ಟ್ರಂಪ್ ಭದ್ರತಾ ತಂಡದ ಭಾಗವಾದ ಮೊದಲ ಸಿಖ್ ವ್ಯಕ್ತಿ ಅಂಶದೀಪ್

Update: 2018-09-12 09:51 GMT

ಶಿವಪುರಿ, ಸೆ. 12: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭದ್ರತಾ ಸಿಬ್ಬಂದಿಯ ಭಾಗವಾಗಿ ನೇಮಕಗೊಂಡ ಮೊದಲ ಸಿಖ್ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಲುಧಿಯಾನ ಮೂಲದ ಅಂಶದೀಪ್ ಸಿಂಗ್ ಭಾಟಿಯಾ ಪಾತ್ರರಾಗಿದ್ದಾರೆ. ಕಠಿಣ ತರಬೇತಿ ಅವಧಿಯ ಬಳಿಕ ಕಳೆದ ವಾರ ಅವರು ಟ್ರಂಪ್ ಭದ್ರತಾ ಸಿಬ್ಬಂದಿಗಳ ತಂಡದಲ್ಲಿ ಒಬ್ಬರಾಗಿದ್ದಾರೆ.

1984ರ ಸಿಖ್ ವಿರೋಧಿ ದಂಗೆಗಳ ಸಂದರ್ಭ ಅವರ ಕುಟುಂಬ ಕಾನ್ಪುರದಿಂದ ಲುಧಿಯಾನಕ್ಕೆ ತನ್ನ ವಾಸ ಬದಲಾಯಿಸಿತ್ತು. ಕಾನ್ಪುರದ ಕೆಡಿಎ ಕಾಲನಿಯಲ್ಲಿ ಉದ್ರಿಕ್ತ ಗುಂಪು  ಅವರ  ಮನೆಗೆ ದಾಳಿ ನಡೆಸಿದಾಗ ಅವರ ಇಬ್ಬರು ಸಂಬಂಧಿಗಳು ಬಲಿಯಾಗಿದ್ದರು. ಈ ದಾಳಿಯಲ್ಲಿ ಅವರ ತಂದೆ ದೇವೇಂದ್ರ ಸಿಂಗ್ ಕೂಡ ಗಾಯಾಳುವಾಗಿದ್ದರಲ್ಲದೆ ಅವರ ದೇಹದೊಳಕ್ಕೆ ಮೂರು ಗುಂಡುಗಳು ಸೇರಿಕೊಂಡಿದ್ದವು. ಕುಟುಂಬದ ಸದಸ್ಯರೊಬ್ಬರ ವಿವಾಹ ಸಂಬಂಧಿ ಕಾರ್ಯದಲ್ಲಿ ಅವರು ನಿರತರಾಗಿದ್ದಾಗ ಈ ದಾಳಿ ನಡೆದಿತ್ತು.

ಅಂಶದೀಪ್ ಅವರ  ತಾತ ಅಮ್ರೀಕ್ ಸಿಂಗ್ ಭಾಟಿಯಾ ಪಂಜಾಬ್ ಸಿಂಧ್ ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿದ್ದರು. ಆವರ ತಂದೆ ಕಾನ್ಪುರದಲ್ಲಿ ಫಾರ್ಮಾ ಉದ್ಯಮಿಯಾಗಿದ್ದವರು ಮುಂದೆ ಲುಧಿಯಾನದಲ್ಲಿ ವಿವಾಹವಾದ ನಂತರ ಕುಟುಂಬ ಸಮೇತ 2000ರಲ್ಲಿ ಅಮೆರಿಕಾಗೆ ತೆರಳಿದ್ದರು. ಆಗ ಅಂಶದೀಪ್ ಗೆ 10 ವರ್ಷ ವಯಸ್ಸಾಗಿತ್ತು.

ಅಧ್ಯಕ್ಷರ ಅಂಗ ರಕ್ಷಕರ ಭಾಗವಾಗಬೇಕೆಂದು ಅವರು ಬಯಸಿದಾಗ ತಮ್ಮ ಲುಕ್ ಗಳನ್ನು ಬದಲಾಯಿಸಬೇಕೆಂದು ಅವರಿಗೆ ಹೇಳಲಾಗಿತ್ತು. ಇದರ ವಿರುದ್ಧ ನ್ಯಾಯಾಲಯದ ಮೊರೆ ಹೋದ ಅವರು ತಮ್ಮ ಪರವಾಗಿ ತೀರ್ಪು ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News