ಮಾರ್ಷ್ ಅರ್ಧಶತಕ, ಆಸ್ಟ್ರೇಲಿಯ ‘ಎ’ 290/6

Update: 2018-09-08 18:35 GMT

ಬೆಂಗಳೂರು, ಸೆ.8: ನಾಯಕ ಮಿಚೆಲ್ ಮಾರ್ಷ್ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯ ‘ಎ’ ತಂಡ ಭಾರತ ‘ಎ’ ವಿರುದ್ಧ ಶನಿವಾರ ಆರಂಭವಾದ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದ ಮೊದಲ ದಿನ 6 ವಿಕೆಟ್‌ಗಳ ನಷ್ಟಕ್ಕೆ 290 ರನ್ ಗಳಿಸಿದೆ. ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಆಸ್ಟ್ರೇಲಿಯ ಒಂದು ಹಂತದಲ್ಲಿ 180 ರನ್‌ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಮಾರ್ಷ್ ಹಾಗೂ ಮಿಚೆಲ್ ನೆಸೆರ್(ಔಟಾಗದೆ 44)ಏಳನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 110 ರನ್ ಗಳಿಸಿ ತಂಡವನ್ನು ಆಧರಿಸಿದ್ದಾರೆ.

151 ಎಸೆತಗಳನ್ನು ಎದುರಿಸಿರುವ ಮಾರ್ಷ್ 13 ಬೌಂಡರಿಗಳನ್ನು ಬಾರಿಸಿದರು. ನೆಸೆರ್ 108 ಎಸೆತಗಳಲ್ಲಿ 6 ಬೌಂಡರಿ ಸಿಡಿಸಿದ್ದಾರೆ.

ಅಗ್ರ ಕ್ರಮಾಂಕದ ದಾಂಡಿಗರ ಪೈಕಿ ಟ್ರೆವಿಸ್ ಹೆಡ್(68) ಹಾಗೂ ಆರಂಭಿಕ ಆಟಗಾರ ಕುರ್ಟಿಸ್ ಪ್ಯಾಟರ್ಸನ್(48)ಎರಡನೇ ವಿಕೆಟ್‌ಗೆ 92 ರನ್ ಸೇರಿಸಿ ಉತ್ತಮ ಆರಂಭ ನೀಡಿದ್ದರು. ಚೈನಾಮನ್ ಬೌಲರ್ ಕುಲ್‌ದೀಪ್ ಯಾದವ್(2-68) ಹಾಗೂ ಎಡಗೈ ಸ್ಪಿನ್ನರ್ ಶಹಬಾಝ್ ನದೀಮ್(2-64)ತಲಾ ಎರಡು ವಿಕೆಟ್ ಕಬಳಿಸಿ ಆಸೀಸ್ ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಕುಸಿತ ಕಾಣಲು ಕಾರಣರಾದರು.

ಆಫ್-ಸ್ಪಿನ್ನರ್ ಕೆ.ಗೌತಮ್(1-60) ಹಾಗೂ ರಜನೀಶ್ ಗುರ್ಬಾನಿ(1-50) ತಲಾ ಒಂದು ವಿಕೆಟ್ ಪಡೆದಿದ್ದಾರೆ.

 ಆಸ್ಟ್ರೇಲಿಯ ‘ಎ’ ತಂಡ ಆರಂಭಿಕ ಆಟಗಾರ ಮ್ಯಾಟ್ ರೆನ್‌ಶಾ(0) ವಿಕೆಟ್‌ನ್ನು ಬೇಗನೆ ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಪ್ಯಾಟರ್ಸನ್ ಹಾಗೂ ಹೆಡ್ 2ನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯ 98 ರನ್‌ಗಳಿಂದ ಜಯ ಸಾಧಿಸಲು ನೆರವಾಗಿದ್ದ ಆರಂಭಿಕ ಉಸ್ಮಾನ್ ಖ್ವಾಜಾ ಹಾಗೂ ಸ್ಪಿನ್ನರ್ ಜಾನ್ ಹಾಲೆಂಡ್‌ಗೆ ವಿಶ್ರಾಂತಿ ನೀಡಲಾಗಿತ್ತು. ರೆನ್‌ಶಾ, ಅಗರ್ ಹಾಗೂ ಲೆಗ್ ಸ್ಪಿನ್ನರ್ ಮಿಚೆಲ್ ಸ್ವೆಪ್ಸನ್‌ಗೆ ಅವಕಾಶ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News