ಭಾರತ್ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Update: 2018-09-10 17:18 GMT

ಹೊಸದಿಲ್ಲಿ, ಸೆ. 10: ತೈಲ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಸೋಮವಾರ ಕರೆ ನೀಡಿದ್ದ ಭಾರತ್ ಬಂದ್‌ಗೆ ಹೆಚ್ಚಿನ ವಿರೋಧ ಪಕ್ಷಗಳು ಬೆಂಬಲ ಸೂಚಿಸಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕ ರಾಜ್ಯಗಳಲ್ಲಿ ಶಿಕ್ಷಣ ಸಂಸ್ಥೆಗಳು, ವ್ಯಾಪಾರ ಕೇಂದ್ರಗಳು ಮುಚ್ಚಿದ್ದವು. ಬಸ್ ಹಾಗೂ ಇತರ ವಾಹನಗಳು ರಸ್ತೆಗಿಳಿಯದ ಕಾರಣ ಜನರು ಪರದಾಡುವಂತಾಯಿತು. ಕೆಲವೆಡೆ ಹಿಂಸಾಚಾರದ ಘಟನೆಗಳು ವರದಿಯಾಗಿದ್ದು, ಬಿಹಾರ, ಅಸ್ಸಾಂ ಮುಂತಾದ ರಾಜ್ಯಗಳಲ್ಲಿ ಪ್ರತಿಭಟನಕಾರರು ರಸ್ತೆ ಹಾಗೂ ರೈಲುಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಹಲವೆಡೆ ಪೊಲೀಸರು ಪ್ರತಿಭಟನಕಾರರನ್ನು ವಶಕ್ಕೆ ತೆಗೆದುಕೊಂಡರು. 

ಬಂದ್‌ಗೆ ಬಿಹಾರ, ಆಂಧ್ರಪ್ರದೇಶ, ತ್ರಿಪುರಾ, ಪುದುಚೇರಿ, ಕರ್ನಾಟಕ, ಕೇರಳ ರಾಜ್ಯಗಳಲ್ಲಿ ಉತ್ತಮ ಪ್ರತಿಕ್ರಿಯೆ; ಗುಜರಾತ್, ತೆಲಂಗಾಣ, ಒರಿಸ್ಸಾ ರಾಜ್ಯಗಳಲ್ಲಿ ಮಿಶ್ರ ಪ್ರತಿಕ್ರಿಯೆ; ಪಶ್ಚಿಮಬಂಗಾಳ, ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ, ಮಿರೆರಾಮ್, ಉತ್ತರ ಪ್ರದೇಶ, ದಿಲ್ಲಿ, ಮಹಾರಾಷ್ಟ್ರ, ಗೋವಾ, ಅಸ್ಸಾಂ, ತಮಿಳುನಾಡುಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ ಜಾತ್ಯತೀತ ಜನತಾದಳ (ಜೆಡಿಎಸ್), ಸಮಾಜವಾದಿ ಪಕ್ಷ (ಎಸ್‌ಪಿ), ದ್ರಾವಿಡ ಮುನ್ನೆತ್ರ ಕಳಗಂ (ಡಿಎಂಕೆ), ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಹಾಗೂ ಮಹಾರಾಷ್ಟ ನವ ನಿರ್ಮಾಣ ಸೇನೆ (ಎಂಎನ್‌ಎಸ್), ಆಮ್ ಆದ್ಮಿ ಪಕ್ಷ (ಎಎಪಿ ) ಸೇರಿದಂತೆ 21 ಪಕ್ಷಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದವು.

ಆದರೆ, ಬಿಜು ಜನತಾ ದಳ (ಬಿಜೆಡಿ), ಶಿವಸೇನೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಬಂದ್‌ನಿಂದ ದೂರ ಉಳಿದವು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೊಸದಿಲ್ಲಿಯಲ್ಲಿ ಸೋಮವಾರ ಬೆಳಗ್ಗೆ ರಾಜ್‌ಘಾಟ್‌ಗೆ ಭೇಟಿ ನೀಡಿ ಬಂದ್‌ನ ನೇತೃತ್ವ ವಹಿಸಿದರು. ಅಲ್ಲಿಂದ ಅವರು ನೇರವಾಗಿ ರಾಮಲೀಲಾ ಮೈದಾನಕ್ಕೆ ತೆರಳಿ ಪಕ್ಷದ ಇತರ ನಾಯಕರು ಹಾಗೂ ಕಾರ್ಯಕರ್ತರನ್ನು ಸೇರಿಕೊಂಡರು. ಉತ್ತರಪ್ರದೇಶದಲ್ಲಿ ಅಖಿಲೇಶ್ ಯಾದವ್ ತನ್ನ ಪಕ್ಷದ ಇತರ ಕಾರ್ಯಕರ್ತರೊಂದಿಗೆ ಸೈಕ್ಲಿಂಗ್ ನಡೆಸುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಮತ್ತು ಸಿಪಿಐ ಕಾರ್ಯಕರ್ತರು ಜಿಲ್ಲಾ ಕಚೇರಿಗಳಿಗೆ ಎತ್ತಿನ ಗಾಡಿಯಲ್ಲಿ ಸಾಗಿದರು ಮತ್ತು ಹೆದ್ದಾರಿ, ರೈಲು ಬಂದ್ ನಡೆಸಿದರು.

ಈ ವೇಳೆ ಪೊಲೀಸರು ಹಲವು ಪ್ರದರ್ಶನಕಾರರನ್ನು ವಶಕ್ಕೆ ಪಡೆದುಕೊಂಡರು. ಭುವನೇಶ್ವರದಲ್ಲಿ ಬಂದ್ ಆಚರಿಸುತ್ತಿದ್ದ 50ಕ್ಕೂ ಅಧಿಕ ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿ ಬಸ್‌ಗಳಲ್ಲಿ ಠಾಣೆಗೆ ಕೊಂಡೊಯ್ದರು. ರಾಂಚಿ ಹಾಗೂ ಇತರ ಪ್ರದೇಶಗಳಿಂದ ಪೊಲೀಸರು ಸುಮಾರು 5 ಸಾವಿರ ಪ್ರತಿಭಟನಕಾರರನ್ನು ವಶಕ್ಕೆ ಪಡೆದುಕೊಂಡರು. ಬಂದ್ ವೇಳೆ ಹಿಂಸಾಚಾರ ನಡೆಯುವುದನ್ನು ತಪ್ಪಿಸಲು ರಾಂಚಿ ಜಿಲ್ಲಾಡಳಿತ ಮುರದಾಬಾದ್‌ನಲ್ಲಿರುವ ಬಿರ್ಸಾಮುಂಡಾ ಫುಟ್‌ಬಾಲ್ ಮೈದಾನ, ಹೊತ್ವಾರ್‌ನಲ್ಲಿರುವ ಖೇಲ್‌ಗಾಂವ್ ಮೈದಾನ ಹಾಗೂ ದುರ್ವಾದಲ್ಲಿ ಜೆ.ಎಲ್. ಮೈದಾನವನ್ನು ಜೈಲು ಶಿಬಿರಗಳಾಗಿ ಪರವರ್ತಿಸಿ ಬಂಧಿತರನ್ನು ಇರಿಸಲು ವ್ಯವಸ್ಥೆ ಮಾಡಿತ್ತು.

ಈಶಾನ್ಯ ರಾಜ್ಯಗಳಲ್ಲಿ ಬಂದ್ ಬಿಸಿ ವ್ಯಾಪಿಸಿತ್ತು. ಹಲವು ಪ್ರತಿಪಕ್ಷಗಳು ರಸ್ತೆಗಿಳಿದು ಕೇಂದ್ರ ಸರಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದವು. ಛತ್ತೀಸ್‌ಗಡದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳ ಕಾರ್ಯಕರ್ತರು ಎತ್ತಿನ ಗಾಡಿ ಮತ್ತು ಕುದುರೆಗಾಡಿಗಳಲ್ಲಿ ಸಾಗಿ ಬೆಲೆ ಏರಿಕೆ ವಿರುದ್ಧ ಸಾಮಾನ್ಯ ಜನರು ಪಡುತ್ತಿರುವ ಬವಣೆಯ ಪ್ರಾತ್ಯಕ್ಷಿಕೆ ನೀಡಿದರು. ತ್ರಿಪುರಾದಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಯಿತು. ರಾಜ್ಯದಲ್ಲಿ ಬಸ್ ಸಂಚಾರ ಸಂಪೂರ್ಣ ಸ್ತಬ್ದವಾಗಿತ್ತು. ಮಾರುಕಟ್ಟೆಗಳು, ಮಾಲ್‌ಗಳು ಮುಚ್ಚಲ್ಪಟ್ಟಿದ್ದವು. ಬೆಲೆ ಏರಿಕೆ ವಿರುದ್ಧ ಸಣ್ಣ ವ್ಯಾಪಾರಿಗಳು ಹಾಗೂ ವರ್ತಕರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ತಮಿಳುನಾಡಿನಲ್ಲಿ ವಿವಿಧ ಪಕ್ಷಗಳಿಗೆ ಸೇರಿದ ರೈತರು ರಸ್ತೆ ತಡೆ ನಡೆಸಿದರು. ತೂತುಕುಡಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದೆ ಬಂದ್‌ಗೆ ಬೆಂಬಲ ಸೂಚಿಸಿದರು. ಪುದುಚೇರಿಯಲ್ಲಿ ಬಂದ್ ವೇಳೆ ಅಲ್ಲಲ್ಲಿ ಹಿಂಸಾಚಾರದ ಘಟನೆಗಳು ನಡೆದವು. ನೆಲ್ಲಿತೋಪುವಿನಲ್ಲಿ ರಾಜ್ಯ ರಸ್ತೆ ಸಾರಿಗೆ ಸೇರಿದ ಬಸ್‌ಗೆ ಕಲ್ಲು ತೂರಾಟ ನಡೆಸಲಾಯಿತು. ಒರಿಸ್ಸಾದಲ್ಲಿ ಬಂದ್‌ನಿಂದ ನಡೆಯಬಹುದಾದ ಅನಾಹುತಗಳನ್ನು ತಪ್ಪಿಸಲು ಈಸ್ಟ್‌ಕೋಸ್ಟ್ ರೈಲ್ವೇ ವಿಭಾಗವು ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಿತ್ತು. ರಾಜ್ಯದ ಇತರ ಕಡೆಗಳಲ್ಲೂ ರೈಲು ಸಂಚಾರ ವಿರಳವಾಗಿತ್ತು.

ಬಿಹಾರದಲ್ಲಿ ಹಲವೆಡೆ ಹಿಂಸಾಚಾರದ ಘಟನೆಗಳು ವರದಿಯಾಗಿದ್ದು, ರೈಲು ಹಾಗೂ ರಸ್ತೆ ತಡೆ, ಅಂಗಡಿ ಮುಂಗಟ್ಟುಗಳಿಗೆ ಹಾನಿ ಹಾಗೂ ಸಾರ್ವಜನಿಕ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News