ಆಶಾ, ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಏರಿಕೆ: ಪ್ರಧಾನಿ ಮೋದಿ ಘೋಷಣೆ

Update: 2018-09-11 17:58 GMT

ಹೊಸದಿಲ್ಲಿ, ಸೆ. 11: ಸರಕಾರದ ಮಾನ್ಯತೆ ಪಡೆದ ಆಶಾ (ಸಾಮಾಜಿಕ ಆರೋಗ್ಯ ಕಾರ್ಯಕರ್ತರು) ಯೋಜನೆ ಹಾಗೂ ಅಂಗನವಾಡಿ ಯೋಜನೆಯ ಕಾರ್ಯಕರ್ತೆಯರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಗೌರವಧನ ಏರಿಕೆ ಮಾಡಿ ಘೋಷಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ಮುಂದಿನ ತಿಂಗಳಿಂದ ಏರಿಕೆ ಗೌರವ ಧನ ಪಡೆಯಲಿದ್ದಾರೆ ಎಂದು ಪ್ರಧಾನಿ ಅವರು ಹೇಳಿದ್ದಾರೆ.

ಲಕ್ಷಕ್ಕೂ ಅಧಿಕ ಆಶಾ, ಅಂಗನವಾಡಿ ಹಾಗೂ ಎಎನ್‌ಎಂ ಕಾರ್ಯಕರ್ತರೊಂದಿಗೆ ಮಂಗಳವಾರ ವೀಡಿಯೊ ಸಂವಹನ ನಡೆಸಿದ ಸಂದರ್ಭ ಮೋದಿ ಅವರು ಈ ಘೋಷಣೆ ಮಾಡಿದರು. ಗೌರವ ಧನ ಏರಿಕೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಬಹು ಕಾಲದ ಬೇಡಿಕೆ. ಈ ತಿಂಗಳು ದಿಲ್ಲಿಯಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿ ಕೂಡ ಅವರು ಪಾಲ್ಗೊಂಡು ಗೌರವ ಧನ ಏರಿಕೆ ಮಾಡುವಂತೆ ಆಗ್ರಹಿಸಿದ್ದರು. ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಸರಕಾರ ನೀಡುತ್ತಿರುವ ದೈನಂದಿನ ಪ್ರೋತ್ಸಾಹ ಧನ ದ್ವಿಗುಣಗೊಳಿಸಿ ಪ್ರಧಾನಿ ಅವರು ಘೋಷಿಸಿದ್ದಾರೆ.

ಇದಲ್ಲದೆ ಎಲ್ಲ ಆಶಾ ಕಾರ್ಯಕರ್ತೆಯರು ಹಾಗೂ ಅವರ ಸಹಾಯಕರಿಗೆ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬೀಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಬೀಮಾ ಯೋಜನೆ ಅಡಿಯಲ್ಲಿ ಉಚಿತ ವಿಮೆ ನೀಡಲಾಗುವುದು ಎಂದು ಕೂಡ ಪ್ರಧಾನಿ ಅವರು ಹೇಳಿದ್ದಾರೆ. ಕಾಮನ್ ಅಪ್ಲಿಕೇಶನ್ ಸಾಫ್ಟವೇರ್ (ಐಸಿಡಿಎಸ್-ಸಿಎಎಸ್)ನಂತಹ ತಂತ್ರಗಳನ್ನು ಬಳಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರಿಗೆ ಹೆಚ್ಚುವರಿ ಪ್ರೋತ್ಸಾಹ ಧನ ನೀಡುವುದಾಗಿ ಪ್ರಧಾನಿ ತಿಳಿಸಿದ್ದಾರೆ. ಕಾರ್ಯನಿರ್ವಹಣೆಯ ಸಾಮರ್ಥ್ಯ ಆಧರಿಸಿ ಈ ಪ್ರೋತ್ಸಾಹ ಧನ 250 ರೂ. 500 ರೂ. ವರೆಗೆ ಇರಲಿದೆ. ಬಾಕ್ಸ್ ಅಂಗನವಾಡಿ ಕಾರ್ಯಕರ್ತರ ಗೌರವ ಧನ ಮುಂದಿನ ತಿಂಗಳಿಂದ ಏರಿಕೆಯಾಗಲಿದೆ. ಇದುವರೆಗೆ 3,000 ರೂ. ಪಡೆಯುತ್ತಿದ್ದವರು ಇನ್ನು ಮುಂದೆ 4,500 ರೂ. ಪಡೆಯಲಿದ್ದಾರೆ. ಅದೇ ರೀತಿ 2,200 ರೂ. ಪಡೆಯುತ್ತಿದ್ದವರು 3,500 ರೂ. ಪಡೆಯಲಿದ್ದಾರೆ. ಅಂಗನಾವಾಡಿ ಸಹಾಯಕರ ಗೌರವ ಧನವನ್ನು ಕೂಡ ಏರಿಕೆ ಮಾಡಲಾಗಿದೆ. ಅವರ ಗೌರವ ಧನವನ್ನು 1,500ರಿಂದ 2,250 ರೂ.ಗೆ ಏರಿಕೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News