ಮಂಚಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು-ಸಿಬ್ಬಂದಿಯ ಕೊರತೆ!

Update: 2018-09-11 05:30 GMT

ಬಂಟ್ವಾಳ, ಸೆ.11: ಬಂಟ್ವಾಳ ತಾಲೂಕಿನ ಮಂಚಿ ಗ್ರಾಪಂ ವ್ಯಾಪ್ತಿಗೊಳಪಡುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಯಂ ಮುಖ್ಯವೈದ್ಯರು ಹಾಗೂ ಸಿಬ್ಬಂದಿ ಕೊರತೆ ಯಿರುವ ಕಾರಣ ರೋಗಿಗಳು ಖಾಸಗಿ ಆಸ್ಪತ್ರೆಅಥವಾ ತಾಲೂಕು ಆಸ್ಪತ್ರೆಗೆ ದೌಡಾಯಿಸ ಬೇಕಾಗಿದೆ. ಅಲ್ಲದೆ, ಗ್ರಾಮೀಣ ಪ್ರದೇಶದ ರೋಗಿಗಳಿಗೆ ಚಿಕಿತ್ಸೆ ಮರೀಚಿಕೆಯಾಗಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಂಚಿ, ಇರಾ, ಕೊಳ್ನಾಡು, ಸುರಿಬೈಲು, ಸಾಲೆತ್ತೂರು ಹಾಗೂ ಕುಲಾಯಿ ಗ್ರಾಮಗಳ ಜನರಿಗೆ ಈ ಆರೋಗ್ಯ ಕೇಂದ್ರವೇ ಆಧಾರವಾಗಿದ್ದು, ಸುಮಾರು 30 ಸಾವಿರ ಜನಸಂಖ್ಯೆ ಹೊಂದಿದೆ. ಈ ಆರೋಗ್ಯ ಕೇಂದ್ರ ದಿನಕ್ಕೆ 140ಕ್ಕೂ ಅಧಿಕ ರೋಗಿಗಳು ಸಂದರ್ಶಿಸುತ್ತಿದ್ದು, ಇದೀಗ ಮುಖ್ಯ ವೈದ್ಯರು ಹಾಗೂ ಅಗತ್ಯ ಸಿಬ್ಬಂದಿ ಕೊರತೆಯಿಂದ ಇಲ್ಲಿನ ಆರೋಗ್ಯ ಕೇಂದ್ರಕ್ಕೆ ರೋಗಿಗಳ ಸಂಖ್ಯೆ ಇಳಿಮುಖವಾಗಿದೆ.

ಈ ಆರೋಗ್ಯ ಕೇಂದ್ರಕ್ಕೆ 69 ವರ್ಷಗಳ ಇತಿಹಾಸ ವಿದ್ದು, ಇಲ್ಲಿನ ದಿ.ಮಂಕುಡೆ ಕಾವೇರಿಯಮ್ಮ ಅವರ ನೆನಪಿಗಾಗಿ ಎಂ.ನಾರಾಯಣ ಆಚಾರ್ಯ 1949ರಲ್ಲಿ ಆರೋಗ್ಯ ಕೇಂದ್ರದ ಕಟ್ಟಡವನ್ನು ಅರ್ಪಿಸಿದ್ದರು.

48 ಅಂಗನವಾಡಿ ಕೇಂದ್ರಗಳು, ಮೂರು ಗ್ರಾಪಂಗಳು (ಮಂಚಿ, ಇರಾ, ಕೊಳ್ನಾಡು), ಮೂರು ಪ್ರೌಢ ಶಾಲೆಗಳು, 13 ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ 11 ಕಿರಿಯ ಶಾಲೆಗಳು ಈ ಆರೋಗ್ಯ ಕೇಂದ್ರಕ್ಕೆ ಒಳಪಡುತ್ತದೆ. ಅಲ್ಲದೆ, ಕುಲಾಯಿ ಮತ್ತು ಸುರಿಬೈಲು ಗ್ರಾಮಸ್ಥರೂ ಕೂಡಾ ಶುಶ್ರೂಷೆಗಾಗಿ ಇಲ್ಲಿಗೆ ಬರುತ್ತಾರೆ.

ಖಾಲಿ ಹುದ್ದೆಯ ಶಾಪ: ಆರೋಗ್ಯದ ಕೇಂದ್ರದ ಸಿಬ್ಬಂದಿ ವರ್ಗದ ವಿವರ ಗಮನಿಸಿದರೆ, ಒಟ್ಟು 19 ಹುದ್ದೆಗಳ ಪೈಕಿ ಓರ್ವ ಹಿರಿಯ ಸಹಾಯಕಿ ಮತ್ತು ಇಬ್ಬರು ಗ್ರೂಪ್ ಡಿ ನೌಕಕರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದಂತೆ ಕೇಂದ್ರದಲ್ಲಿ ಖಾಯಂ ವೈದ್ಯಾಧಿಕಾರಿ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ 6 ಹುದ್ದೆ, ಪುರುಷ ಆರೋಗ್ಯ ಸಹಾಯಕರ 1 ಹುದ್ದೆ, ಫಾರ್ಮಾಸಿಸ್ಟ್, ಶುಶ್ರೂಷಕಿ, ಕ್ಷೇತ್ರ ಆರೋಗ್ಯ ಶಿಕ್ಷಕಿ, ಕಿರಿಯ ಶಾಲಾ ತಂತ್ರಜ್ಞ, ದ್ವಿತೀಯ ದರ್ಜೆ ಸಹಾಯಕ, ವಾಹನ ಚಾಲಕ, ಕಿರಿಯ ಆರೋಗ್ಯ ಸಹಾಯಕ 2 ಹುದ್ದೆಗಳು ಖಾಲಿ ಇವೆ.

ಕೇಂದ್ರದಲ್ಲಿ ಖಾಯಂ ವೈದ್ಯರಿಲ್ಲದಿದ್ದರಿಂದ ಸಮಸ್ಯೆ ಉಂಟಾಗಿದೆ. ಖಾಯಂ ವೈದ್ಯರ ನಿಯುಕ್ತಿ ಅವಶ್ಯಕವಾಗಿದೆ. ಇದಲ್ಲದೆ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಹಾಗೂ ಆರೋಗ್ಯ ಕೇಂದ್ರದ ಸಮಸ್ಯೆಗಳಿಗೆ ಮುಕ್ತಿ ನೀಡಬೇಕೆಂಬುವುದು ಗ್ರಾಮಸ್ಥರ ಆಗ್ರಹ.

ರೋಗಿಗಳ ಸಂಖ್ಯೆ ಅಧಿಕವಾಗಿರುವ ಹಿನ್ನೆಲೆಯಲ್ಲಿ ಈ ಆರೋಗ್ಯ ಕೇಂದ್ರದ ಪಕ್ಕದಲ್ಲಿ ಹೊಸ ಕಟ್ಟಡದ ಕಾಮಗಾರಿ ಪ್ರಾರಂಭಗೊಂಡಿದ್ದು, ಪ್ರಗತಿಯಲ್ಲಿದೆ. ಖಾಯಂ ವೈದ್ಯಾಧಿಕಾರಿಯನ್ನು ನೇಮಿಸುವಂತೆ ಗ್ರಾಮ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಯನ್ನೂ ಒತ್ತಾಯಿ ಸಲಾಗಿದೆ. ಸದ್ಯಕ್ಕೆ ಕಣಚೂರು ಆಸ್ಪತ್ರೆಯ ವೈದ್ಯರೊಬ್ಬರು ವಾರಕ್ಕೆ 3 ದಿನ ಆಗಮಿಸಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಮೀಳಾ, ಅಧ್ಯಕ್ಷೆ, ಮಂಚಿ ಗ್ರಾಪಂ

ಈ ಮೊದಲು ಕಾರ್ಯನಿರ್ವಹಿಸುತ್ತಿದ್ದ ಮುಖ್ಯ ವೈದ್ಯರು ವೈಯಕ್ತಿಕ ಕಾರಣದಿಂದ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಕಳೆದ ಒಂದು ತಿಂಗಳಿಂದ ವೈದ್ಯರಿಲ್ಲದೆ, ಇಲ್ಲಿನ ಹಿರಿಯ ಸಹಾಯಕಿಯೊಬ್ಬರೇ ಎಲ್ಲ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯತ್ ಹಾಗೂ ತಾಲೂಕು ಆರೋಗ್ಯ ಕೇಂದ್ರಕ್ಕೆ ಮುಖ್ಯವೈದ್ಯರನ್ನು ತಕ್ಷಣ ನೇಮಿಸುವಂತೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ.

ಫೈಝಲ್ ಮಂಚಿ, ಸಾಮಾಜಿಕ ಹೋರಾಟಗಾರ

Writer - ಅಬ್ದುಲ್ ರಹಿಮಾನ್ ತಲಪಾಡಿ

contributor

Editor - ಅಬ್ದುಲ್ ರಹಿಮಾನ್ ತಲಪಾಡಿ

contributor

Similar News