ಪ್ರತಿಷ್ಠಿತರ ವಂಚನೆ ಹಗರಣ: ಪ್ರಧಾನಿ ಮೋದಿ ನಿರ್ಲಕ್ಷ್ಯ; ರಘುರಾಮ್ ರಾಜನ್

Update: 2018-09-11 18:06 GMT

-ಕೆಟ್ಟ ಸಾಲಗಳ ಬಗ್ಗೆ ಸಂಸದೀಯ ಸಮಿತಿಗೆ ವರದಿ ಸಲ್ಲಿಸಿದ ರಾಜನ್.

-ಬ್ಯಾಂಕರ್‌ಗಳ ಆಶಾವಾದ, ಸರಕಾರದ ನಿರ್ಲಕ್ಷ, ನಿಧಾನ ಗತಿ ಬೆಳವಣೆಗೆಯ ಆರೋಪ.

-ಪ್ರತಿಕ್ರಿಯಿಸುವಲ್ಲಿ ಯುಪಿಎ ಹಾಗೂ ಎನ್‌ಡಿಎ ಸರಕಾರ ನಿಧಾನ.

ಹೊಸದಿಲ್ಲಿ, ಸೆ. 11: ಪ್ರತಿಷ್ಠಿತ ವ್ಯಕ್ತಿಗಳ ವಂಚನೆ ಪ್ರಕರಣಗಳ ಪಟ್ಟಿಯನ್ನು ಪ್ರಧಾನ ಮಂತ್ರಿ ಅವರ ಕಚೇರಿಗೆ ಕಳುಹಿಸಿ ಕೊಟ್ಟಿದ್ದೇನೆ. ಆದರೆ, ಅದರ ಬಗ್ಗೆ ಯಾವುದೇ ಪ್ರಗತಿಯಾದ ಬಗ್ಗೆ ತಿಳಿದಿಲ್ಲ ಎಂದು ಆರ್‌ಬಿಐಯ ಮಾಜಿ ಗವರ್ನರ್ ರಘುರಾಮ್ ರಾಜನ್ ಸಂಸದೀಯ ಸಮಿತಿಗೆ ಸಲ್ಲಿಸಿದ ವರದಿಯಲ್ಲಿ ಹೇಳಿದ್ದಾರೆ.

ಬ್ಯಾಂಕರ್‌ಗಳ ಅತಿಯಾದ ಆಶಾವಾದ, ಸರಕಾರದ ನಿರ್ಲಕ್ಷ ಹಾಗೂ ನಿಧಾನಗತಿಯ ಬೆಳವಣಿಗೆ ಅಂಶಗಳು ಕೆಟ್ಟ ಸಾಲಗಳು ಹೆಚ್ಚಲು ಕಾರಣ ಎಂದು ರಘುರಾಮ ರಾಜನ್ ಬಿಜೆಪಿ ನಾಯಕ ಮುರಳಿ ಮನೋಹರ ಜೋಷಿ ನಾಯಕತ್ವದ ಸಮಿತಿಗೆ ಸಲ್ಲಿಸಿದ ವರದಿಯಲ್ಲಿ ಹೇಳಿದ್ದಾರೆ. ಸಾರ್ವಜನಿಕ ವಲಯದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ವಂಚನೆಗಳ ಪ್ರಮಾಣ ಹೆಚ್ಚುತ್ತಿದೆ. ಆದರೆ, ಅನುತ್ಪಾದಕ ಆಸ್ತಿಗಳಿಗೆ ಹೋಲಿಸಿದಾಗ ಆ ಪ್ರಮಾಣ ತುಂಬಾ ಕಡಿಮೆ ಎಂದು ಅವರು ತಿಳಿಸಿದ್ದಾರೆ.

ತನಿಖಾ ಸಂಸ್ಥೆಗೆ ವಂಚನೆ ಪ್ರಕರಣಗಳ ಬಗ್ಗೆ ಶೀಘ್ರ ವರದಿ ಮಾಡಲು ತಾನು ಗವರ್ನರ್ ಆಗಿದ್ದಾಗ ಆರ್‌ಬಿಐ ವಂಚನೆ ನಿಗಾ ಸೆಲ್ ಆರಂಭಿಸಿತ್ತು. ಪ್ರತಿಷ್ಠತ ವಂಚನೆ ಪ್ರಕರಣಗಳ ಪಟ್ಟಿಯನ್ನು ತಾನು ಪ್ರಧಾನಿ ಮಂತ್ರಿ ಅವರ ಕಚೇರಿಗೆ ಕಳುಹಿಸಿದ್ದೆ. ಇದರಲ್ಲಿ ಕನಿಷ್ಠ ಒಬ್ಬರು ಅಥವಾ ಇಬ್ಬರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಲು ಸಮನ್ವಯ ಕ್ರಮಗಳಿಗೆ ಆಗ್ರಹಿಸಿದ್ದೆ. ಆದರೆ, ಈ ದಿಶೆಯಲ್ಲಿ ಪ್ರಗತಿಯಾದ ಬಗ್ಗೆ ನನಗೆ ಇದುವರೆಗೆ ತಿಳಿದಿಲ್ಲ. ಇದು ತುರ್ತಾಗಿ ಪರಿಹರಿಸಬೇಕಾದ ವಿಚಾರ ಎಂದು ರಾಜನ್ ವರದಿಯಲ್ಲಿ ಹೇಳಿದ್ದಾರೆ. ದುರಾದೃಷ್ಟವೆಂದರೆ, ಒಬ್ಬನೇ ಒಬ್ಬ ಪ್ರತಿಷ್ಠಿತ ವಂಚಕನ ವಿರುದ್ಧ ಕಾನೂನು ಕ್ರಮ ಜರುಗಿಸಲು ವ್ಯವಸ್ಥೆ ವಿಫಲವಾಗಿದೆ. ಇದು ವಂಚನೆಗೆ ಪ್ರೋತ್ಸಾಹ ನೀಡಿದಂತಾಗಿದೆ ಎಂದು ಅವರು ಹೇಳಿದ್ದಾರೆ.

ವಂಚನೆ ತಡೆಯಲು ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಕಾರ್ಯನಿರ್ವಹಣೆಯನ್ನು ಸುಧಾರಿಸಿ ಹಾಗೂ ಸರಕಾರದಿಂದ ಪ್ರತ್ಯೇಕಿಸಿ ಎಂದು ಅವರು ಸಲಹೆ ನೀಡಿದ್ದಾರೆ. ಕೆಟ್ಟ ಸಾಲಗಳು ದೊಡ್ಡ ಪ್ರಮಾಣದಲ್ಲಿ ಉತ್ಪತ್ತಿಯಾದುದು 2006-2008ರ ಅವಧಿಯಲ್ಲಿ. ಈ ಸಂದರ್ಭ ಆರ್ಥಿಕ ಬೆಳವಣಿಗೆ ಉತ್ತಮವಾಗಿತ್ತು. ವಿದ್ಯುತ್ ಸ್ಥಾವರದಂತಹ ಈ ಹಿಂದಿನ ಯೋಜನೆಗಳು ಸಮಯದ ಒಳಗೆ ಹಾಗೂ ಬಜೆಟ್‌ನಲ್ಲಿ ಪೂರ್ಣಗೊಂಡಿತ್ತು ಎಂದು ರಘುರಾಮ ರಾಜನ್ ವರದಿಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News