕ್ಷನ್ ಚಿತ್ರಗಳೂ ಇರುವುದುಂಟು. ಆದರೆ ಅವೆಲ್ಲವುಗಳಿಗಿಂತ ಭಿನ್ನವಾಗಿ, ನಾಯಕಿಯನ್ನೇ ಹಾಸ್ಯ ಚಿತ್ರದ ಆಕರ್ಷಣೆಯನ್ನಾಗಿಸಿರುವುದು ಈ ಚಿತ್ರದ ವಿಶೇಷ.

ನಾಯಕಿಯ ಹೆಸರು ಭಾಗ್ಯ. ತಂದೆ ತಾಯಿಯ ಏಕೈಕ ಸಂತಾನ. ಹಾಗಂತ ಮುದ್ದಿನಿಂದ ಬೆಳೆಸಲು ಅವರ ಮಧ್ಯಮವರ್ಗದ ಸ್ಥಿತಿಗತಿ ಅವಕಾಶ ನೀಡಿಲ್ಲ. ಸಾಲದೆಂಬಂತೆ ವಿವಾಹದ ವಯಸ್ಸು ದಾಟಿದರೂ ಆಕೆಗೆ ಸಂಬಂಧ ಕೂಡಿ ಬಂದಿಲ್ಲ. ಆದರೆ ಅವೆಲ್ಲವನ್ನೂ ನಗು ನಗುತ್ತಲೇ ಎದುರಿಸುವ ಮನಸ್ಥಿತಿ ಈ ಹುಡುಗಿಯದ್ದು. ಕೊನೆಗೆ ಮದುವೆಯಾಗಿ ತಾನು ಸೆಟ್ಲಾಗುವುದಕ್ಕಿಂತ, ಮದುವೆ ಮಾಡಿಸದಿದ್ದರೂ ಸೆಟಲ್ಡ್ ಆಗಿರುವ ಬ್ರೋಕರ್‌ನ ಸಂಪಾದನೆ ಈಕೆಯ ಕಣ್ಣನ್ನು ತೆರೆಸುತ್ತದೆ. ಹಾಗಾಗಿ ಸ್ವತಃ ಮ್ಯಾರೇಜ್ ಬ್ರೋಕರ್ ಕೆಲಸಕ್ಕೆ ಮುಂದಾಗುತ್ತಾಳೆ! ಆದರೆ ಯಾರದೋ ಮದುವೆ ಮಾಡಿಸುವ ಪ್ರಯತ್ನದಲ್ಲಿ ತಾನೇ ಹುಡುಗನೊಬ್ಬನನ್ನು ಇಷ್ಟಪಡಲಾರಂಭಿಸುತ್ತಾಳೆ. ಆದರೆ ಆ ಮದುವೆಯನ್ನು ನಡೆಸಲು ಭಾಗ್ಯ ಪಡುವ ಬವಣೆಯೇನು ಎನ್ನುವುದನ್ನು ಚಿತ್ರ ಸ್ವಾರಸ್ಯಕರವಾಗಿ ಹೇಳಿದೆ.

ಇದುವರೆಗೆ ಸಣ್ಣ ಪುಟ್ಟ ಪಾತ್ರಗಳಿಂದಲೇ ಗುರುತಿಸಿಕೊಂಡಿದ್ದ ಶೀತಲ್ ಶೆಟ್ಟಿ ಪ್ರಥಮ ಬಾರಿಗೆ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಖಾಸಗಿ ವಾಹಿನಿಯಲ್ಲಿ ವಾರ್ತಾವಾಚಕಿಯಾಗಿದ್ದಾಗಲೇ ತಮ್ಮ ಲವಲವಿಕೆಯ ಶೈಲಿಯಿಂದ ಗಮನ ಸೆಳೆದ ಈಕೆಗೆ, ಹೇಳಿ ಮಾಡಿಸಿದಂಥ ಪಾತ್ರವಾಗಿ ಭಾಗ್ಯ ಕೈ ಸೇರಿದೆ. ದುಡ್ಡಿಗಾಗಿ ಅಂಧೆಯಾಗಿ, ಮೂಗಿಯಾಗಿ ನಟಿಸುವ ಮೊದಮೊದಲ ದೃಶ್ಯದಿಂದಲೇ ಆ ಮ್ಯಾಜಿಕ್ ಶುರುವಾಗುತ್ತದೆ. ಅದೇ ಲವಲವಿಕೆಯ ತಂದೆ ತಾಯಿಯ ಪಾತ್ರಗಳು ಸೇರಿದಂತೆ ಎಲ್ಲವನ್ನೂ ಆಕರ್ಷಕಗೊಳಿಸುವ ನಿರ್ದೇಶಕರ ಪ್ರಯತ್ನ ಬಹುಪಾಲು ಗೆದ್ದಿದೆ.

ಪ್ರಥಮ ಚಿತ್ರದಲ್ಲೇ ಇಂಥದೊಂದು ಪ್ರಯೋಗ ನಡೆಸುವ ಜೊತೆಗೆ ಸಣ್ಣದೊಂದು ಪಾತ್ರದಲ್ಲಿಯೂ ಸೈ ಅನಿಸಿರುವ ನಿರ್ದೇಶಕರು ಅಭಿನಂದನಾರ್ಹರು. ಶೀತಲ್‌ಗೆ ಜೋಡಿಯಾಗಿ ನಟಿಸಿರುವ ಅರು ಗೌಡ ತಮಗೆ ಸಿಕ್ಕ ಪಾತ್ರವನ್ನು ಚೊಕ್ಕವಾಗಿಯೇ ನಿಭಾಯಿಸಿದ್ದಾರೆ. ಟ್ರೇಲರ್ ಮಾತ್ರ ನೋಡಿ ಇದೊಂದು ಹೆಣ್ಣಿನ ದುರಂತ ಕತೆ ಹೇಳುವ ಚಿತ್ರ ಎಂದುಕೊಂಡು ನೀವು ಚಿತ್ರ ನೋಡದಿದ್ದರೆ ಒಂದೊಳ್ಳೆಯ ಮನರಂಜನಾತ್ಮಕ ಚಿತ್ರವನ್ನು ಕಳೆದುಕೊಳ್ಳುತ್ತೀರಿ. ಅಂದಹಾಗೆ ಮನರಂಜನೆಯಲ್ಲಿ ಇತ್ತೀಚೆಗೆ ಒಪ್ಪಿತವಾಗುತ್ತಿರುವ ಸಣ್ಣಮಟ್ಟಿನ ದ್ವಂದ್ವಾರ್ಥದ ಸಂಭಾಷಣೆಗಳು ಕೂಡ ಇವೆ! ಒಟ್ಟಿನಲ್ಲಿ ಎಲ್ಲ ಲಾಜಿಕ್‌ಗಳನ್ನು ಬದಿಗಿರಿಸಿ ಮನರಂಜನೆಯನ್ನೇ ಗುರಿಯಾಗಿಸಿ ಚಿತ್ರಮಂದಿರಕ್ಕೆ ಕಾಲಿಡುವ ಪ್ರೇಕ್ಷಕರನ್ನು ಚಿತ್ರ ತೃಪ್ತಿ ಪಡಿಸುವುದರಲ್ಲಿ ಸಂದೇಹ ಬೇಡ.

ತಾರಾಗಣ: ಶೀತಲ್ ಶೆಟ್ಟಿ, ಅರುಗೌಡ
ನಿರ್ದೇಶಕ, ನಿರ್ಮಾಪಕ: ರಾಕೇಶ್

Writer - ಶಶಿ

contributor

Editor - ಶಶಿ

contributor

Similar News