ನಿಝಾಮ್ ಮ್ಯೂಸಿಯಂನಿಂದ ಕದ್ದ ಅಮೂಲ್ಯ ವಸ್ತುಗಳು ಪತ್ತೆ: ಇಬ್ಬರ ಬಂಧನ

Update: 2018-09-11 16:31 GMT

ಹೈದರಾಬಾದ್, ಸೆ.11: ಬಿಗಿ ಭದ್ರತೆಯ ನಿಝಾಮ್ ಮ್ಯೂಸಿಯಂನಿಂದ ಕಳವಾಗಿದ್ದ ಚಿನ್ನದ ಟಿಫಿನ್ ಬಾಕ್ಸ್ ಸೇರಿದಂತೆ ಚಾರಿತ್ರಿಕ ಮೌಲ್ಯದ ಚಿನ್ನಾಭರಣಗಳನ್ನು ಸೋಮವಾರ ಪತ್ತೆಹಚ್ಚಲಾಗಿದ್ದು ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಸೆಂಟ್ರಿಂಗ್ ಕಾರ್ಯ ನಿರ್ವಹಿಸುತ್ತಿದ್ದ ಮುಹಮ್ಮದ್ ಘೌಸ್ ಪಾಷಾ ಅಲಿಯಾಸ್ ಖೂನಿ ಘೌಸ್ (23 ವರ್ಷ) ಮತ್ತು ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಮುಹಮ್ಮದ್ ಮುಬೀನ್ (24 ವರ್ಷ) ಎಂದು ಗುರುತಿಸಲಾಗಿದೆ. ಸಂಬಂಧಿಗಳಾಗಿರುವ ಇಬ್ಬರೂ ರಾಜೇಂದ್ರನಗರದ ನಿವಾಸಿಗಳು. ಬಾಲ್ಯಕಾಲದಿಂದಲೂ ಸ್ನೇಹಿತರಾಗಿರುವ ಇವರು ಕಳ್ಳತನ ಮಾಡುವ ಹವ್ಯಾಸವನ್ನೂ ಬೆಳೆಸಿಕೊಂಡಿದ್ದರು. ಘಟನೆ ನಡೆದ 45 ದಿನದ ಹಿಂದೆ ಮುಬೀನ್ ವೀಕ್ಷಕರ ಗುಂಪಿನಲ್ಲಿ ಸೇರಿಕೊಂಡು ಮ್ಯೂಸಿಯಂ ಪ್ರವೇಶಿಸಿ ಒಳಭಾಗದಲ್ಲಿರುವ ಭದ್ರತಾ ವ್ಯವಸ್ಥೆಯ ಲೋಪವನ್ನು ಗಮನಿಸಿದ್ದ. ಬಳಿಕ ತನ್ನ ಯೋಜನೆಯನ್ನು ಘೌಸ್‌ಗೆ ತಿಳಿಸಿದ್ದ. ಕಳವು ನಡೆದ ನಾಲ್ಕೈದು ದಿನದ ಹಿಂದೆ ಮ್ಯೂಸಿಯಂಗೆ ಹೋಗಿದ್ದ ಇವರು ಅಲ್ಲಿ ವೆಂಟಿಲೇಟರ್ ಇರುವ ಸ್ಥಳದಲ್ಲಿ ಗುರುತು ಹಾಕಿ ಬಂದಿದ್ದಾರೆ. ನಿರ್ಧರಿತ ದಿನದಂದು 10 ಮೀಟರ್ ಹಗ್ಗದ ನೆರವಿನಿಂದ ಮ್ಯೂಸಿಯಂನ ಪ್ರಥಮ ಮಹಡಿ ಏರಿದ ಕಳ್ಳರು ಅಲ್ಲಿದ್ದ ವೆಂಟಿಲೇಟರ್‌ನ ಕಬ್ಬಿಣದ ಗ್ರಿಲ್‌ಗಳನ್ನು ತುಂಡು ಮಾಡಿ ಒಳನುಗ್ಗಿದ್ದಾರೆ. ಮುಬೀನ್ ಹಗ್ಗ ಹಿಡಿದುಕೊಂಡಿದ್ದರೆ ಘೌಸ್ ಮ್ಯೂಸಿಯಂನ ಒಳನುಗ್ಗಿದ್ದಾನೆ. ವಾರ್ಡ್‌ರೋಬ್‌ನ ಬೀಗ ಮುರಿದು ಅಮೂಲ್ಯ ವಸ್ತುಗಳನ್ನು ಕದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ತಮ್ಮ ಬಟ್ಟೆ ಬದಲಿಸಿಕೊಂಡು ಆ ಪರಿಸರದಲ್ಲಿ ಅಲೆದಾಡಿದ್ದಾರೆ. ನಂತರ ಹೆದ್ದಾರಿಯಾಗಿ ಝಹೀರಾಬಾದ್ ಕಡೆ ಸಾಗಿ ಬಳಿಕ ಅಡ್ಡ ರಸ್ತೆಯ ಮೂಲಕ ಹಿಂತಿರುಗಿದ್ದಾರೆ. ಕಳವು ನಡೆಸಿದವರು ನಗರವನ್ನು ಬಿಟ್ಟು ತೆರಳಿದ್ದಾರೆ ಎಂದು ಸಿಸಿಟಿವಿಯಲ್ಲಿ ತೋರಿಸಿಕೊಟ್ಟು ಪೊಲೀಸರ ಹಾದಿ ತಪ್ಪಿಸುವ ಉದ್ದೇಶ ಇವರದಾಗಿತ್ತು.

ನಂತರ ಕಳವು ಮಾಡಿದ ವಸ್ತುಗಳಲ್ಲಿ ಚಿನ್ನದ ಚಮಚವೊಂದನ್ನು ಸ್ಯಾಂಪಲ್ ಆಗಿ ತೋರಿಸಿ, ಕಳವು ಮಾಡಿರುವ ಚಿನ್ನದ ವಸ್ತುಗಳನ್ನು ವಿದೇಶದ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಮುಂಬೈಗೆ ವಾಪಾಸು ಬಂದಿದ್ದಾರೆ. ಆದರೆ ಸರಿಯಾದ ಡೀಲ್ ಕುದುರದ ಕಾರಣ, ಹೈದರಾಬಾದ್‌ಗೆ ಮರಳಿ ವ್ಯವಹಾರ ಕುದುರಿಸಲು ಸಮಯ ಕಾಯುತ್ತಿದ್ದರು. ಈ ಮಧ್ಯೆ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಮುಬೀನ್ ಎಂಬಾತ ಕೆಲ ದಿನಗಳಿಂದ ನಾಪತ್ತೆಯಾಗಿರುವುದು ತಿಳಿದು ಬಂದಿದೆ. ಅದರ ಜಾಡು ಹಿಡಿದು ತನಿಖೆ ನಡೆಸಿದಾಗ ಆರೋಪಿಗಳು ಪತ್ತೆಯಾಗಿದ್ದಾರೆ.

ಮ್ಯೂಸಿಯಂನಲ್ಲಿರುವ ಪವಿತ್ರ ಗ್ರಂಥವನ್ನೂ ತಮ್ಮೊಂದಿಗೆ ಕೊಂಡೊಯ್ಯಲು ಇವರು ಬಯಸಿದ್ದರು. ಆದರೆ ಆ ವೇಳೆಗಾಗಲೇ ಸಮೀಪದ ಮಸೀದಿಯಿಂದ ಸಂಜೆಯ ಪ್ರಾರ್ಥನೆಯ ಕರೆ ಕೇಳಿಬಂದಾಗ ತಮ್ಮ ನಿರ್ಧಾರವನ್ನು ಕೈಬಿಟ್ಟಿದ್ದರು.

ಇನ್ನೊಂದು ಸ್ವಾರಸ್ಯದ ವಿಷಯವೆಂದರೆ, ಕೋಟ್ಯಾಂತರ ಬೆಲೆ ಬಾಳುವ ಈ ಟಿಫಿನ್ ಬಾಕ್ಸ್‌ನಲ್ಲಿ ನಿಝಾಮರು ಊಟ ಮಾಡುತ್ತಿದ್ದ ಬಗ್ಗೆ ಮಾಹಿತಿಯಿಲ್ಲ, ಆದರೆ ಕಳವು ಮಾಡಿರುವವರಲ್ಲಿ ಒಬ್ಬಾತ ದಿನಾ ಇದರಲ್ಲೇ ಆಹಾರ ಸ್ವೀಕರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

  ಹಳೆ ಹೈದರಾಬಾದ್ ನಗರದಲ್ಲಿರುವ ಪುರಾನಿ ಹವೇಲಿಯಲ್ಲಿರುವ ಮ್ಯೂಸಿಯಂಗೆ ಸೆ.2ರ ರಾತ್ರಿ ನುಗ್ಗಿದ ಕಳ್ಳರು ಎರಡು ಕಿ.ಗ್ರಾಂ. ತೂಕದ ಚಿನ್ನದ ಟಿಫಿನ್ ಬಾಕ್ಸ್, ಕಪ್, ಸಾಸರ್, ವಜ್ರಖಚಿತ ಚಮಚ, ವಜ್ರಗಳು, ಮುತ್ತುಗಳನ್ನು ಕಳವು ಮಾಡಿದ್ದರು.

1911ರಿಂದ 1948ರವರೆಗೆ(ಹೈದರಾಬಾದ್ ಪ್ರಾಂತ್ಯ ಭಾರತದೊಂದಿಗೆ ವಿಲೀನವಾಗುವವರೆಗೆ) ಹೈದರಾಬಾದ್‌ನಲ್ಲಿ ಆಡಳಿತ ನಡೆಸುತ್ತಿದ್ದ 6ನೇ ನಿಝಾಮ ಮೀರ್ ಉಸ್ಮಾನ್ ಅಲಿ ಖಾನ್ ಅವರ ಕುಟುಂಬದವರು ಬಳಸುತ್ತಿದ್ದ ಚಿನ್ನದ ಟಿಫಿನ್ ಬಾಕ್ಸ್, ಕಪ್, ಸಾಸರ್, ವಜ್ರಖಚಿತ ಚಮಚ ಹಾಗೂ ಇತರ ಅಮೂಲ್ಯ ವಸ್ತುಗಳನ್ನು ಇಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News