ವ್ಯಂಗ್ಯಚಿತ್ರ ಮೂಲಕ ಸೆರೆನಾಗೆ ಜನಾಂಗೀಯ ನಿಂದನೆ

Update: 2018-09-11 18:29 GMT

ನ್ಯೂಯಾರ್ಕ್, ಸೆ.11: ವ್ಯಂಗ್ಯಚಿತ್ರದ ಮೂಲಕ ಅಮೆರಿಕದ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್‌ಗೆ ಜನಾಂಗೀಯ ನಿಂದನೆ ಮಾಡಿದ ಆಸ್ಟ್ರೇಲಿಯದ ವ್ಯಂಗ್ಯಚಿತ್ರಕಾರನಿಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ತರಾಟೆಗೆ ತೆಗೆದುಕೊಳ್ಳಲಾಗಿದೆ.

 ಕಾರ್ಟೂನಿಸ್ಟ್ ಮಾರ್ಕ್ ನೈಟ್ಸ್ ರಚಿಸಿರುವ ವ್ಯಂಗ್ಯಚಿತ್ರ ‘ಮೆಲ್ಬೋರ್ನ್ ಹೆರಾಲ್ಡ್ ಸನ್’ ನ್ಯೂಸ್ ಪೇಪರ್‌ನಲ್ಲಿ ಪ್ರಕಟವಾಗಿತ್ತು. ಇದರಲ್ಲಿ ಸೆರೆನಾರ ಮುಖವನ್ನು ಆಫ್ರಿಕ ಜನತೆಯನ್ನು ಹೋಲುವಂತೆ ಚಿತ್ರಿಸಿದ್ದಲ್ಲದೆ ಟೆನಿಸ್ ಅಂಗಣದಲ್ಲಿ ರಾಕೆಟ್‌ನ್ನು ಎಸೆದು ರಂಪಾಟ ನಡೆಸಿದ್ದ ಚಿತ್ರ ಬಿಡಿಸಲಾಗಿದೆ. ಮಾತ್ರವಲ್ಲ ಯುಎಸ್ ಓಪನ್ ಪ್ರಶಸ್ತಿ ವಿಜೇತೆ ಜಪಾನ್‌ನ ಆಟಗಾರ್ತಿ ನಯೋಮಿ ಒಸಾಕಾ ಅವರು ಅಂಪೈರ್ ಬಳಿ ‘ಆಕೆಗೆ ಗೆಲ್ಲಲು ಬಿಡಬಾರದೆ’’ಎಂದು ಕೇಳುತ್ತಿರುವಂತೆ ವ್ಯಂಗ್ಯಚಿತ್ರವನ್ನು ಬಿಡಿಸಲಾಗಿತ್ತು.

ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದ್ದ ವ್ಯಂಗ್ಯ ಚಿತ್ರವನ್ನು ತಕ್ಷಣವೇ ಅಳಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸೆರೆನಾರ ಜನಾಂಗೀಯ ನಿಂದನೆ ಮಾಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಇದೊಂದು ‘ಅಪರಾಧ’ಎಂದು ಟೀಕಿಸಲಾಗಿದೆ.

36ರ ಹರೆಯದ ಸೆರೆನಾ ಯುಎಸ್ ಓಪನ್ ಫೈನಲ್‌ನಲ್ಲಿ ಅಂಪೈರ್ ಕಾರ್ಲೊಸ್ ರಾಮೋಸ್ ಪೆನಾಲ್ಟಿ ಪಾಯಿಂಟ್ ವಿಧಿಸಿದ್ದಕ್ಕೆ ಅಂಪೈರ್‌ರನ್ನು ಮೋಸಗಾರ ಎಂದು ನಿಂದಿಸಿದ್ದರು. ರಾಕೆಟ್‌ನ್ನು ಬಿಸಾಡಿ ತನ್ನ ಆಕ್ರೋಶ ವ್ಯಕ್ತಪಡಿಸಿದ್ದರು. ಮೈದಾನದಲ್ಲಿ ರಂಪಾಟ ನಡೆಸಿ ನೀತಿ ಸಂಹಿತೆ ಉಲ್ಲಂಘಿಸಿದ್ದ ಸೆರನಾಗೆ 17,000 ಡಾಲರ್ ದಂಡವನ್ನು ವಿಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News