ಒಡಿಶಾ: ವಿವಾಹವಾಗಲು ನಿರ್ಧರಿಸಿದ ತೃತೀಯ ಲಿಂಗಿ ಅಧಿಕಾರಿ

Update: 2018-09-10 15:12 GMT

ಭುವನೇಶ್ವರ, ಸೆ.10: ಸಮ್ಮತಿಯ ಸಲಿಂಗಕಾಮ ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ, ತಾನು ವಿವಾಹವಾಗಲು ನಿರ್ಧರಿಸಿರುವುದಾಗಿ ಒಡಿಶಾದ ಪ್ರಪ್ರಥಮ ತೃತೀಯ ಲಿಂಗಿ ಐಎಎಸ್ ಅಧಿಕಾರಿಯಾಗಿರುವ ಐಶ್ವರ್ಯಾ ರುತುಪರ್ಣ ಪ್ರಧಾನ್ ತಿಳಿಸಿದ್ದಾರೆ.

ಹಿಜಡಾ ಎಂದು ಕರೆಯಲಾಗುತ್ತಿದ್ದವರನ್ನು ತೃತೀಯ ಲಿಂಗಿಗಳು ಎಂದು ಕರೆಯುವಂತೆ 2014ರಲ್ಲಿ ಸುಪ್ರೀಂಕೋರ್ಟ್ ಸೂಚನೆ ನೀಡಿದ ಬಳಿಕ, ತಾನು ತೃತೀಯ ಲಿಂಗಿ ಎಂದು ಒಡಿಶಾ ಆರ್ಥಿಕ ಇಲಾಖೆಯಲ್ಲಿ ಅಧಿಕಾರಿಯಾಗಿರುವ 34ರ ಹರೆಯದ ಐಶ್ವರ್ಯಾ ಪ್ರಧಾನ್ ಬಹಿರಂಗೊಳಿಸಿದ್ದರು. ಬಳಿಕ ಅವರ ಸೇವಾದಾಖಲೆಯಲ್ಲಿ ಪುರುಷ ಎಂಬ ಪದದ ಬದಲು ತೃತೀಯ ಲಿಂಗಿ ಎಂದು ಸೇರಿಸುವಂತೆ ಸರಕಾರ ಅಧಿಸೂಚನೆ ಹೊರಡಿಸಿತ್ತು. 2016ರಲ್ಲಿ ಓರ್ವ ಸ್ವೋದ್ಯೋಗಿಯೊಂದಿಗೆ ಲಿವ್-ಇನ್ ಸಂಬಂಧ ಹೊಂದಿರುವುದಾಗಿ ಐಶ್ವರ್ಯ ತಿಳಿಸಿದ್ದರು. ಈ ಹಿಂದೆ ನಾವು ಮಾಡುತ್ತಿರುವುದು ಕ್ರಿಮಿನಲ್ ಅಪರಾಧ ಎಂದು ಭಾವಿಸಲಾಗುತ್ತಿತ್ತು. ಆದರೆ ಈಗ ಸುಪ್ರೀಂಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪಿನ ಬಳಿಕ, ಇದೀಗ ನನ್ನ ಸಂಗಾತಿಯನ್ನು ಮದುವೆಯಾಗಿ, ಕಾನೂನು ಅವಕಾಶ ನೀಡಿದರೆ ಒಂದು ಮಗುವನ್ನು ದತ್ತು ಪಡೆದು ಕೌಟುಂಬಿಕ ಜೀವನವನ್ನು ಆರಂಭಿಸುವುದಾಗಿ ಹೆಮ್ಮೆಯಿಂದ ಘೋಷಿಸುತ್ತೇನೆ ಎಂದು ಐಶ್ವರ್ಯ ತಿಳಿಸಿದ್ದಾರೆ.

ಆದರೆ ಪ್ರಾಥಮಿಕ ಶಾಲಾ ದಿನದಿಂದ ಪದವಿ ತರಗತಿಯವರೆಗಿನ ಅವಧಿಯಲ್ಲಿ ತಾನು ಬಹಳಷ್ಟು ನಿಂದನೆ, ಅವಹೇಳನ ಎದುರಿಸಬೇಕಾಯಿತು ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News